More

    ಚಿತಾಗಾರದಲ್ಲಿ ಆರದ ಬೆಂಕಿ!

    ಶಿರಸಿ: ಕಳೆದೆರಡು ತಿಂಗಳಲ್ಲಿ ಇಲ್ಲಿನ ವಿದ್ಯಾನಗರ ರುದ್ರಭೂಮಿಯ ಚಿತೆಗಳ ಬೆಂಕಿ ಆರಿಲ್ಲ!
    ‘ಚಿತಾಗಾರದಲ್ಲಿ ಸಾವಿನ ಧಗೆ ಇಳಿಯುತ್ತಿಲ್ಲ. ಸ್ಮಶಾನದಿಂದ ಹೊರ ನಡೆದು ಮನೆ ಸೇರಿದರೂ ಮೈ ಬೆವೆಯುತ್ತಿರುತ್ತದೆ…’ ಎನ್ನುತ್ತ ಶವ ಸಂಸ್ಕಾರ ಮಾಡುವ ಗಣಪತಿ ಮಡಿವಾಳ ಮೌನವಾದರು.
    ಹೌದು! ಕರೊನಾ 2ನೇ ಅಲೆಯ ರಭಸ ನಗರದಲ್ಲಿ ಅಬ್ಬರಿಸಿದ ಕಾರಣಕ್ಕೆ ವಿದ್ಯಾನಗರ ರುದ್ರಭೂಮಿಯೊಂದರಲ್ಲೇ ಎರಡು ತಿಂಗಳಿನಲ್ಲಿ 80ಕ್ಕೂ ಹೆಚ್ಚು ಕರೊನಾ ಸೋಂಕಿತರ ಶವ ಸೇರಿ 150ಕ್ಕೂ ಹೆಚ್ಚು ಶವಗಳ ಸಂಸ್ಕಾರ ಈವರೆಗೆ ಮಾಡಲಾಗಿದೆ. ಕರೊನಾ ವ್ಯಾಪಕವಾದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ರುದ್ರಭೂಮಿಯೆದುರು ಶವಗಳನ್ನಿಟ್ಟು ಕಾದು ಸಂಸ್ಕಾರ ಮಾಡಿದವರೂ ಇದ್ದಾರೆ. ಈಗಲೂ ನಿತ್ಯ ಶವ ಸಂಸ್ಕಾರ ಕಾರ್ಯ ನಡೆದಿದೆ. ರುದ್ರಭೂಮಿಯ ಸುತ್ತಮುತ್ತಲಿನ ನಿವಾಸಿಗಳಿಗೆ ಸಾವು ನಿತ್ಯದ ಮಾತಾದರೂ, ಕರೊನಾ ಭೀತಿ ಆಳವಾಗಿ ಬೇರೂರಿದೆ. ಆದರೆ, ಅಲ್ಲಿನ ನಿವಾಸಿಗಳ ಹೊರತಾಗಿ ಉಳಿದ ಸಾರ್ವಜನಿಕರಿಗೆ ಕರೊನಾದೆಡೆ ನಿರ್ಲಕ್ಷ್ಯ ಮುಂದುವರಿದಿದೆ.
    ಪಾಳಿಗಾಗಿ ಕಾಯುವುದು: ಶವ ಸುಟ್ಟ ನಂತರ ಅದರ ಬೂದಿ ತೆಗೆದು ಇನ್ನೊಂದು ಶವ ಸಂಸ್ಕಾರ ಮಾಡಲು ಕನಿಷ್ಠ 3 ಗಂಟೆ ಸಮಯ ಬೇಕಾಗುತ್ತದೆ. ಚಿತಾಗಾರದಲ್ಲಿನ ಬೂದಿಯ ಬಿಸಿ ಆರುವವರೆಗಾದರೂ ಕಾಯಬೇಕು. ಆದರೆ, ಕರೊನಾ ಅಟ್ಟಹಾಸ ಎಷ್ಟಿದೆಯೆಂದರೆ, ಬಿಸಿಯಾರದ ಬೂದಿಯನ್ನು ಪ್ರತ್ಯೇಕ ಟ್ರೇ ಮಾಡಿಕೊಂಡು ತ್ವರಿತವಾಗಿ ತೆಗೆದು ಮತ್ತೊಂದು ಶವ ಸುಡಲು ವ್ಯವಸ್ಥೆ ಮಾಡಲಾಗುತ್ತಿದೆ.
    ರುದ್ರಭೂಮಿಯ ಹೊರಗೆ ಶವ ಇಟ್ಟುಕೊಂಡು ತಮ್ಮ ಪಾಳಿಗಾಗಿ ಕಾಯುವ ಮೃತರ ಕುಟುಂಬಸ್ಥರನ್ನು ನೋಡಿದರೆ ಕರೊನಾದ ಭಯಾನಕತೆ ಕಣ್ಣಿಗೆ ಕಟ್ಟುತ್ತದೆ ಎನ್ನುತ್ತಾರೆ ಇಲ್ಲಿನ ನೌಕರರು.
    ಬೇರೆ ಇದ್ದರೂ ವ್ಯವಸ್ಥೆಯಿಲ್ಲ: ನಗರದ ಗಣೇಶನಗರ, ನೆಹರುನಗರ, ಬನವಾಸಿ ರಸ್ತೆ, ಕಲ್ಕುಣಿ ರಸ್ತೆ ಸೇರಿ 5ಕ್ಕೂ ಹೆಚ್ಚು ಸ್ಮಶಾನಗಳಿವೆ. ನಗರಸಭೆ ವ್ಯಾಪ್ತಿಯ ಕೆಲವು ಸ್ಮಶಾನಗಳನ್ನು ಸ್ವಚ್ಛಗೊಳಿಸಿ ಆಯಾ ಭಾಗದವರಿಗೆ ಅಲ್ಲಿಯೇ ಸಂಸ್ಕಾರ ಮಾಡುವಂತೆ ನಗರಾಡಳಿತದಿಂದ ಸೂಚಿಸಲಾಗಿದೆ. ಆದರೆ, ವ್ಯವಸ್ಥಿತವಾದ ಕಬ್ಬಿಣದ ಚಿತಾಗಾರವಾಗಲಿ, ಕಟ್ಟಿಗೆಯ ವ್ಯವಸ್ಥೆಯಾಗಲಿ ಇಲ್ಲ. ಆದರೂ 50ಕ್ಕೂ ಹೆಚ್ಚು ಶವಗಳನ್ನು ಕೆಲವರು ಇರುವ ವ್ಯವಸ್ಥೆಯಲ್ಲೇ ಸಂಸ್ಕಾರ ಮಾಡಿದ್ದಾರೆ. ಬಹುತೇಕ ಜನರು ವಿದ್ಯಾನಗರದ ರುದ್ರಭೂಮಿಗೆ ಶವ ಸಂಸ್ಕಾರಕ್ಕಾಗಿ ಆಗಮಿಸುತ್ತಿದ್ದಾರೆ. ಕರೊನಾ ಪೂರ್ವ ಸಮಯದಲ್ಲಿ ಅಂದಾಜು ಒಂದೆರಡು ದಿನಕ್ಕೆ ಒಂದು ಶವ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಈಗ ಸಂಸ್ಕಾರಕ್ಕೆ ನಿರ್ದಿಷ್ಟ ಸಮಯವಿಲ್ಲ. ಒಂದರ ಬೆನ್ನಿಗೆ ಮತ್ತೊಂದು ಶವ ಬರುತ್ತದೆ. ರುದ್ರಭೂಮಿಯಲ್ಲಿರುವ 4 ಚಿತಾಗಾರವನ್ನು ಬಳಸಿಕೊಂಡು ಮೃತರಾದವರಿಗೆ ಗೌರವಯುತ ವಿದಾಯ ನೀಡಲಾಗುತ್ತಿದೆ. ಆದರೂ ಕೆಲ ಬಾರಿ ಒತ್ತಡ ನಿರ್ವಣವಾಗಿ ವಾಪಸ್ ಕಳುಹಿಸುವ ಕಾರ್ಯವಾಗಿದೆ. ಕೆಲ ದಿನಗಳ ಹಿಂದೆ 8 ಶವಗಳು ಒಂದೇ ವೇಳೆಗೆ ಸಂಸ್ಕಾರಕ್ಕಾಗಿ ಬಂದಿದ್ದು, ಪಾಳಿ ಪ್ರಕಾರ ಮಾರನೆ ದಿನ ಬೆಳಗಿನವರೆಗೆ ಸುಡಲಾಗಿತ್ತು. ನಗರದಲ್ಲಿ ಬೇರೆ ಬೇರೆ ಕಡೆ ಸ್ಮಶಾನಗಳಿದ್ದು, ಅವುಗಳನ್ನು ಅಭಿವೃದ್ಧಿ ಮಾಡಿದರೆ ಸಂಸ್ಕಾರಕ್ಕೆ ಸಮಸ್ಯೆಯಾಗದು. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
    ನಿರ್ಲಕ್ಷ್ಯ ನಿರಂತರ:ಕರೊನಾದಿಂದ ಸಾವಿನ ಪ್ರಕರಣ ಹೆಚ್ಚುತ್ತಿದ್ದು, ಸೋಂಕು ಕೂಡ ಹೆಚ್ಚುತ್ತಿದೆ. ಆದರೆ, ಸಾರ್ವಜನಿಕರ ನಿರ್ಲಕ್ಷ್ಯ ಮುಂದುವರಿದಿದೆ. ಜೀವ ಭಯಕ್ಕಿಂತ ಮಿಗಿಲಾಗಿ ಪೊಲೀಸರು, ನಗರಸಭೆಯವರು ಹಾಕುವ ದಂಡದ ಭಯದಿಂದ ಮಾಸ್ಕ್ ಧಾರಣೆ ನಡೆದಿದೆ. ಈ ನಿರ್ಲಕ್ಷ್ಯವೇ ಸಾವಿನ ಮನೆಯವರೆಗೂ ಕೊಂಡೊಯ್ಯುತ್ತಿದೆ. ಇದರ ಬಗ್ಗೆ ಎಚ್ಚರಿಕೆ ವಹಿಸುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ಶಿರಸಿಯ ಪ್ರಜ್ಞಾವಂತ ನಾಗರಿಕರು ಹೇಳುತ್ತಾರೆ.

    ಮಾಮೂಲಿಗಿಂತ ಮೂರು ಪಟ್ಟು ಹೆಚ್ಚು ಶವಗಳು ಬಂದಾಗ ಸಹಜವಾಗಿಯೇ ಒತ್ತಡ, ಆತಂಕಗಳಾಗುತ್ತಿವೆ. ಅತ್ಯಂತ ಗೌರವಯುತವಾಗಿ ಅಂತ್ಯಕ್ರಿಯೆ ಜರುಗುವಂತೆ ತಾಳ್ಮೆಯಿಂದ ನಿಭಾಯಿಸುತ್ತಿದ್ದೇವೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಬಂದವರಿಗೆ ಸಾಂತ್ವನ ಹೇಳುತ್ತ ಅವರ ದುಃಖದಲ್ಲಿ ಭಾಗಿಯಾಗುವ ಈ ಸಮಯ ನಮಗೊಂದು ಸವಾಲು. ಸಮಿತಿಯ ಅಧ್ಯಕ್ಷ ಕಾಶೀನಾಥ ಮೂಡಿ ಮಾರ್ಗದರ್ಶನದಲ್ಲಿ ನಗರಸಭೆ, ಸುಭಾಶ್ಚಂದ್ರ ಭೋಸ್ ಕಾರ್ಯಪಡೆ, ಜೀವಜಲ ಕಾರ್ಯಪಡೆ ಕೈಜೋಡಿಸಿದೆ. ಎಲ್ಲರ ಸಹಕಾರದಿಂದ ಈ ಕಷ್ಟ ಕಾಲವನ್ನು ಸಮರ್ಥವಾಗಿ ಎದುರಿಸುತ್ತಿದ್ದೇವೆ.
    | ವಿ.ಪಿ. ವೈಶಾಲಿ ವಿದ್ಯಾನಗರ ರುದ್ರಭೂಮಿ
    ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ

    ಕರೊನಾ ಸೋಂಕಿನಿಂದ ನಗರ ವ್ಯಾಪ್ತಿಯಲ್ಲಿ 5ರಿಂದ 6 ಯುವಕರು ಮೃತಪಟ್ಟಿದ್ದಾರೆ. ಅವರ ಶವ ಸಂಸ್ಕಾರ ಮಾಡುವಾಗ, ಕುಟುಂಬದ ಸದಸ್ಯರ ಆಕ್ರಂದನವನ್ನು ಕಣ್ಣಾರೆ ಕಂಡಾಗ ದುಃಖ ಉಮ್ಮಳಿಸಿತ್ತು. ಆದರೆ, ಕರ್ತವ್ಯ ಪ್ರಜ್ಞೆ ಮರೆಯುವಂತಿಲ್ಲ. ಭಯ, ಆತಂಕ, ಹತಾಶೆ ನಡುವೆ ನಿತ್ಯ ಶವಗಳ ಸಂಸ್ಕಾರ ಮಾಡುತ್ತೇವೆ. ಕರೊನಾ ಸಾವು ಜನಸಾಮಾನ್ಯರಿಗೆ ಪಾಠವಾಗಬೇಕು. ಹಾಗಾದರೆ ಮಾತ್ರ ಕೋವಿಡ್ ನಿಯಮಾವಳಿ ಪಾಲನೆ ಮಾಡುತ್ತಾರೆ.
    | ಗಣಪತಿ ಮಡಿವಾಳ
    ಶವ ಸಂಸ್ಕಾರ ಮಾಡುವ ನೌಕರ




    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts