More

    ಜಿಪಂ ನೂತನ ಸಾರಥಿ ಶಶಿಕಲಾ

    ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ (ಸಾಮಾನ್ಯ ಮಹಿಳೆ) ಹಿರಿಯೂರು ತಾಲೂಕು ಮಸ್ಕಲ್ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಶಿಕಲಾ ಸುರೇಶ್‌ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಜಿ.ಎಂ.ವಿಶಾಲಾಕ್ಷಿ ನಟರಾಜ್ ರಾಜೀನಾಮೆಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ಜರುಗಿತು.

    ಬೆಳಗ್ಗೆ 8ರಿಂದ 9ರ ವರೆಗೆ ನಾಮಪತ್ರ ಸಲ್ಲಿಕೆ ಅವಧಿಯೊಳಗೆ ಶಶಿಕಲಾ ಒಬ್ಬರೇ, 2 ಪ್ರತ್ಯೇಕ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಸೇರಿ ಬೇರ‌್ಯಾವ ಸದಸ್ಯರು ನಾಮಪತ್ರ ಸಲ್ಲಿಸದಿದ್ದರಿಂದಾಗಿ, ನಾಮಪತ್ರ ಪರಿಶೀಲನೆ, ಹಿಂಪಡೆಯುವ ಅವಧಿ ಮುಕ್ತಾಯ ಬಳಿಕ ಬೆಂಗಳೂರು ಪ್ರಾದೇಶಿಕ ಆಯುಕ್ತ, ಚುನಾವಣಾಧಿಕಾರಿ ವಿ.ಪಿ.ಇಕ್ಕೇರಿ ಅವರು, ಶಶಿಕಲಾ ಸುರೇಶ್‌ಬಾಬು ಆಯ್ಕೆಯನ್ನು ಪ್ರಕಟಿಸಿದರು.

    37 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಕಾಂಗ್ರೆಸ್ಸಿನ ಎಲ್ಲ 22 ಸದಸ್ಯರು, ಬಿಜೆಪಿ, ಜೆಡಿಎಸ್‌ನಿಂದ ತಲಾ ಒಬ್ಬ ಸದಸ್ಯರು ಹಾಗೂ ಇಬ್ಬರು ಪಕ್ಷೇತರರು ಸೇರಿ 28 ಸದಸ್ಯರು ಹಾಜರಾಗಿದ್ದರು.

    ಕಾಂಗ್ರೆಸ್ಸಿನ ಉಚ್ಛಾಟಿತ ಸದಸ್ಯೆ, ಜಿಪಂ ಮಾಜಿ ಅಧ್ಯಕ್ಷ್ಷೆ ಸೌಭಾಗ್ಯ ಬಸವರಾಜನ್ ಸೇರಿ ಉಳಿದವರು ಗೈರಾಗಿದ್ದರು. ಕೋರಂ ಭರ್ತಿಗೆ 19 ಸದಸ್ಯರ ಹಾಜರಿ ಅವಶ್ಯವಿತ್ತು. ಪ್ರಸ್ತುತ ಜಿಪಂ 3ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಶಿಕಲಾ ಅಧಿಕಾರಾವಧಿ 2021 ಮೇ 4ರ ವರೆಗೆ ಇದೆ.

    ಆಯ್ಕೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ನೂತನ ಅಧ್ಯಕ್ಷೆ, ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ಕುಡಿವ ನೀರು, ಕರೊನಾದ ಈ ಸಂಕಷ್ಟದ ಸಮಯದಲ್ಲಿ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಹೆಚ್ಚಿನ ನಿಗಾ ವಹಿಸುವುದಾಗಿ ಭರವಸೆ ನೀಡಿದರು.

    ಪಕ್ಷದ ವರಿಷ್ಠರು, ಮುಖಂಡರು ಹಾಗೂ ಸದಸ್ಯರು ಸಂಪೂರ್ಣವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಅಧಿಕಾರ ಹಿಡಿಯಲು ಕೆಲ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರ ಸಹಕಾರವೂ ದೊರೆತಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.

    ಆನಂದದ ಕಣ್ಣೀರು, ಕಾಲಿಗೆ ಬಿದ್ದು ಆಶೀರ್ವಾದ: ತಮ್ಮ ಆಯ್ಕೆ ಪ್ರಕಟವಾಗುತ್ತಿದ್ದಂತೆ ಎಂಎಲ್‌ಸಿ ಜಯಮ್ಮ ಬಾಲರಾಜ್ ಮೊದಲಾದವರಿಂದ ಅಭಿನಂದನೆ ಸ್ವೀಕರಿಸುತ್ತಿದ್ದ ಶಶಿಕಲಾ ಹಠಾತ್ತನೇ ಗದ್ಘದಿತರಾದರು. ಇದು ಆನಂದಕ್ಕೆ ಬಂದಂಥ ಕಣ್ಣೀರೆಂದು ಹೇಳಿದ ಜಯಮ್ಮ ಅವರನ್ನು ಸಮಾಧಾನ ಪಡಿಸಿದರು.

    ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಎಚ್.ಆಂಜನೇಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ವೀಕ್ಷಕ ಎಚ್.ಎಂ.ರೇವಣ್ಣ, ಮಾಜಿ ಶಾಸಕರಾದ ಡಿ.ಸುಧಾಕರ್, ಬಿ.ಜಿ.ಗೋವಿಂದಪ್ಪ, ಶಾಸಕ ಟಿ.ರಘುಮೂರ್ತಿ ಮತ್ತಿತರ ಹಿರಿಯರ ಕಾಲಿಗೆ ಶಶಿಕಲಾ ಬಿದ್ದು ಆಶೀರ್ವಾದ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts