More

    ಹೂವಿನ ಹರಕೆಯ ಚೌಡೇಶ್ವರಿ ಜಾತ್ರೆ ಇಂದಿನಿಂದ

    ರಾಣೆಬೆನ್ನೂರ: ಹೂವಿನ ಹರಕೆ ಹೊತ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತ ಹೂವಿನ ಚೌಡಮ್ಮ ಎಂದೇ ಪ್ರಸಿದ್ಧಿ ಪಡೆದ ವಾಣಿಜ್ಯ ನಗರಿ ರಾಣೆಬೆನ್ನೂರಿನ ದೇವತೆ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವ ಜ. 25ರಿಂದ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ.

    ಬನದ ಹುಣ್ಣಿಮೆ ದಿನದಂದು ಜಾತ್ರಾಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಚೌಡೇಶ್ವರಿ ನಗರದಲ್ಲಿ ಈಗಾಗಲೇ ಸಂಭ್ರಮ, ಸಡಗರ ಮನೆ ಮಾಡಿದೆ. ದೇವಸ್ಥಾನ ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದೆ. ಮೇಡ್ಲೇರಿ ವೃತ್ತದಿಂದ ಚೌಡೇಶ್ವರಿ ದೇವಸ್ಥಾನದ ವರೆಗೂ ವಿದ್ಯುತ್ ದೀಪಗಳು ಹಾಗೂ ಬೀದಿಗಳಲ್ಲಿ ರಂಗುರಂಗಿನ ವಸ್ತ್ರಾಭರಣಗಳಿಂದ ನಿರ್ವಿುಸಿದ ಮಂಟಪ ಭಕ್ತರನ್ನು ಸ್ವಾಗತಿಸುತ್ತಿದೆ.

    ದೇವಸ್ಥಾನದ ಆವರಣದಲ್ಲಿ ಜೂಲಾ, ಬ್ರೇಕ್​ಡಾನ್ಸ್, ಸಲಾಮ ಬೋ, ಡ್ರೈಗನ್, ಟೋರಾ ಟೋರಾ, ಅಟೋ ಬಾಕ್ಸ್ ವಿವಿಧ ಆಟೋಪಕರಣಗಳು ಮನರಂಜನೆ ನೀಡಲು ಸಜ್ಜಾಗಿವೆ. ಜಾತ್ರಾಮಹೋತ್ಸವದಲ್ಲಿ ಚೌಡೇಶ್ವರಿ ದೇವಿಗೆ ಸುಗಂಧಿ, ಶಾವಂತಿಗೆ ಹಾಗೂ ಮಲ್ಲಿಗೆ ಹೂವಿನ ದೊಡ್ಡ ಮಾಲೆ ಅರ್ಪಿಸುವ ಮೂಲಕ ಹರಕೆ ತೀರಿಸುವುದು ವಿಶೇಷ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಭಾಗಗಳಿಂದ ಬರುವ ಭಕ್ತರು ನೂರು ರೂಪಾಯಿಯಿಂದ ಶುರುವಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಹೂವಿನ ಮಾಲೆ ಅರ್ಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಅಂಗಡಿ ವ್ಯಾಪಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

    ಪೊಲೀಸ್ ಬಂದೋಬಸ್ತ್: 5 ದಿನ ನಡೆಯುವ ಜಾತ್ರೆಯಲ್ಲಿ ಅಹಿತಕರ ಘಟನೆ ತಡೆಯಲು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಹೊರ ಠಾಣೆ ತೆರೆಯಲಿದ್ದು, ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಡಿವೈಎಸ್​ಪಿ, ಮೂವರು ಸಿಪಿಐ, 8 ಪಿಎಸ್​ಐ, 16 ಎಎಸ್​ಐ, 20 ಎಚ್​ಸಿ, 80 ಪಿಸಿ, 12 ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಒಂದು ಕೆಎಸ್​ಆರ್​ಪಿ, ಎರಡು ಡಿಆರ್ ತಂಡ ಕಾರ್ಯನಿರ್ವಹಿಸಲಿವೆ ಎಂದು ಡಿವೈಎಸ್ಪಿ ಟಿ.ವಿ. ಸುರೇಶ ತಿಳಿಸಿದ್ದಾರೆ.

    ವಿವಿಧ ಧಾರ್ವಿುಕ ಕಾರ್ಯಕ್ರಮ

    ಜ. 25ರಂದು ಸಂಜೆ 6 ಗಂಟೆಗೆ ಚೌಡೇಶ್ವರಿ ದೇವಿಯ ಮೂರ್ತಿ ಶ್ರೀದೇವಿ ಮನೆಯಿಂದ ಡೊಳ್ಳು ಕುಣಿತ, ಕೋಲಾಟಗಳೊಂದಿಗೆ ಅಂಬಾರಿ ಮೆರವಣಿಗೆ ಮೂಲಕ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. 26ರಂದು ಬೆಳಗ್ಗೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಶೃಂಗರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಅಂದು ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪೂಜಾ ನೈವೇದ್ಯ, ಹರಿಕೆ ಸಲ್ಲಿಸುವುದು ಸೇರಿ ವಿವಿಧ ಧಾರ್ವಿುಕ ಕಾರ್ಯಕ್ರಮ ನಡೆಯಲಿವೆ. ಜ. 27ರಂದು ಬೆಳಗ್ಗೆ ಓಕಳಿ ಉತ್ಸವ, ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ, ರಾತ್ರಿ ಭಜನೆ ಸೇರಿ 5 ದಿನ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts