More

    ಖಾಸಗಿ ಕೊಳವೆಬಾವಿ, ಟ್ಯಾಂಕರ್ ಗುರುತಿಸಿ

    ಚಿತ್ರದುರ್ಗ: ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ ಕರ್ತವ್ಯ ಅಧಿಕಾರಿಗಳದ್ದಾಗಿದೆ. ಮುಂಚಿತವಾಗಿಯೇ ಖಾಸಗಿ ಕೊಳವೆಬಾವಿ, ಟ್ಯಾಂಕರ್‌ಗಳನ್ನು ಗುರುತಿಸಿ ಅಗತ್ಯ ಬಿದ್ದಾಗ ಸೇವೆಗೆ ಪಡೆಯುವಂತೆ ತಹಸೀಲ್ದಾರ್ ಡಾ.ನಾಗವೇಣಿ ಸೂಚಿಸಿದರು.

    ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು ಪೂರೈಕೆ ಕುರಿತು ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿಯನ್ನು ಪಿಡಿಒಗಳು ಸಿದ್ಧಪಡಿಸಬೇಕು. ಅಂಕಿ-ಅಂಶಗಳ ಸಮೇತ ಎದುರಿಸಲು ಸನ್ನದ್ಧರಾಗಬೇಕು ಎಂದು ತಾಕೀತು ಮಾಡಿದರು.

    ಕುಡಿಯುವ ನೀರಿನ ಕಾಮಗಾರಿಗೆ ನೀತಿಸಂಹಿತೆ ಅಡ್ಡಿಯಾಗದು. ಅನಿವಾರ್ಯವಿರುವೆಡೆ ಹೊಸ ಕೊಳವೆಬಾವಿ ಕೊರೆಸಿ, ಪೈಪ್‌ಲೈನ್ ಅಳವಡಿಸಿ, ನೀರು ಪೂರೈಸಲು ವಿಸ್ತೃತ ಯೋಜನಾ ವರದಿ ನೀಡಬೇಕು. ಇದಕ್ಕೆ ಪಿಡಿಒಗಳು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್‌ಗಳ ಸಹಾಯ ಪಡೆದುಕೊಳ್ಳಬೇಕು ಎಂದು ಸೂಚಿಸಿದರು.

    ಹಲವು ಗ್ರಾಮಗಳಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಎಷ್ಟು ಬಾರಿ ಎಂಬುದನ್ನು ದಾಖಲಿಸಬೇಕು. ಕೊಳವೆಬಾವಿಗಳಲ್ಲಿ ದೊರಕುವ ನೀರಿನ ಪ್ರಮಾಣದ ಕುರಿತು ವರದಿ ನೀಡಬೇಕು ಎಂದರು.

    ಈಗಾಗಲೇ ಟ್ಯಾಂಕರ್ ಮೂಲಕ ಪೂರೈಸಲು ಟೆಂಡರ್ ನೀಡಲಾಗಿದೆ. ನಿಮ್ಮ ವ್ಯಾಪ್ತಿಯ ಕಂದಾಯ ನಿರೀಕ್ಷಕರಿಂದ ಗ್ರಾಮಗಳಿಗೆ ಪಡೆದುಕೊಳ್ಳಿ ಎಂದು ಹೇಳಿದರು.

    ತಾಪಂ ಇಒ ಅನಂತರಾಜು ಮಾತನಾಡಿ, ಪ್ರಸ್ತುತ ಬರ ಪರಿಸ್ಥಿತಿ ಉಂಟಾಗಿದೆ. ಕೆಲಸ ದೊರಕದೆ ಯಾರು ಸಹ ಗುಳೆ ಹೋಗದಂತೆ ನೋಡಿಕೊಳ್ಳಬೇಕು. ನರೇಗಾದಡಿ ಗ್ರಾಮದಲ್ಲಿಯೇ ಉದ್ಯೋಗ ಸೃಜಿಸಿ, ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಾರದು ಎಂದು ಸೂಚಿಸಿದರು.

    ತಾಲೂಕಿನ 6 ಗ್ರಾಪಂ ವ್ಯಾಪ್ತಿಯ 9 ಗ್ರಾಮಗಳಿಗೆ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ. 8 ಗ್ರಾಪಂನ 16 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿ ಬಾಡಿಗೆ ಪಡೆದು ನೀರು ಒದಗಿಸಲಾಗುತ್ತಿದೆ ಎಂದರು.

    ಮುಂಬರುವ ದಿನಗಳಲ್ಲಿ 27 ಗ್ರಾಪಂ ವ್ಯಾಪ್ತಿಯ 59 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದು. ಆದ್ದರಿಂದ ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಇಂಜಿನಿಯರ್ ಶಿವಮೂರ್ತಿ, ಆರ್‌ಡಿಪಿಆರ್ ಸಹಾಯಕ ನಿರ್ದೇಶಕಿ ರೂಪಾಕುಮಾರಿ, ತಾಪಂ ವ್ಯವಸ್ಥಾಪಕ ತಿಪ್ಪೇಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts