More

    ಪದವಿನಂಗಡಿ ಮತ್ತೆ ಅಪಘಾತ ಭೀತಿ

    ಮಂಗಳೂರು; ಪದವಿನಂಗಡಿ ಹಾಗೂ ಬೋಂದೆಲ್ ಚರ್ಚ್ ಬಳಿ ಅಪಘಾತದ ಸ್ಥಳದಲ್ಲಿ ರಸ್ತೆ ವಿಭಜಕಕ್ಕೆ ಹಾಕಲಾಗಿದ್ದ ಬ್ಯಾರಿಕೇಡ್ ತೆರವುಗೊಳಿಸಿದ್ದು, ಮತ್ತೆ ಅಪಘಾತದ ಭೀತಿ ಎದುರಾಗಿದೆ.

    ಪದವಿನಂಗಡಿ ಪೇರ್ಲಗುರಿ ಕ್ರಾಸ್‌ನಲ್ಲಿ ಮೇ 7ರಂದು ಅಡ್ಡ ಬಂದ ಸ್ಕೂಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಎದುರಿನ ಅಂಗಡಿಗೆ ಡಿಕ್ಕಿ ಹೊಡೆದು ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮರುದಿನ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವೈಜ್ಞಾನಿಕ ಕ್ರಾಸಿಂಗ್‌ಗೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿ ವಾಹನಗಳು ಸಂಚರಿಸದಂತೆ ತಡೆ ಒಡ್ಡಿದ್ದರು. ಈಗ ಮತ್ತೆ ಕ್ರಾಸಿಂಗ್‌ಗೆ ಅಳವಡಿಸಿದ ಬ್ಯಾರಿಕೇಡ್ ತೆರವು ಮಾಡಿದ್ದಾರೆ.

    ಅವೈಜ್ಞಾನಿಕ ಕ್ರಾಸಿಂಗ್: ಮುಖ್ಯ ರಸ್ತೆಯಲ್ಲಿ ವೇಗವಾಗಿ ವಾಹನಗಳು ಬರುವಾಗ ಪೇರ್ಲಗುರಿ ಕಡೆಯಿಂದ ಬಂದ ವಾಹನಗಳು ನೇರವಾಗಿ ಅವೈಜ್ಞಾನಿಕ ಕ್ರಾಸಿಂಗ್‌ನಲ್ಲಿ ಚಲಿಸುತ್ತಿವೆ. ಇದರಿಂದ ಅಪಘಾತ ಸಾಧ್ಯತೆ ಹೆಚ್ಚಾಗಿದ್ದು, ಇನ್ನೊಂದು ಜೀವ ಹಾನಿಯಾಗುವ ಮುನ್ನ ಈ ಕ್ರಾಸಿಂಗ್‌ಗೆ ಶಾಶ್ವತ ತಡೆ ಒಡ್ಡಬೇಕಾಗಿದೆ.

    ಇಲ್ಲಿ ಸೂಪರ್ ಮಾರ್ಕೆಟ್‌ಗೆ ಬರುವ ಗ್ರಾಹಕರು ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುತ್ತಾರೆ. ಇನ್ನು ಕೆಲವರು ಮಾರ್ಕೆಟ್‌ನಿಂದ ಸಾಮಗ್ರಿ ಖರೀದಿಸಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸಿಕೊಂಡು ಬಂದು ಕ್ರಾಸಿಂಗ್ ಮೂಲಕ ಸಾಗುತ್ತಾರೆ. ವಿಮಾನ ನಿಲ್ದಾಣ ರಸ್ತೆಯಾಗಿರುವುದರಿಂದ ಇಲ್ಲಿ ನಿರಂತರವಾಗಿ ವಾಹನಗಳು ಸಂಚರಿಸುತ್ತಲೇ ಇರುತ್ತವೆ.

    ಪಾದಚಾರಿಗಳಿಗೂ ಪ್ರಯಾಸ: ಪದವಿನಂಗಡಿ ಕಟ್ಟೆ ಬಳಿ ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ಇಲ್ಲಿಯೂ ವಾಹನಗಳು ಯೂ ಟರ್ನ್ ತೆಗೆಯುವುದರಿಂದ ಅಪಾಯಕಾರಿಯಾಗಿದೆ. ತಿರುವು ಇರುವುದರಿಂದ ದೂರದಿಂದ ವಾಹನಗಳು ಬರುವುದು ಕಾಣಿಸುವುದಿಲ್ಲ. ಪಾದಚಾರಿಗಳು ನಡೆದಾಡಲು ಪ್ರಯಾಸ ಪಡುವ ಸ್ಥಿತಿ ಇದೆ.

    ಬೋಂದೆಲ್, ಕಾವೂರಿನಲ್ಲೂ ತೆರವು: ಈ ರಸ್ತೆಯಲ್ಲಿ ಬೋಂದೆಲ್ ಚರ್ಚ್ ಬಳಿ ಪಚ್ಚನಾಡಿ ತಿರುಗುವಲ್ಲಿ ನಿರಂತರ ಅಪಘಾತಗಳು ನಡೆಯುತ್ತಿದ್ದು, ಇಲ್ಲಿದ್ದ ಬ್ಯಾರಿಕೇಡ್‌ಗಳನ್ನು ತೆರವು ಮಾಡಲಾಗಿದೆ. ಮತ್ತೆ ಅಪಘಾತಗಳು ನಡೆಯುವ ಸಾಧ್ಯತೆ ಇದ್ದು, ಶಾಶ್ವತ ಪರಿಹಾರ ಆಗಬೇಕು. ಬೋಂದೆಲ್ ಸರ್ಕಲ್ ಕೂಡಾ ಅವೈಜ್ಞಾನಿಕವಾಗಿದೆ. ಕಾವೂರು ವೃತ್ತವೂ ಅವೈಜ್ಞಾನಿಕವಾಗಿದ್ದು, ಅಪಘಾತಗಳು ನಡೆಯದಂತೆ ಇಲ್ಲಿಗೂ ಸೂಕ್ತ ವ್ಯವಸ್ಥೆಗಳು ಆಗಬೇಕಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಬೋಂದೆಲ್ ಚರ್ಚ್ ಎದುರಿನ ಮುಖ್ಯ ರಸ್ತೆಯಲ್ಲಿ ಮಳೆ ನೀರು ಹರಿದು ಬರುವುದು ಸಾಮಾನ್ಯ. ಈ ಸಂದರ್ಭ ಕಲ್ಲು ಮಣ್ಣು ಕೊಚ್ಚಿಕೊಂಡು ಬಂದು ರಸ್ತೆಯಲ್ಲಿ ನಿಂತಿದೆ. ಮರಳು ಕೂಡ ರಸ್ತೆಯಲ್ಲಿ ಇರುವುದರಿಂದ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುತ್ತಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸಿ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪದವಿನಂಗಡಿ ಅವೈಜ್ಞಾನಿಕ ಕ್ರಾಸಿಂಗ್‌ಗೆ ಅಳವಡಿಸಿದ ಬ್ಯಾರಿಕೇಡ್ ತೆರವುಗೊಳಿಸಿರುವುದು ಗಮನಕ್ಕೆ ಬಂದಿಲ್ಲ. ಇಲ್ಲಿ ಶಾಶ್ವತ ಕ್ರಾಸಿಂಗ್ ಮುಚ್ಚಲು ಕ್ರಮ ವಹಿಸಲಾಗುವುದು.

    ಅಕ್ಷಿ ಶ್ರೀಧರ್ ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts