More

    ಜಾಹೀರಾತು ನೀತಿಗೆ ಸರ್ಕಾರದ ಜತೆ ಮಾತುಕತೆ

    ಚಿತ್ರದುರ್ಗ:  ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಸಂಘಗಳಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದೆ ಎಂದು ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ ಹೇಳಿದರು.

    ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

    ಸಂಘ ರಚನೆ ಆದಂದಿನಿಂದಲೂ ಪತ್ರಿಕೆಗಳ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಜಾಹೀರಾತು ನೀತಿ ಬಗ್ಗೆಯೂ ಸರ್ಕಾರದ ಜತೆ ಮಾತುಕತೆ ನಡೆಸಲಾಗಿದೆ. ಜಿಲ್ಲಾ, ಪ್ರಾದೇಶಿಕ ಪತ್ರಿಕೆಗಳಿಗೆ ಹೆಚ್ಚಿನ ರೀತಿಯಲ್ಲಿ ಜಾಹೀರಾತು ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲವೆಂದು ಹೇಳಿದರು.

    ಪತ್ರಕರ್ತ ಅನಂತ ಚಿನಿವಾರ ಉಪನ್ಯಾಸ ನೀಡಿ, ಆಂಗ್ಲ ಮತ್ತು ಕನ್ನಡ ಪತ್ರಿಕೆಗಳಿಗೆ ತನ್ನದೆ ಆದ ಸ್ಥಾನ-ಮಾನಗಳಿವೆ. ಇದರಲ್ಲಿ ಮೇ ಲು-ಕೀಳು ಎಂಬುದಿಲ್ಲ. ಪತ್ರಕರ್ತರು ಸಂಘ, ಪತ್ರಿಕೆಗಳ ಗೌರವವನ್ನು ಕಾಪಾಡಬೇಕು ಎಂದು ಹೇಳಿದರು.

    ಭ್ರಷ್ಟಾಚಾರ ಅಪಾಯಕಾರಿ. ಇದು ಗುಣ ಮಟ್ಟದಲ್ಲಿ ರಾಜಿ ಮಾಡಿಸುತ್ತದೆ. ಭಾಷೆ ಉಳಿಸಿ ಬೆಳೆಸುವ ಕೆಲಸ ಪತ್ರಕರ್ತರಿಂದ ಆಗಬೇಕಿದೆ. ಪತ್ರಕರ್ತರು ಪ್ರಶ್ನಿಸುವ ಹಕ್ಕನ್ನು ಬೆಳೆಸಿಕೊಳ್ಳಬೇಕು. ಹೇಳಿಕೆಗಳೇ ಸುದ್ದಿ ಆಗಬಾರದು. ಹಗರಣಗಳನ್ನು ಬಯಲಿಗೆ ಎಳೆಯಬೇಕಿದೆ ಎಂದರು.

    ಪತ್ರಕರ್ತ ಸಿ.ಹೆಂಜಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಜಿಒಎನ್ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಚಿತ್ರದುರ್ಗ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ರಾಜ್ಯ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಕಾರ್ಯಾಧ್ಯಕ್ಷ ಎಂ.ಮಂಜುನಾಥ್, ರೇಖಾ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಲಕರ್ಣಿ, ಕೋಶಾಧ್ಯಕ್ಷ ನಾಗತಿಹಳ್ಳಿ ನಾಗರಾಜ್ ಮತ್ತಿತರರು ಇದ್ದರು. ಎಂ.ವಿ.ಪವಿತ್ರಾ ಪ್ರಾರ್ಥಿಸಿದರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಸ್.ಟಿ.ನವೀನ್‌ಕುಮಾರ್ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts