More

    ಕುಡಿವ ನೀರಲ್ಲಿ ರಾಜಕಾರಣ ಸಲ್ಲ

    ಚಿತ್ರದುರ್ಗ: ಕುಡಿಯುವ ನೀರು ವಿಷಯದಲ್ಲಿ ರಾಜಕಾರಣ ಮಾಡಬಾರದು. ವಿವಿ ಸಾಗರ ಜಲಾಶಯದಿಂದ ಚಳ್ಳಕೆರೆಗೆ ನೀರು ಹರಿಸುವ ವಿಷಯದಲ್ಲಿ ಶಾಸಕಿ ಪೂರ್ಣಿಮಾ ಅವರ ರದ್ಧಾಂತ ಬೇಸರ ತರಿಸಿದೆ ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಹೇಳಿದರು.

    ಸತತ ಒಂದು ತಾಸು ಜಲ-ಜಗಳ ಕುರಿತಂತೆ ದಾಖಲೆಗಳ ಸಹಿತ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    ವಾಣಿ ವಿಲಾಸ ಡ್ಯಾಂ ಇಡೀ ಜಿಲ್ಲೆಯ ಜನರ ಸ್ವತ್ತು. ಹಿರಿಯೂರಿನವರು ಮಾತ್ರ ಚಂದಾ ಎತ್ತಿ ಡ್ಯಾಂ ನಿರ್ಮಿಸಿಲ್ಲ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

    ಡ್ಯಾಂ ನಿರ್ಮಾಣ ವೇಳೆಯಲ್ಲಿ ಹಿರಿಯೂರು ಜತೆ ಚಳ್ಳಕೆರೆ ತಾಲೂಕಿಗೂ ನೀರಾವರಿ ಒದಗಿಸುವ ಉದ್ದೇಶವೂ ಇತ್ತು. ಆದರೆ, ನೀರಿನ ಕೊರತೆಯಿಂದ ಸಾಧ್ಯವಾಗಿಲ್ಲ. ನೀರನ್ನು ಪಡೆಯುವುದು ನಮ್ಮ ಹಕ್ಕು ಎಂದು ವಕಾಲತ್ತು ಮಂಡಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಗಾಗಿ ವಶಪಡಿಸಿಕೊಂಡಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಚಳ್ಳಕೆರೆ ತಾಲೂಕಿನ ರೈತರು ಒಂದು ಸಾವಿರ ಎಕರೆ ಭೂಮಿ ಕೊಟ್ಟಿದ್ದಾರೆ. ಯೋಜನೆಯಡಿ ಮೊದಲಿದ್ದ 21.25 ಟಿಎಂಸಿ ಅಡಿ ನೀರಿನ ಪ್ರಮಾಣವೀಗ 29.9 ಟಿಎಂಸಿಗೆ ಏರಿದೆ. ಯೋಜನೆ ಪೂರ್ಣ ಅನುಷ್ಠಾನ ಆಗುವವರೆಗೆ ವಿವಿ ಸಾಗರದಿಂದ 5.25 ಜತೆ ಇನ್ನು 2 ಟಿಎಂಸಿಯನ್ನು ಕುಡಿವ ನೀರಿಗೆಂದೂ ಹೆಚ್ಚುವರಿ ತಾತ್ಕಾಲಿಕವಾಗಿ ಹಂಚಿಕೆ ಮಾಡಲಾಗಿದೆ. ಜಲಾಶಯದಿಂದ ನದಿಗೆ ನೀರು ಬಿಡಬೇಕೆಂದು ಡಿಪಿಆರ್‌ನಲ್ಲೇ ಇತ್ತು. ಪೈಪ್‌ಲೈನ್ ಮೂಲಕವಾದರೆ 150 ಕೋಟಿ ರೂ. ಅಧಿಕ ಹಣ ಬೇಕಾಗುತ್ತದೆ.

    ಕೆಲ ಸಂಘಟನೆಗಳ ಮುಖಂಡರ ಒತ್ತಡಕ್ಕೆ ಮಣಿದು, ಶಾಸಕಿ ಪೂರ್ಣಿಮಾ ಲಾಕ್‌ಡೌನ್ ಉಲ್ಲಂಘಿಸಿ ನೀರು ನಿಲ್ಲಿಸಿರಬಹುದು. ಈ ವಿಷಯ ದೊಡ್ಡದು ಮಾಡುವುದು ಬೇಕಿಲ್ಲ ಎಂದರು.

    ಕುಡಿವ ನೀರು ವಿಷಯದಲ್ಲಿ ಸಿಎಂ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ. ನಾನು ಕಾನೂನು ಮೀರಿ ಅಥವಾ ಯಾರ ಮೇಲೂ ಒತ್ತಡ ಹೇರಿ ನೀರು ಹರಿಸಿಲ್ಲ.

    ಚಳ್ಳಕೆರೆ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ನೀರು ಹರಿಸುವುದರಿಂದ ಹಿರಿಯೂರಿನ ರೈತರಿಗೆ ಹಾಗೂ ಎರಡು ತಾಲೂಕುಗಳಲ್ಲಿ ಬ್ಯಾರೇಜ್‌ಗಳ ನಿರ್ಮಾಣಕ್ಕೂ ಅನುಕೂಲವಾಗಿದೆ ಎಂದರು.

    ಜಿಪಂ ಸದಸ್ಯ ಬಿ.ಪಿ.ಪ್ರಕಾಶಮೂರ್ತಿ, ಮಾಜಿ ಅಧ್ಯಕ್ಷ ರವಿಕುಮಾರ್, ಮಾಜಿ ಸದ್ಯ ಬಾಬುರೆಡ್ಡಿ, ತಾಪಂ ಅಧ್ಯಕ್ಷ ಡಿ.ಎಂ.ಲಿಂಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts