More

    ಮಂಗಳೂರಿನಲ್ಲಿ ಅಪಘಾತ ವಲಯ ವೃತ್ತಗಳು

    ಮಂಗಳೂರು: ನಾಲ್ಕು ರಸ್ತೆಗಳು ಸಂಧಿಸುವಲ್ಲಿ ಅಪಘಾತವಾಗಬಾರದು ಎಂಬ ಉದ್ದೇಶದಿಂದ ವೃತ್ತಗಳನ್ನು ನಿರ್ಮಿಸಿ, ವಾಹನ ಸಂಚಾರ ನಿಯಂತ್ರಿಸುವುದು ವಿಶ್ವವ್ಯಾಪಿ ರೂಢಿಯಲ್ಲಿರುವ ನಿಯಮ. ಆದರೆ ಮಂಗಳೂರಿನಲ್ಲಿ ಈ ರಸ್ತೆ ವೃತ್ತಗಳೇ ಅಪಘಾತ ವಲಯವಾಗುತ್ತಿವೆ!
    ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ರಸ್ತೆಗಳನ್ನು ನಿರ್ಮಿಸುವುದಾಗಿ ಹೇಳಿ, ಹಿಂದೆ ಅಗಲವಾಗಿದ್ದ ರಸ್ತೆಗಳಿಗೆ ಹೊಸ ಡಿವೈಡರ್, ದೊಡ್ಡ ಗಾತ್ರದ ವೃತ್ತಗಳನ್ನು ನಿರ್ಮಿಸಿ ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟು ಮಾಡುತ್ತಿದೆ. ಹೋರಾಟಗಾರರು, ಸಾರ್ವಜನಿಕರು ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರೂ ಪಾಲಿಕೆ ಅಧಿಕಾರಿಗಳು ಯಾವುದನ್ನೂ ಗಮನಕ್ಕೆ ತೆಗೆದುಕೊಂಡಿಲ್ಲ. ಮಹಾನಗರ ಪಾಲಿಕೆ ಮುಂಭಾಗದ ಲಾಲ್‌ಭಾಗ್ ವೃತ್ತದಲ್ಲೇ 10 ತಿಂಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದರೂ, ಇನ್ನೂ ಒಂದು ಹಂತಕ್ಕೆ ಬಂದಿಲ್ಲ. ಡಿವೈಡರ್‌ಗಳನ್ನು ಕತ್ತರಿಸುವುದು, ಅವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡುವುದು ಇಂಥದೇ ಕೆಲಸಗಳು ನಡೆಯುತ್ತಿವೆ.

    ಇದ್ದ ವೃತ್ತವನ್ನೂ ಕೆಡವಿದರು!
    ಲೇಡಿಹಿಲ್‌ನಲ್ಲಿ ಹೊಸ ವೃತ್ತ ನಿರ್ಮಾಣ ಮಾಡಲು, ಹಿಂದೆ ಇದ್ದ ವೃತ್ತವನ್ನು ಕೆಡವಲಾಗಿದೆ. ವೃತ್ತದಲ್ಲಿ ಎಡ, ಬಲಕ್ಕೆ ಚಲಿಸುವಲ್ಲಿ ಡಿವೈಡರ್ ನಿರ್ಮಿಸಿ ರಸ್ತೆಯ ಅಗಲ ಕಿರಿದಾಗಿದ್ದು, ಇಕ್ಕಟ್ಟಾಗಿದೆ. ರಸ್ತೆ ಮಧ್ಯ ವೃತ್ತಾಕಾರದಲ್ಲಿ ಒಂದು ಸಾಲು ಕಲ್ಲು ಕಟ್ಟಿ ವೃತ್ತ ನಿರ್ಮಿಸಿ ತಿಂಗಳು ಕಳೆದಿದೆ. ಈ ನಡುವೆ ನಗರ ಸುಂದರೀಕರಣದ ಹೆಸರಿನಲ್ಲಿ ಸ್ಟೇಟ್‌ಬ್ಯಾಂಕ್ ಬಳಿ ಹ್ಯಾಮಿಲ್ಟನ್ ವೃತ್ತ, ಕೊಡಿಯಾಲ್‌ಬೈಲ್ ನವಭಾರತ ವೃತ್ತ, ಬಳ್ಳಾಲ್‌ಭಾಗ್ ವೃತ್ತ, ಮಾರ್ನಮಿಕಟ್ಟೆ ವೃತ್ತ, ನಂದಿಗುಡ್ಡೆ ಸಮೀಪದ ಕೋಟಿ ಚೆನ್ನಯ ವೃತ್ತ, ಸರ್ಕಿಟ್ ಹೌಸ್ ಮುಂಭಾಗದ ವೃತ್ತ, ಕಾವೂರು ವೃತ್ತ, ಉರ್ವ ಮಾರ್ಕೆಟ್ ವೃತ್ತ, ಪಡೀಲ್‌ನ ಉಳ್ಳಾಲ ಶ್ರೀನಿವಾಸ ಮಲ್ಯ ವೃತ್ತಗಳ ಅಭಿವೃದ್ಧಿಗೆ ಪಾಲಿಕೆ ಉದ್ದೇಶಿಸಿದೆ. ಪ್ರಸ್ತುತ ನಡೆಯುತ್ತಿರುವ ಕಾಮಗಾರಿಗಳೇ ಅವೈಜ್ಞಾನಿಕವಾಗಿದ್ದು, ಈ ವೃತ್ತಗಳೂ ಅದೇ ಸಾಲಿಗೆ ಸೇರುವ ಎಲ್ಲ ಲಕ್ಷಣಗಳು ಗೋಚರಿಸಿವೆ.

    ಮಲ್ಲಿಕಟ್ಟೆ ವೃತ್ತದ ಕಥೆ
    ನಗರದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣವಾದ ವೃತ್ತಗಳಲ್ಲಿ ಕದ್ರಿ ಮಲ್ಲಿಕಟ್ಟೆ ವೃತ್ತವೂ ಒಂದು. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿರುವ ಈ ವೃತ್ತ ನಿರ್ಮಾಣ ಹಂತದಲ್ಲಿರುವಾಗಲೇ ಸ್ಥಳೀಯರು ಅವೈಜ್ಞಾನಿಕವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಸಣ್ಣ ಜಂಕ್ಷನ್‌ನಲ್ಲಿ ಬೃಹತ್ ಗಾತ್ರದ ಸರ್ಕಲ್ ನಿರ್ಮಿಸಲಾಗಿದ್ದು, ದೊಡ್ಡ ಗಾತ್ರದ ಬಸ್‌ಗಳು ವೃತ್ತ ಹಾದು ಹೋಗುವಲ್ಲಿ ಸಮಸ್ಯೆಯಾಗುತ್ತಿದೆ. ಸಂತ ಆ್ಯಗ್ನೆಸ್ ಕಡೆಯಿಂದ ಬರುವ ಬಸ್‌ಗಳು ಸರ್ಕಲ್ ಬಳಸದೇ ಮಲ್ಲಿಕಟ್ಟೆ ಕಡೆಗೆ ತಿರುಗುತ್ತವೆ.

    ಅಪಘಾತಗಳಿಗೆ ಹೆಸರಾದ ಹೆದ್ದಾರಿ ವೃತ್ತಗಳು
    ಹೆದ್ದಾರಿಗಳಲ್ಲಿ ಸಿಗುವ ಪ್ರಮುಖ ವೃತ್ತಗಳಲ್ಲಿ ಕೆಪಿಟಿ ಮತ್ತು ನಂತೂರು ವೃತ್ತ. ಈ ಎರಡೂ ವೃತ್ತಗಳಲ್ಲಿ ಫ್ಲೈಓವರ್ ಅಥವಾ ಅಂಡರ್‌ಪಾಸ್ ನಿರ್ಮಿಸುವ ಚಿಂತನೆ ನಡೆದಿತ್ತಾದರೂ ಇನ್ನೂ ಕಾರ್ಯಗತವಾಗಿಲ್ಲ. ದಿನನಿತ್ಯವೂ ಈ ಎರಡು ವೃತ್ತಗಳಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ. ಬೆಳಗ್ಗಿನಿಂದ ರಾತ್ರಿವರೆಗೆ ಪೊಲೀಸರು ಸಂಚಾರ ನಿಯಂತ್ರಣದಲ್ಲಿ ತೊಡಗಿದರೂ ನಿತ್ಯ ಸಣ್ಣ ಪುಟ್ಟ ಅವಘಡಗಳು, ಒಂದಲ್ಲೊಂದು ಅಪಘಾತಗಳು, ತಿಂಗಳಿಗೊಂದು ಪ್ರಾಣಹಾನಿಗಳು ಸಾಮಾನ್ಯವಾಗಿವೆ.

    ಲೇಡಿಹಿಲ್ ವೃತ್ತವನ್ನು ಸಿಂಡಿಕೇಟ್ ಬ್ಯಾಂಕ್ ಅಭಿವೃದ್ಧಿಪಡಿಸುವುದಾಗಿ ಮುಂದೆ ಬಂದಿತ್ತು. ಆದರೆ ಕೊನೇ ಕ್ಷಣದಲ್ಲಿ ಅವರು ಹಿಂದೆ ಸರಿದರು. ಈಗ ಕರ್ಣಾಟಕ ಬ್ಯಾಂಕ್‌ನವರು ವೃತ್ತ ನಿರ್ಮಿಸುವುದಾಗಿ ತಿಳಿಸಿದ್ದು, ಕೆಲಸದ ಆದೇಶ ನೀಡಲಾಗಿದೆ. ಪಾಲಿಕೆ ಸಿದ್ಧಪಡಿಸಿದ ವಿನ್ಯಾಸದಂತೆ ಕಾಮಗಾರಿ ನಡೆಯಲಿದೆ. ಸರ್ಕಿಟ್ ಹೌಸ್ ಮುಂಭಾಗದ ವೃತ್ತವನ್ನು ರೆಡ್‌ಕ್ರಾಸ್ ಸಂಸ್ಥೆಯವರು ಅಭಿವೃದ್ಧಿ ಪಡಿಸಲಿದ್ದಾರೆ. ಲಾಲ್‌ಭಾಗ್‌ನಲ್ಲೂ ಅಭಿವೃದ್ಧಿ ಕೆಲಸಗಳು ಶೀಘ್ರ ಮುಗಿಯಲಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗದು. ಕಾಮಗಾರಿ ಮುಗಿದ ಬಳಿಕ ಗೊತ್ತಾಗಲಿದೆ.
    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts