More

    ನೀರುಗಂಟಿಗಳ ವೇತನ ಪಾವತಿಗೆ ನಿರ್ಧಾರ

    ನಾಯಕನಹಟ್ಟಿ; ಬಾಕಿ ಉಳಿದುಕೊಂಡಿರುವ ನೀರುಗಂಟಿಗಳ ವೇತನವನ್ನು ಶೀಘ್ರದಲ್ಲಿ ಪಾವತಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಭರವಸೆ ನೀಡಿದರು.

    ಪಪಂನಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ, 10 ಜನ ನೀರುಗಂಟಿಗಳು ಸುಮಾರು 2ವರ್ಷದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡಾಗ ಶೀಘ್ರದಲ್ಲೇ ವೇತನ ನೀಡುವುದಾಗಿ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮತ್ತು ಮುಖ್ಯಾಧಿಕಾರಿ ಡಿ.ಭೂತಪ್ಪ ಭರವಸೆ ನೀಡಿದರು.

    ಜಗಳೂರು ರಸ್ತೆಯ ಪಕ್ಕದಲ್ಲಿ ನಡೆಯುವ ವಾರದ ಸಂತೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಸ್ತಾವಕ್ಕೆ ಸದಸ್ಯರು ನಿರಾಕರಿಸಿದರು. ಸುಮಾರು 48 ಹಳ್ಳಿಹಳ್ಳಿಗಳಿಗೆ ನಾಯಕನಹಟ್ಟಿ ಕೇಂದ್ರಸ್ಥಾನವಾಗಿದೆ. ಇಲ್ಲಿ ಪ್ರತಿ ಸೋಮವಾರ ವಾರದ ಸಾರ್ವಜನಿಕ ಸಂತೆ ನಡೆಯುತ್ತದೆ. ರೈತರಿಗೆ, ಕೃಷಿಕರಿಗೆ ಸ್ಥಳಿಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸಿ ಆದಾಯ ತರುತ್ತದೆ. ಇಂತಹ ಸಂತೆಯನ್ನು ಈಗಿರುವ ಜಾಗದಿಂದ ಬೇರೆಡೆಗೆ ಸ್ಥಳಾಂತರ ಮಾಡಬಾರದು ಎಂದು ಟಿ.ಬಸಣ್ಣ, ಜೆ.ಆರ್.ರವಿಕುಮಾರ್, ಎನ್.ಮಹಾಂತಣ್ಣ ಹೇಳಿದರು.

    ಎಸ್.ಉಮಾಪತಿ ಮಾತನಾಡಿ, ಪ್ರಸ್ತುತ ನಡೆಯುವ ಸಂತೆ ಜಾಗ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಸೇರಿದೆ. ಹೊರಮಠದ ದೇವಾಲಯದ ಆಸ್ತಿ ಸುಮಾರು 9.10ಎಕರೆ ಇದ್ದು, 6 ಎಕರೆಗೆ ಮಾತ್ರ ಕಾಂಪೌಂಡ್ ಹಾಕಲಾಗಿದೆ. ಇನ್ನುಳಿದ ಜಾಗವನ್ನು ದೇವಾಲಯ ಸಮಿತಿ ಅಳತೆ ಮಾಡಿಸಿದ್ದು, ಶೀಘ್ರದಲ್ಲೇ ಸಂತೆಯನ್ನು ತೆರವುಗೊಳಿಸಿ ದೇವಾಲಯ ಸಮಿತಿ ಆಸ್ತಿಯನ್ನು ರಕ್ಷಣೆ ಮಾಡಲಿದೆ ಎಂದರು.

    ಮುಖ್ಯಾಧಿಕಾರಿ ಡಿ.ಭೂತಪ್ಪ ಮಾತನಾಡಿ, ಭವಿಷ್ಯದ ದೃಷ್ಟಿಯಿಂದ ವಾರದ ಸಂತೆಯನ್ನು ಸಮುದಾಯ ಆರೋಗ್ಯ ಕೇಂದ್ರ ಹಾಗೂ ನಿರೀಕ್ಷಣಾ ಮಂದಿರದ ಎದುರು ಇರುವ ಖಾಲಿ ಜಾಗಕ್ಕೆ ಸ್ಥಳಾಂತರಿಸುವುದು ಉತ್ತಮ ಎಂದು ಸಲಹೆ ನೀಡಿದರು.

    ಜೆ.ಟಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಬಹುತೇಕ ಕಟ್ಟಡಗಳು ನಿರ್ಮಾಣ ಪರವಾನಿಗೆ ಪಡೆದುಕೊಂಡಿಲ್ಲ. ಇದರಿಂದ ಪಟ್ಟಣಪಂಚಾಯಿತಿಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ ಎಂದರು. ಆಡಳಿತಾಧಿಕಾರಿ ಮಲ್ಲಿಕಾರ್ಜುನ ಪ್ರತಿಕ್ರಿಯಿಸಿ, ಮುಂದಿನ ದಿನಗಳಲ್ಲಿ ಅಂತಹ ಯಾವುದೇ ಪ್ರಕರಣಗಳು ಕಂಡು ಬಂದರೂ ಕಾನೂನು ಕ್ರಮಕೈಗೊಳ್ಳಲು ಮುಖ್ಯಾಧಿಕಾರಿ ಭೂತಪ್ಪ ಅವರಿಗೆ ಆದೇಶಿಸಿದರು.

    ಸಿದ್ದಲಿಂಗಮ್ಮ, ಬೋರಮ್ಮ ಮಾತನಾಡಿ, ಜಾಗನೂರಹಟ್ಟಿ ಗ್ರಾಮದಲ್ಲಿ ಮದಕರಿ ನಾಯಕರ ಪ್ರತಿಮೆ, ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಸ್ಥಾಪಿಸಲು ವಿಷಯ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಅನುದಾನದಲ್ಲಿ ಯಾವುದೇ ಪ್ರತಿಮೆಗಳನ್ನು ಸ್ಥಾಪಿಸುವಂತಿಲ್ಲ ಎಂಬ ಸುಪ್ರೀಂ ಕೋರ್ಟ್‌ನ ಆದೇಶವಿದೆ ಎಂದು ಆಡಳಿತಾಧಿಕಾರಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts