More

    ಡಯಾಲಿಸಿಸ್‌ಗೆ ಕರೊನಾ ಅಡ್ಡಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ರಾಜ್ಯದ ಸರ್ಕಾರಿ ಜಿಲ್ಲಾ, ತಾಲೂಕು ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಅತ್ಯಗತ್ಯವಿರುವ ಔಷಧ ಕೊರತೆ ಕಾಣಿಸಿದೆ.

    ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಫ್ರಿನ್ ಇಂಜೆಕ್ಷನ್ ಸಹಿತ ಅಗತ್ಯ ಪೂರಕ ಔಷಧಗಳ ಕೊರತೆ ಕಾಣಿಸಿರುವುದು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳನ್ನು ತೀವ್ರ ಆತಂಕಕ್ಕೆ ನೂಕಿದೆ.

    ರಾಜ್ಯದ 23 ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಇನ್ನೀತರ ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಲ್ಲಿ ಸಾವಿರಾರು ರೋಗಿಗಳು ನಿಯಮಿತವಾಗಿ ಡಯಾಲಿಸಿಸ್‌ಗೆ ಒಳಗಾಗ ಬೇಕಿದೆ. ಆದರೆ, ಕರೊನಾ ಮಾರಿ ಹತೋಟಿಗಾಗಿ ಘೋಷಿಸಿರುವ ಲಾಕ್‌ಡೌನ್‌ನಿಂದಾಗಿ ಡಯಾಲಿಸ್ ವೇಳೆ ಅಗತ್ಯವಿರುವ ಹೆಫ್ರಿನ್ ಸಹಿತ ಹಲವು ಔಷಧಗಳ ಕೊರತೆ ಉಂಟಾಗುತ್ತಿದೆ.

    ಇದರಿಂದಾಗಿ ಒಂದೆಡೆ ಪ್ರಸ್ತುತ ಡಯಾಲಿಸ್‌ಗೆ ಒಳಗಾಗುತ್ತಿರುವ ರೋಗಿಗಳಿಗೆ ಡಯಾಲಿಸ್ ಸಂಖ್ಯೆ ಕಡಿತಗೊಳಿಸಲಾಗುತ್ತಿದೆ. ವಾರಕ್ಕೆ ಮೂರು ಬಾರಿ ಡಯಾಲಿಸಿಸ್‌ಗೆ ಒಳಗಾಗುವ ರೋಗಿಗೆ ಎರಡು ದಿನ, ಎರಡು ದಿನವಿದ್ದರೆ ಒಂದು ದಿನ ಹೀಗೆ ಸಂಖ್ಯೆ ಕಡಿತ ಗೊಳಿಸುತ್ತಿರುವುದರಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ರೋಗಿಗಳು.

    ತಾಲೂಕು ಮಟ್ಟದ ಕೆಲ ಕೇಂದ್ರಗಳಲ್ಲಿ ನಾರ್ಮಲ್ ಸೆಲೆನ್ ಬಳಸಿ ಡಯಾಲಿಸಿಸ್ ಮಾಡಲಾಗುತ್ತಿದೆ. ಇದರಿಂದ ಅವಧಿ ಹೆಚ್ಚು ಮತ್ತು ರೋಗಿ ರಕ್ತದೊತ್ತಡದಲ್ಲಿ ಏರು ಪೇರಾಗುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ.

    ತೊಂದರೆ ಆಗಬಾರದು: ಡಯಾಲಿಸಿಸ್ ರೋಗಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳ ಬೇಕೆಂದು ಮಾ.26ರಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದ್ದರೂ, ಔಷಧ ಕೊರತೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಅಗತ್ಯ ಔಷಧಗಳ ಕೊರತೆ ಆಗದಂತೆ ಹಾಗೂ ಡಯಾಲಿಸಿಸ್ ಕೇಂದ್ರಗಳ ವೈದ್ಯಕೀಯ ಸಿಬ್ಬಂದಿ ಹಾಜರಾತಿಗೆ ಅಗತ್ಯ ಕ್ರಮಕ್ಕೆ ಇಲಾಖೆ ವೈದ್ಯಾಧಿಕಾರಿಗಳಿಗೆ ಸೂಚಿಸಿದೆ.

    ಜನರೇಟರ್ ಇಲ್ಲ: ಚಿತ್ರದುರ್ಗ ಜಿಲ್ಲಾಸ್ಪತ್ರೆ ಡಯಾಲಿಸಿಸ್ ಕೇಂದ್ರದಲ್ಲಿ ದಿನವೊಂದಕ್ಕೆ 27, ತಾಲೂಕು ಕೇಂದ್ರದಲ್ಲಿ 6 ರೋಗಿಗಳಿಗೆ ಈ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗುತ್ತಿದ್ದು, ಲಾಕ್‌ಡೌನ್‌ನಿಂದಾಗಿ ಈಗ ಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಚಿತ್ರದುರ್ಗ ಕೇಂದ್ರದಲ್ಲಿ ಜನರೇಟರ್ ಹಾಳಾಗಿದ್ದು, ಇಲ್ಲಿ ಇನ್ನು ಕೆಲ ಮೂಲ ಸೌಕರ್ಯಗಳಲ್ಲಿ ಸುಧಾರಣೆ ಆಗಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts