More

    ಸರ್ಕಿಟ್ ಹೌಸ್ ಆವರಣ, ಗುಜರಿ ವಸ್ತುಗಳ ತಾಣ

    ಹರೀಶ್ ಮೋಟುಕಾನ ಮಂಗಳೂರು

    ರಾಶಿರಾಶಿ ಬಿಯರ್ ಬಾಟಲ್‌ಗಳು, ತುಕ್ಕು ಹಿಡಿಯುತ್ತಿರುವ ಹಳೇ ವಾಹನಗಳು, ಎಲ್ಲೆಂದರಲ್ಲಿ ಹರಡಿರುವ ಪ್ಲಾಸ್ಟಿಕ್ ತ್ಯಾಜ್ಯ, ಎಸೆಯಲ್ಪಟ್ಟಿರುವ ನೀರಿನ ಟ್ಯಾಂಕ್, ಕಬ್ಬಿಣದ ತುಂಡುಗಳು, ಮುರಿದ ಪೀಠೋಪಕರಣ, ಎದುರಲ್ಲೇ ರಾಶಿ ಹಾಕಿರುವ ಡಾಂಬರು ರಸ್ತೆಯ ತ್ಯಾಜ್ಯ, ಆವರಣದೊಳಗಡೆ ಬೀದಿನಾಯಿಗಳದ್ದೇ ಸಾಮ್ರಾಜ್ಯ.

    ಇದು ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಬಂದು ವಾಸ್ತವ್ಯ ಹೂಡಿದ್ದ, ಸದಾ ವಿವಿಧ ಇಲಾಖೆ ಸಚಿವರು, ಶಾಸಕರು, ಸಂಸದರು, ಹೈಕೋರ್ಟ್ ನ್ಯಾಯಾಧೀಶರು, ಲೋಕಾಯುಕ್ತರು ಮೊದಲಾದ ಗಣ್ಯರು ಭೇಟಿ ನೀಡಿ ವಿಶ್ರಾಂತಿ ಪಡೆಯುವ ಕೇಂದ್ರವಾಗಿರುವ ನಗರದ ಕದ್ರಿಯಲ್ಲಿರುವ ಸರ್ಕಿಟ್ ಹೌಸ್ ಆವರಣದ ಚಿತ್ರಣ.

    ಸರ್ಕಿಟ್ ಹೌಸ್‌ನ ಹಳೇ ಕಟ್ಟಡದ ಎದುರು ಡಾಂಬರು ರಸ್ತೆಯ ತ್ಯಾಜ್ಯ ತಂದು ರಾಶಿ ಹಾಕಲಾಗಿದೆ. ಕಟ್ಟಡದ ಸುತ್ತಲೂ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳನ್ನು ಎಸೆಯಲಾಗಿದೆ. ಮುರಿದ ಪೀಠೋಪಕರಣ ರಾಶಿ ಹಾಕಲಾಗಿದೆ. ಆವರಣ ಬೀದಿನಾಯಿಗಳ ಆವಾಸ ಸ್ಥಾನವಾಗಿದೆ.

    ತುಕ್ಕು ಹಿಡಿಯುತ್ತಿರುವ ವಾಹನಗಳು: ಸರ್ಕಿಟ್ ಹೌಸ್ ಆವರಣದಲ್ಲಿ ಟ್ಯಾಂಕರ್, ಲಾರಿ ಮೊದಲಾದ ವಾಹನಗಳು ತುಕ್ಕು ಹಿಡಿಯುತ್ತಿವೆ. ಇದರ ಸುತ್ತಲೂ ಕಾಡು ಆವರಿಸಿಕೊಂಡಿದೆ. ಇದರ ಬಳಿಯಲ್ಲೇ ಕಬ್ಬಿಣದ ತುಂಡುಗಳು ಬಿದ್ದುಕೊಂಡಿವೆ. ತುಂಡಾದ ನೀರಿನ ಟ್ಯಾಂಕ್ ಎಸೆಯಲಾಗಿದೆ. ಮುರಿದ ಪೀಠೋಪಕರಣ ರಾಶಿ ಹಾಕಲಾಗಿದೆ. ಆವರಣದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಕೈ ಚೀಲಗಳು ಹಾಗೂ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿವೆ.

    ಮದ್ಯದ ಬಾಟಲಿ ರಾಶಿ: ಸರ್ಕಿಟ್ ಹೌಸ್ ಆವರಣದೊಳಗಿರುವ ಬಾರೊಂದರ ಎದುರಿನ ಹಳೇ ಕಟ್ಟಡದಲ್ಲಿ ಬಿಯರ್ ಇತ್ಯಾದಿ ಮದ್ಯದ ಬಾಟಲಿ ಆಳೆತ್ತರಕ್ಕೆ ರಾಶಿ ಹಾಕಲಾಗಿದೆ. ಜತೆಗೆ ಇತರ ತ್ಯಾಜ್ಯದ ರಾಶಿಯೂ ಇಲ್ಲಿ ಬಿದ್ದುಕೊಂಡಿದೆ. ಇಲ್ಲಿ ಒಂದು ಸುತ್ತು ಹೊಡೆದರೆ ಎಲ್ಲವೂ ಸಾಕ್ಷಾತ್ ದರ್ಶನವಾಗುತ್ತದೆ. ಇದರ ನಿರ್ವಹಣೆ ಮಾಡಬೇಕಾದ ಪಿಡಬ್ಲುೃಡಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ. ಇಲ್ಲಿ ಭೇಟಿ ನೀಡುವ ಗಣ್ಯರು ಕಾರಲ್ಲಿ ಬಂದು ಎ.ಸಿ ರೂಮಲ್ಲಿ ಕುಳಿತು ಹೋಗುವುದರಿಂದ ಈ ಗುಜರಿ ವಸ್ತುಗಳು ಯಾರ ಗಮನಕ್ಕೂ ಬೀಳುತ್ತಿಲ್ಲ.

    ಭದ್ರತೆಯೇ ಇಲ್ಲ: ಸರ್ಕಿಟ್ ಹೌಸ್ ಆವರಣದೊಳಗೆ ಯಾರು ಬಂದು ಹೋದರೂ ಕೇಳುವವರೇ ಇಲ್ಲ. ಗಣ್ಯರ ಭೇಟಿಯ ಕೇಂದ್ರವಾಗಿರುವ ಕಾರಣ ಇಲ್ಲಿಗೆ ಹೆಚ್ಚಿನ ಭದ್ರತೆ ಅವಶ್ಯ. ಹೊರ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇಡಬೇಕಾಗಿದೆ. ಆವರಣದೊಳಗೆ ಬರುವವರ ಮೇಲೆ ಗಮನ ನೀಡಲು ಕಾಯಂ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು. ಹಿಂಬದಿ ರಸ್ತೆಯ ಮೂಲಕವೂ ಒಳಗಡೆ ಪ್ರವೇಶಿಸಲು ಸಾಧ್ಯವಿರುವ ಕಾರಣ ಇಲ್ಲಿ ರಾತ್ರಿ ವೇಳೆ ಕಾರುಗಳಲ್ಲಿ ಕುಳಿತು ಮದ್ಯ ಸೇವನೆ ಮಾಡಿ ಬಾಟಲಿಗಳನ್ನು ಎಸೆದು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಪೊಲೀಸ್ ಕಾರ್ಯಾಚರಣೆ ಇಲ್ಲ ಎಂಬ ಧೈರ್ಯದಿಂದ ಬಹುತೇಕ ಜನ ಮದ್ಯ ಸೇವನೆಗೆ ಕಾರಿನಲ್ಲೇ ಬರುತ್ತಿದ್ದಾರೆ. ಕದ್ರಿ ಪೊಲೀಸ್ ಠಾಣೆ ಎದುರಲ್ಲೇ ಇದ್ದರೂ ಗಸ್ತು ತಿರುಗುವ ಪೊಲೀಸರು ಸರ್ಕಿಟ್ ಹೌಸ್ ಆವರಣದೊಳಗೆ ಬರುತ್ತಿಲ್ಲ ಎಂದು ಜನ ದೂರಿದ್ದಾರೆ.

    ಸರ್ಕಿಟ್ ಹೌಸ್ ಆವರಣದಲ್ಲಿರುವ ತುಕ್ಕು ಹಿಡಿಯುತ್ತಿರುವ ವಾಹನಗಳು ಜಿಲ್ಲಾ ಪಂಚಾಯಿತಿಗೆ ಸೇರಿದ್ದು, ತೆರವು ಮಾಡಲು ಪತ್ರ ವ್ಯವಹಾರ ನಡೆಸಲಾಗಿದೆ. ಮದ್ಯದ ಬಾಟಲಿಗಳ ರಾಶಿ ತೆರವು ಮಾಡಲು ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಹಿಂಬದಿ ರಸ್ತೆ ಮುಚ್ಚಲು ಉದ್ದೇಶಿಸಿದ್ದು, ಸದ್ಯ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಸಮಯಾವಕಾಶ ಬೇಕಾಗಿದೆ. ಕಾಯಂ ಭದ್ರತಾ ಸಿಬ್ಬಂದಿ ನಿಯೋಜಿಸಲು ಇಲಾಖೆಯಿಂದ ಪ್ರಯತ್ನ ಮಾಡಲಾಗುತ್ತಿದೆ.

    ಚಂದ್ರಶೇಖರ್
    ಕಾರ್ಯನಿರ್ವಾಹಕ ಅಭಿಯಂತ, ಪಿಡಬ್ಲುೃಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts