More

    ಜಿಪಂ ಕ್ರಿಯಾಯೋಜನೆ ಅಂಗೀಕಾರಕ್ಕೆ ಕರೊನಾ ಅಡ್ಡಿ

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಪ್ರಸಕ್ತ ಹಣಕಾಸು ಸಾಲಿನ ಜಿಪಂಗಳ ಕ್ರಿಯಾ ಯೋಜನೆ ಅನುಮೋದನೆಗೆ ಕರೊನಾ ಅಡ್ಡಿಯಾಗಿದೆ.

    ಇಂಥ ಸನ್ನಿವೇಶದಲ್ಲಿ ಹಿಂದಿನ ಸಾಲಿಗಿಂತ ಈ ಬಾರಿಯ ವೇತನ, ವೇತನೇತರ ಮೊತ್ತ 92 ಕೋಟಿ ರೂ. ಹೆಚ್ಚಳದೊಂದಿಗೆ 2020-21ನೇ ಸಾಲಿನ ಜಿಲ್ಲಾ ವಲಯ ಅನುದಾನ 1146 ಕೋಟಿ ರೂ.ಗೆ ಏರಿದೆ. ಈ ಪೈಕಿ ವೇತನೇತರ 462 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಯನ್ನು ಜಿಪಂ ಸಾಮಾನ್ಯ ಸಭೆ ಅಂಗೀಕರಿಸಬೇಕಿದೆ.

    ಆದರೆ, ಇದನ್ನು ಅಂಗೀಕರಿಸುವುದಾದರೂ ಹೇಗೆ? ಒಂದೆಡೆ ಅಧ್ಯಕ್ಷರ ರಾಜೀನಾಮೆಯಿಂದಾಗಿ ತೆರವಾಗಿರುವ ಸ್ಥಾನಕ್ಕೆ ನಡೆಯ ಬೇಕಿರುವ ಚುನಾವಣೆಗೆ ಲಾಕ್‌ಡೌನ್ ಅಡ್ಡಿಯಾಗಿದೆ. ಮಾರ್ಚ್ 27 ಕ್ಕೆ ಅಧಿಕಾರಾವಧಿ ಪೂರ್ಣಗೊಳಿಸಿರುವ ಜಿಪಂ 5 ಸ್ಥಾಯಿ ಸಮಿತಿಗಳನ್ನು ಹೊಸದಾಗಿ ರಚಿಸಬೇಕಾಗಿದೆ.

    ಸಮಿತಿಗಳು ಕ್ರಿಯಾಯೋಜನೆ ಕುರಿತು ಚರ್ಚಿಸಿ ಅಂಗೀಕರಿಸದ ಹೊರತು ಸಾಮಾನ್ಯ ಸಭೆಗೆ ವಿಷಯ ಮಂಡನೆ ಸಾಧ್ಯವಿಲ್ಲ. ಇದು ಚಿತ್ರದುರ್ಗ ಜಿಪಂ ಸಮಸ್ಯೆಯಾದರೆ, ಕರೊನಾ ಸೋಂಕಿನ ಭೀತಿಯಿಂದಾಗಿ ವೇತನೇತರ ಕ್ರಿಯಾಯೋಜನೆ ಅಂಗೀಕಾರಕ್ಕೆ ಸಾಮಾನ್ಯ ಸಭೆ ನಡೆಸಲು ರಾಜ್ಯದ ಇತರೆ ಜಿಪಂಗಳಿಗೂ ಸಾಧ್ಯವಾಗುತ್ತಿಲ್ಲ.

    ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ರಾಜೀನಾಮೆ ಮಾ.16 ರಂದೇ ಅಂಗೀಕಾರವಾಗಿದೆ. ಸದ್ಯಕ್ಕೆ ಉಪಾಧ್ಯಕ್ಷೆ ಎನ್.ಪಿ.ಸುಶೀಲಮ್ಮ ಪ್ರಭಾರ ಇದ್ದಾರೆ. ಇನ್ನು ಜಿಪಂ ಹಣಕಾಸು-ಲೆಕ್ಕಪರಿಶೋಧನೆ, ಶಿಕ್ಷಣ ಮತ್ತು ಆರೋಗ್ಯ, ಸಾಮಾಜಿಕ ನ್ಯಾಯ, ಸಾಮಾನ್ಯ ಹಾಗೂ ಯೋಜನೆ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿಗಳ ರಚನೆ ಆಗಬೇಕಿದೆ.

    ಸಮಿತಿ ರಚನೆ: ತಲಾ 20 ತಿಂಗಳ ಅಧಿಕಾರಾವಧಿಯ ಸಮಿತಿಗಳ ರಚನೆ ಈಗಾಗಲೇ ವಿಳಂಬವಾಗಿದ್ದು, ಇದರಿಂದಾಗಿ 3ನೇ ಹಾಗೂ ಅಂತಿಮ ಹಂತದ ಸಮಿತಿಗಳ ಅಧಿಕಾರಾವಧಿ ಮೊಟಕಾಗಲಿದೆ. ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿಯೇ ವಿಶೇಷ ಸಭೆ ಕರೆದು ಅಥವಾ ಹೊಸ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ರಚಿಸಬೇಕಾಗಿದೆ. 37 ಸದಸ್ಯ ಬಲದ ಜಿ.ಪಂ.ದಲ್ಲಿ ಉಚ್ಚಾಟಿತ ಸದಸ್ಯರ ಸಹಿತ ಕಾಂಗ್ರೆಸ್ 23, ಜೆಡಿಎಸ್-2, ಪಕ್ಷೇತರರು 2 ಹಾಗೂ ಬಿಜೆಪಿಯ 10 ಸದಸ್ಯರಿದ್ದಾರೆ. ಪ್ರಸ್ತುತ ಜಿಪಂ ಅವಧಿ 2021 ಮೇ 3 ರವರೆಗೆ ಇದೆ.

    ಮಾಸಿಕ ಕೆಡಿಪಿಗೂ ಅಡ್ಡಿ: ಕರೊನಾದಿಂದಾಗಿ ಕೆಡಿಪಿ ಸಭೆಗಳಿಗೂ ಅಡ್ಡಿಯಾಗಿದೆ. ಕಳೆದ ಫೆ.29 ರಂದು ಜಿಪಂ ಸಾಮಾನ್ಯ ಸಭೆ ಹಾಗೂ ಮಾರ್ಚ್ 11 ರಂದು ಮಾಸಿಕ ಕೆಡಿಪಿ ಸಭೆ ನಡೆದಿತ್ತು. ಏಪ್ರಿಲ್‌ನಲ್ಲಿ ಮಾಸಿಕ ಕೆಡಿಪಿ ನಡೆಸಲು ಸಾಧ್ಯವಾಗಲಿಲ್ಲ. ಈಗ ಪ್ರಭಾರ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಮೇ 11 ರಂದು ನಡೆಯಬೇಕಿದ್ದ ಮಾಸಿಕ ಕೆಡಿಪಿ ಸಭೆ ನಡೆಯಲಿಲ್ಲ. ಇದಕ್ಕಾಗಿ ಹೊಸ ದಿನಾಂಕ ನಿಗದಿಯಾಗುವುದೋ ಎಂಬುದಿನ್ನೂ ಖಚಿತವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts