More

    6 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲಿಗೆ ಕಸರತ್ತು

    ಗೋಣಿಕೊಪ್ಪ: ಆಡಳಿತ ಮಂಡಳಿಯ ಕೆಲ ಸದಸ್ಯರು ಮಾಡಿದ ಮೋಸದಿಂದಾಗಿ ವಿರಾಜಪೇಟೆ ಹಾಗೂ ಗೋಣಿಕೊಪ್ಪಲಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘವು ಬೀದಿಗೆ ಬಂದು ನಿಂತಿದೆ. ಸಂಘವನ್ನು ನಂಬಿ ಠೇವಣಿ ಇಟ್ಟಿದ್ದ ಗ್ರಾಹಕರು ಕೋಟ್ಯಂತರ ರೂ. ಕಳೆದುಕೊಳ್ಳುವ ಮೂಲಕ ನಷ್ಟ ಅನುಭವಿಸಿದ್ದಾರೆ.

    ಇಲ್ಲಿನ ಸಹಕಾರ ಸಂಘವು ಜನರ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಸಂಘದಲ್ಲಿ ಹಣ ದುರುಪಯೋಗವಾಗುತ್ತಿದ್ದಂತೆ ಗ್ರಾಹಕರು ತಮ್ಮ ಹಣವನ್ನು ಪಡೆಯಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹಲವು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸಿಕೊಡುವಂತೆ ಕೋರಿದ್ದರು. ದೂರಿನ ಅನ್ವಯ 2021ರಲ್ಲಿ ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಪ್ರಕರಣವು ಸಿಐಡಿಗೆ ವರ್ಗಾವಣೆಯಾಗಿತ್ತು.

    ತನಿಖೆಯ ಸಲುವಾಗಿ ಬೆಂಗಳೂರಿನ ಸಿಐಡಿ ಘಟಕದ ಉಪ ಪೊಲೀಸ್ ಅಧೀಕ್ಷಕ ಎನ್.ಶ್ರೀ ಹರ್ಷ ತಂಡವು ಕೊಡಗು ಜಿಲ್ಲೆಯ ವಿರಾಜಪೇಟೆಗೆ ಭೇಟಿ ನೀಡಿ, ಸಂಘದಲ್ಲಿ ಗ್ರಾಹಕರು ಹೂಡಿಕೆ ಮಾಡಿದ ಹಣದ ಬಗ್ಗೆ ಹಾಗೂ ಸಾಲ ಪಡೆದ ಸಾಲಗಾರರು ಮಾಹಿತಿಯನ್ನು ಪಡೆದುಕೊಂಡಿದೆ. ಈಗಾಗಲೇ ಸಂಘದಲ್ಲಿ ಹಣ ದುರುಪಯೋಗ ಸಾಬೀತಾಗಿದ್ದು, ಸಂಘದ ಪ್ರಮುಖರಾದ ಮೊಹಿದ್ದೀನ್, ಸೋಹೇಬ್ ಮಹಮ್ಮದ್ ಹಾಗೂ ವ್ಯವಸ್ಥಾಪಕ ಮುಕ್ತಾರ್ ಅಹಮ್ಮದ್ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಂತಿಮ ಸುತ್ತಿನ ಕಸರತ್ತುಗಳು ಬಿರುಸುಗೊಂಡಿದೆ. ಈ ಮೂವರಿಗೆ ಸೇರಿದ 6.5 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ಮುಟ್ಟುಗೋಲು ಹಾಕಲು ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿಗೆ ತನಿಖಾ ಅಧಿಕಾರಿಗಳು ಪತ್ರ ವ್ಯವಹಾರ ನಡೆಸಿದ್ದಾರೆ.

    ಪವಿಭಾಗಾಧಿಕಾರಿಗಳು ಅನುಮತಿಗಾಗಿ ಹಿರಿಯ ಅಧಿಕಾರಿಗಳಿಗೆ ಪತ್ರ ವ್ಯವಹಾರ ನಡೆಸಿದ್ದಾರೆ. ಸದ್ಯದಲ್ಲಿಯೇ ಆದೇಶ ಹೊರಬೀಳುವ ಸಾಧ್ಯತೆಯಿದೆ.
    ಕೆಲವೇ ತಿಂಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಆಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಇದರಿಂದ ಬರುವ ಆದಾಯದಿಂದ ಸಂಘದಿಂದ ಮೋಸಗೊಳಗಾದ ಗ್ರಾಹಕರಿಗೆ ನಿಯಮಾನುಸಾರ ಹಣ ಸಂದಾಯವಾಗಲಿದೆ. ಈಗಾಗಲೇ ಕಳೆದ 5 ದಿನಗಳಿಂದ ಬೆಂಗಳೂರಿನ ಸಿಐಡಿ ಘಟಕದ ಉಪ ಪೊಲೀಸ್ ಅಧೀಕ್ಷಕ ಎನ್.ಶ್ರೀಹರ್ಷ ತಂಡದ ಇನ್ಸ್‌ಪೆಕ್ಟರ್‌ಗಳಾದ ವಿನೋದ್, ರಮೇಶ್ ಹಾಗೂ ಇತರರು ತನಿಖೆ ನಡೆಸುತ್ತಿದ್ದಾರೆ. ಗ್ರಾಹಕರ ದೂರಿನಂತೆ 5.50 ಕೋಟಿ ರೂ. ಗ್ರಾಹಕರಿಗೆ ಸಿಗಬೇಕಾಗಿದೆ.

    1510 ಸದಸ್ಯರನ್ನು ಹೊಂದಿರುವ ವಿರಾಜಪೇಟೆಯ ಕೊಡಗು ಮುಸ್ಲಿಂ ಪತ್ತಿನ ಸಹಕಾರ ಸಂಘದಲ್ಲಿ ಇಲ್ಲಿವರೆಗೆ 50 ಸದಸ್ಯರು ಮಾತ್ರ ತಮಗಾದ ಅನ್ಯಾಯದ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಾರೆ. ಆಸ್ತಿ ಮುಟ್ಟುಗೋಲು ನಂತರ ಇವರಿಗೆ ಮೊದಲ ಹಂತದಲ್ಲಿ ಹಣವು ಜಮೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಒಟ್ಟಿನಲ್ಲಿ ಸಂಘದಲ್ಲಿ ಹೂಡಿಕೆ ಮಾಡಿದ ಹಣವು ಗ್ರಾಹಕರ ಕೈ ಸೇರುವ ನಿಟ್ಟಿನಲ್ಲಿ ತನಿಖಾ ತಂಡವು ಕಾರ್ಯೋನ್ಮುಖವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts