More

    ಜಸಿಂಡಾ ಅಡೆರ್ನ್​ ರಾಜೀನಾಮೆ: ನ್ಯೂಜಿಲೆಂಡ್​ನ​ ನೂತನ ಪ್ರಧಾನಿಯಾಗಲಿದ್ದಾರೆ ಕ್ರಿಸ್​ ಹಿಪ್ಕಿನ್ಸ್​

    ವೆಲ್ಲಿಂಗ್ಟನ್​: ಜಸಿಂಡಾ ಅಡೆರ್ನ್​ ಅವರ ದಿಢೀರ್​ ರಾಜೀನಾಮೆಯಿಂದ ತೆರವಾಗಿರುವ ನ್ಯೂಜಿಲೆಂಡ್​ ಪ್ರಧಾನಿ ಸ್ಥಾನಕ್ಕೆ ಪೊಲೀಸ್​ ಮತ್ತು ಶಿಕ್ಷಣ ಸಚಿವ ಕ್ರಿಸ್​ ಹಿಪ್ಕಿನ್ಸ್​ ಅವರು ಆಯ್ಕೆಯಾಗಲಿದ್ದಾರೆ. ಸಹ ಸಂಸದರಿಂದ ಏಕೈಕ ನಾಮನಿರ್ದೇಶನವನ್ನು ಸ್ವೀಕರಿಸಿದ ನಂತರ ಆಡಳಿತಾರೂಢ ಲೇಬರ್​ ಪಾರ್ಟಿ ಶನಿವಾರ ತಿಳಿಸಿದೆ.

    44 ವರ್ಷದ ಹಿರಿಯ ರಾಜಕಾರಣಿಯಾಗಿರುವ ಕ್ರಿಸ್​ ಹಿಪ್ಕಿನ್ಸ್​ ಅವರನ್ನು ಭಾನುವಾರ ನಡೆಯಲಿರುವ ಸಂಸತ್ತಿನ ಸಭೆಯಲ್ಲಿ ಲೇಬರ್​ ಪಕ್ಷದ ಸದಸ್ಯರೆಲ್ಲರು ಬೆಂಬಲಿಸಲಿದ್ದು, ನ್ಯೂಜಿಲೆಂಡ್​ನ 41ನೇ ಪ್ರಧಾನಿಯಾಗಿ ಕ್ರಿಸ್​ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    ಕ್ರಿಸ್​ ಅವರು ಈ ಹಿಂದೆ ಕೋವಿಡ್​ 19 ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಉತ್ತಮವಾದ ಕೆಲಸಗಳನ್ನು ಮಾಡುವ ಮೂಲಕ ಜನಮನ್ನಣೆಯನ್ನು ಗಳಿಸಿದ್ದಾರೆ. ಪ್ರಸ್ತುತ ಪೊಲೀಸ್​ ಮತ್ತು ಶಿಕ್ಷಣ ಸಚಿವರಾಗಿದ್ದಾರೆ. ಪ್ರಧಾನಿಯಾಗಿ ತಮ್ಮ ಪಕ್ಷವನ್ನು ಮುನ್ನಡೆಸುವ ಮೂಲಕ ಮುಂದಿನ ಅಕ್ಟೋಬರ್​ 14ರಂದು ಎದುರಾಗಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸಂಪೂರ್ಣ ಜವಾಬ್ದಾರಿ ಕ್ರಿಸ್​ ಮೇಲೆ ಬೀಳಲಿದೆ.

    ಪಕ್ಷವು ಸದ್ಯ ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿದ್ದು, ಆಡಳಿತರೂಢ ಲೇಬರ್​ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನು ಮೆಟ್ಟಿ ನಿಂತು ಪಕ್ಷವನ್ನು ಕ್ರಿಸ್​ ಮುನ್ನಡೆಸಬೇಕಿದೆ.

    ಭಾನುವಾರ ಮಧ್ಯಾಹ್ನ 1 ಗಂಟೆಗೆ ಲೇಬರ್​ ಪಕ್ಷದ ಸಭೆ ನಡೆಯಲಿದ್ದು, ನಾಮನಿರ್ದೇಶನವನ್ನು ಅನುಮೋದಿಸಿ, ಕ್ರಿಸ್ ಹಿಪ್ಕಿನ್ಸ್ ಅವರನ್ನು ಪಕ್ಷದ ನಾಯಕರಾಗಿ ದೃಢೀಕರಿಸಲಿದ್ದಾರೆ ಎಂದು ಲೇಬರ್​ ಪಕ್ಷದ ಹಿರಿಯ ಸದಸ್ಯ ಡಂಕನ್ ವೆಬ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಪ್ರಗತಿಪರ ರಾಜಕೀಯದಿಂದ ಜಾಗತಿಕ ಮನ್ನಣೆ ಗಳಿಸಿದ್ದ ಅರ್ಡೆರ್ನ್ ಅವರು ದಿಢೀರ್​ ರಾಜೀನಾಮೆ ನೀಡಿದ್ದು, ನ್ಯೂಜಿಲೆಂಡ್ ಜನೆತನ್ನು ದಿಗ್ಭ್ರಮೆಗೊಳಿಸಿತು. ಕಳೆದ ಚುನಾವಣೆಯಲ್ಲಿ ಪ್ರಚಂಡ ಗೆಲುವಿನ ಮೂಲಕ ಎರಡನೇ ಅವಧಿಗೆ ಅಧಿಕಾರವನ್ನು ಪಡೆದುಕೊಂಡ ಮೂರು ವರ್ಷಗಳ ಬಳಿಕ ರಾಜೀನಾಮೆ ನೀಡಿದ್ದು, ಎಲ್ಲರನ್ನು ಅಚ್ಚರಿಗೆ ದೂಡಿತು. ಕೋವಿಡ್​ 19, ಪ್ರಾಕೃತಿಕ ವಿಕೋಪ ಮತ್ತು ಉಗ್ರ ದಾಳಿಯಂತಹ ಸವಾಲುಗಳನ್ನು ಎದುರಿಸಿದ ಅಡೆರ್ನ್​, ಪ್ರಧಾನಿ ಹುದ್ದೆಯನ್ನು ನಿರ್ವಹಿಸಲು ನನ್ನಿಂದ ಸಾಧ್ಯವಿಲ್ಲ ಎನ್ನುತ್ತಲೇ ನಿರ್ಗಮಿಸಿದ್ದು, ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.

    ಪ್ರಧಾನಿ ಸ್ಥಾನದಿಂದ ಕೆಳಗಿಳಿಯುವ ತಮ್ಮ ನಿರ್ಧಾರವು ದುಃಖದಿಂದ ಕೂಡಿದೆ. ಆದರೂ ರಾಜೀನಾಮೆ ಘೋಷಣೆಯ ಬಳಿಕ ಮೊದಲ ಬಾರಿಗೆ ಬಹು ಸಮಯದ ನಂತರ ಒಳ್ಳೆಯ ನಿದ್ದೆಯನ್ನು ಮಾಡಿದೆ ಎಂದು ತಿಳಿಸಿದ್ದಾರೆ.

    ಕಿರಿಯ ವಯಸ್ಸಿನಲ್ಲಿ ಪ್ರಧಾನಿ ಹುದ್ದೆಗೇರುವ ಮೂಲಕ ಜಸಿಂಡಾ ಅಡೆರ್ನ್​ ಮಾದರಿಯಾಗಿದ್ದರು. ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಮಾತನಾಡಿದ್ದ ಜಸಿಂಡಾ, ಉಳಿದ ಅಧಿಕಾರದ ಅವಧಿಯಲ್ಲಿ ಮುಂದುವರಿಯಲು ಅವಶ್ಯವಿರುವುದನ್ನು ಕಂಡುಕೊಳ್ಳುತ್ತೇನೆಂದು ಅಂದುಕೊಂಡಿದ್ದೆ ಆದರೆ, ದುರದೃಷ್ಟವಶಾತ್ ನನ್ನಿಂದ ಸಾಧ್ಯವಾಗಲಿಲ್ಲ. ಪ್ರಧಾನಿ ಹುದ್ದೆಯನ್ನು ನಿರ್ವಹಿಸಲು ಆಗುತ್ತಿಲ್ಲ. ನಾನು ಈ ಹುದ್ದೆಯಲ್ಲಿ ಮುಂದುವರಿದರೆ, ಅದು ನ್ಯೂಜಿಲೆಂಡ್‌ಗೆ ಮಾಡಿದ ಅಪಚಾರವಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸೀಟ್​ಬೆಲ್ಟ್​ ಧರಿಸದೇ ಕಾರಿನಲ್ಲಿ ಪ್ರಯಾಣಿಸಿದ ಬ್ರಿಟನ್​ ಪ್ರಧಾನಿಗೆ ದಂಡ ವಿಧಿಸಿದ ಪೊಲೀಸರು!

    ಸದ್ದು ಮಾಡದ ಲೋಕಾಯುಕ್ತ!; 6 ತಿಂಗಳಾದರೂ ಭ್ರಷ್ಟ ತಿಮಿಂಗಿಲಗಳ ಬೇಟೆಯಾಡಲು ಹಿಂದೇಟು

    ಅಧಿಕ ಬೆವರು ಹರಿಸಿದರಷ್ಟೇ ಅಧಿಕಾರ: ಬಿ.ಎಲ್.ಸಂತೋಷ್ ಸೂಚ್ಯ ಸಂದೇಶ; ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆ ಸಮಾರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts