More

    ಕರ ಭಾರಕ್ಕೆ ಬೆಂಡಾಗಿವೆ ಪಂಚಾಯಿತಿಗಳು

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಜಿಲ್ಲೆಯ 189 ಗ್ರಾಪಂಗಳ ವ್ಯಾಪ್ತಿಯಲ್ಲಿ 67 ಕೋಟಿ ರೂ. ಕಂದಾಯ ಬಾಕಿ ಉಳಿದಿರುವುದು ಜಿಲ್ಲಾ ಪಂಚಾಯಿತಿಗೆ ದೊಡ್ಡ ತಲೆ ನೋವಾಗಿದ್ದು, ಕರ ವಸೂಲಿಗಾಗಿ ಮೂರು ತಿಂಗಳಿಂದೀಚೆಗೆ ಗ್ರಾಪಂ ಪಿಡಿಒ, ಬಿಲ್‌ಕಲೆಕ್ಟರ್‌ಗಳು ಮನೆ, ಮನೆಗೆ ಭೇಟಿ ನೀಡುತ್ತಿದ್ದಾರೆ.

    ಹಳೆ ಬಾಕಿ 53 ಕೋಟಿ ರೂ. ಹಾಗೂ ಚಾಲ್ತಿ ಮೊತ್ತ 14 ಕೋಟಿ ರೂ. ಮೊತ್ತವಿದೆ. ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಗರಿಷ್ಠ ಮೊತ್ತದ ಕಂದಾಯ ವಸೂಲಿಗೆ ಜಿಪಂ ಹಿರಿಯ ಅಧಿಕಾರಿಗಳು ಟಾರ್ಗೆಟ್ ಕೊಟ್ಟಿರುವುದರಿಂದಾಗಿ ಅಧಿಕ ಮೊತ್ತ ವಸೂಲಿಗಾಗಿ, ಗ್ರಾಪಂ ಅಧಿಕಾರಿ, ಸಿಬ್ಬಂದಿ ಮುಂಜಾನೆಯೇ ಜನರ ಮನೆ ಎದುರು ಹಾಜರಾಗುತ್ತಿದ್ದಾರೆ.

    ಜಿಲ್ಲೆ ಜನ ಸತತ ಬರಗಾಲಕ್ಕೆ ಸಿಲುಕಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಏಳೆಂಟು ವರ್ಷಗಳಿಂದಲೂ ಬರ ತಪ್ಪದೆ ಕಾಡಿದ್ದು, ಸಂಕಷ್ಟದಲ್ಲಿರುವ ಜನರ ಬಳಿಗೆ ಹೋದರು ಒತ್ತಡ ಹಾಕುವಲ್ಲಿ ಸಿಬ್ಬಂದಿಯ ಹಿಂಜರಿಕೆಯಿಂದಾಗಿ ವಸೂಲಿ ಕಾರ್ಯ ನೆನೆಗುದಿಗೆ ಬಿದ್ದಿದ್ದು, ಕರ ಭಾರದ ಹೊರೆ ಹೆಚ್ಚಾಗಿತ್ತು.

    ಸುಗ್ಗಿ ಕಾರಣ ಹಾಗೂ ಮುಂಗಾರು ಹಂಗಾಮು ಆರಂಭ ಆಗುವುದರೊಳಗೆ, ಮನೆ, ಮಳಿಗೆ, ನಿವೇಶನ, ನೀರು, ಜಾಹಿರಾತು, ಬೀದಿ ದೀಪ, ಮನರಂಜನೆ ಮೊದಲಾದ ಕರದ ಗರಿಷ್ಠ ವಸೂಲಿಗೆ ಸಿಬ್ಬಂದಿ ಮುಂದಾಗಿದ್ದಾರೆ. ಇದಕ್ಕಾಗಿ ಜಿಪಂ ಹಿರಿಯ ಅಧಿಕಾರಿಗಳು ಸಿದ್ಧ ಪಡಿಸಿರುವ ವಾಟ್ಸ್‌ಆ್ಯಫ್ ಗ್ರೂಫ್‌ಗೆ ಅಂದಿನ ವಸೂಲಿ ವಿವರ, ಪೋಟೊಗಳನ್ನು ಸಿಬ್ಬಂದಿ ಶೇರ್ ಮಾಡುತ್ತಿದ್ದಾರೆ.

    4.16 ಲಕ್ಷ ಖಾತೆಗಳು: ಜಿಲ್ಲಾದ್ಯಂತ 416097 ಖಾತೆಗಳಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕರ ವಸೂಲಿಯಲ್ಲಿ ಭಾರೀ ಹಿನ್ನಡೆಯಾಗಿದೆ. ಆದರೂ ಇತ್ತೀಚೆಗೆ ವಸೂಲಿ ಆರಂಭದ ಬಳಿಕ ಶೇ.10ರ ಆಜುಬಾಜಿನಲ್ಲಿದ್ದ ಕರ ವಸೂಲಿ ಮೊತ್ತದಲ್ಲಿ ನಿತ್ಯ ಏರಿಕೆ ಕಂಡು ಬರುತ್ತಿದೆ. ಆದರೆ ಅದು ಚಾಲ್ತಿ ಸಾಲಿನ ಮೊತ್ತವೇ ಹೊರತು ಹಳೆಯ ಮೊತ್ತ ಹಾಗೇ ಇದೆ ಎನ್ನುತ್ತಾರೆ ಜಿಪಂ ಅಧಿಕಾರಿಗಳು.

    ಯಾವ ತಾಲೂಕಲ್ಲಿ, ಎಷ್ಟು ಬಾಕಿ (ಹಳೆ-ಚಾಲ್ತಿ ಸೇರಿ-ಕೋಟಿ ರೂ. ಗಳಲ್ಲಿ)?
    ಚಳ್ಳಕೆರೆ-12. ಚಿತ್ರದುರ್ಗ-18. ಹಿರಿಯೂರು-10. ಹೊಳಲ್ಕೆರೆ-7. ಹೊಸದುರ್ಗ 11. ಮೊಳಕಾಲ್ಮೂರು-6

    ಜಿಪಂ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿಕೆ: ಕರ ವಸೂಲಿಯಾದರೆ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಸಿಬ್ಬಂದಿ ವೇತನ, ಮೂಲ ಸೌಕರ್ಯಕ್ಕೆ ಅನುಕೂಲವಾಗಲಿದೆ. ಬರದ ಜಿಲ್ಲೆ ಆಗಿರುವುದರಿಂದ ಹಳೆ ಬಾಕಿ ಮೊತ್ತ ಅಧಿಕವಿದೆ. ಆದ್ದರಿಂದ ಪಿಡಿಒ ಹಾಗೂ ಸಿಬ್ಬಂದಿ ಈಗ ಜನರ ಮನೆ ಬಾಗಿಲಗೆ ತೆರಳುತ್ತಿರುವ ಚಾಲ್ತಿ ಮೊತ್ತದಲ್ಲಿ 8 ಕೋಟಿ ರೂ. ಅಧಿಕ ಮೊತ್ತದ ಕರವನ್ನು ವಸೂಲಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts