More

    ಭದ್ರೆಗಿರುವ ಅಡ್ಡಿ ಆತಂಕ ದೂರ ಮಾಡಿ

    ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಪಡೆಯುವ ರೈತರ ಕನಸನ್ನು ಶೀಘ್ರ ನನಸು ಮಾಡಬೇಕಿದೆ, ಇದಕ್ಕಾಗಿ ಭೂಸ್ವಾಧೀನ ಸಹಿತ ಎಲ್ಲ ಅಡ್ಡಿ, ಆತಂಕಗಳನ್ನೂ ಕೂಡಲೇ ನಿವಾರಿಸಬೇಕಾಗಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

    ನಗರದ ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಚೇರಿಯಲ್ಲಿ ಬುಧವಾರ ಪ್ರಗತಿ ಪರಿಶೀಲಿಸಿ ಮಾತನಾಡಿ, 3735 ಕೋಟಿ ರೂ. ವೆಚ್ಚವಾಗಿರುವ, ಅಂದಾಜು 15 ಸಾವಿರ ಕೋಟಿ ರೂ. ಅಧಿಕ ವೆಚ್ಚದ ಯೋಜನೆ ಶೀಘ್ರ ಪೂರ್ಣಗೊಳಿಸಬೇಕಿದೆ ಎಂದರು.

    ತುಂಗಾದಿಂದ ಭದ್ರಾ ಜಲಾಶಯಕ್ಕೆ 17.40 ಟಿಎಂಸಿ ಅಡಿ ನೀರು ಪಡೆಯುವ ಕಾಮಗಾರಿ ವಿಳಂಬವಾಗಿದೆ. ತುಮಕೂರು ಶಾಖಾ ಕಾಲುವೆ ಹಾಗೂ ಚಿತ್ರದುರ್ಗ ಶಾಖಾ ಕಾಲುವೆ ಆರಂಭದ 14 ಕಿ.ಮೀ. ಸೇರಿ ನಾನಾ ಕಾಮಗಾರಿಗಳಿಗೆ ಅಗತ್ಯ ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಬೇಕಿದೆ. ಇಲ್ಲವಾದಲ್ಲಿ ರೈತರಿಗೆ ನೀರು ಕೊಡುತ್ತೇವೆ ಎನ್ನುವುದು ಬರೀ ಬುರುಡೆ ಬಿಟ್ಟಂತಾಗುತ್ತದೆ. ಆದ್ದರಿಂದ ಭೂ ಸ್ವಾಧೀನ ತೊಡಕುಗಳನ್ನು ನಿವಾರಿಸಿ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಶೀಘ್ರದಲ್ಲೇ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

    ಜಲಾಶಯದಿಂದ ಅಜ್ಜಂಪುರ ಟನೆಲ್‌ವರೆಗಿನ ಬಹುತೇಕ ಕಾಮಗಾರಿಗಳಿಗೆ ಇದ್ದ ಅಡೆ ತಡೆಗಳು ನಿವಾರಣೆಯಾಗಿವೆ. ಈ ಭಾಗದಲ್ಲಿ ಪ್ರಗತಿ ಸಾಧಿಸದ ಇಬ್ಬರು ಗುತ್ತಿಗೆದಾರರನ್ನು ಬದಲಿಸ ಬೇಕಿದೆ. ವೈ-ಜಂಕ್ಷನ್ ಸೊನ್ನೆಯಿಂದ 160 ಕಿಮೀ ಉದ್ದದ ತುಮಕೂರು ಶಾಖಾ ಕಾಲುವೆ ಹಾಗೂ ಚಿತ್ರದುರ್ಗ ಶಾಖಾ ಕಾಲುವೆ 0-14 ಕಿಮೀ ವ್ಯಾಪ್ತಿ ಬಾಕಿ 2 ಕಿಮೀ ಗೆ ಸಂಬಂಧಿಸಿದಂತೆ ಭೂಮಿ ಸ್ವಾಧೀನವಾಗಿಲ್ಲ. ಈ ಕಾಮಗಾರಿ ಆಗದಿದ್ದರೆ ಹೊಸದುರ್ಗ, ಹೊಳಲ್ಕೆರೆಗೆ ನೀರು ಕೊಡಲು ತಕ್ಷಣಕ್ಕೆ ಸಾಧ್ಯವಾಗದು ಎಂದರು.

    ಯೋಜನೆ ಮುಖ್ಯ ಇಂಜಿನಿಯರ್ ರಾಘವನ್, ಇಇಗಳಾದ ಟಾಟಾ ಶಿವನ್, ಚಂದ್ರಹಾಸ, ಶಿವಪ್ರಕಾಶ್, ಶ್ರೀಧರ್, ಎಸ್‌ಎಲ್‌ಒ ಕೆ. ಸರೋಜಾ, ಚಿತ್ರದುರ್ಗ ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸೇರಿ ನಾನಾ ತಹಸೀಲ್ದಾರ್‌ಗಳು, ವಿಶ್ವೇಶ್ವರಯ್ಯಜಲ ನಿಗಮ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ರೈತರ ಮನೆಗಳಿಗೆ ಹೋಗುತ್ತೇನೆ: 2 ಕಿ.ಮೀ ಕಾಲುವೆಗೆ ಹೊಸದುರ್ಗದ ಅಬ್ಬಿನಹೊಳಲು ಪ್ರದೇಶದಲ್ಲಿ 44 ಎಕರೆ ಸ್ವಾಧೀನವಾಗ ಬೇಕಿದೆ. ಅದಕ್ಕಾಗಿ 45 ರೈತರಿಗೆ ನೋಟಿಸ್ ಕೊಡಲಾಗಿದೆ. ಜಮೀನು ಕಳೆದುಕೊಳ್ಳಲ್ಲಿರುವ ರೈತರ ಮನೆಗಳಿಗೆ ಮತ್ತೆ ಹೋಗಿ ಮಾತುಕತೆ ನಡೆಸುತ್ತೇನೆ ಎಂದು ಸಂಸರು ಹೇಳಿದರು. ಹೆಚ್ಚುವರಿ ಪರಿಹಾರಕ್ಕೆ ನಿಗಮ ಒಪ್ಪಿದ್ದರೂ ಕಾನೂನಿನ ಸಹಮತವಿಲ್ಲ. ಆದರೂ ರೈತರ ಪರ ಆಯಾ ಜಿಲ್ಲಾಡಳಿತಗಳು ಕ್ರಮ ತೆಗೆದುಕೊಳ್ಳುವ ವಿಶ್ವಾಸವಿದೆ. ರೈತರು ಒಪ್ಪದಿದ್ದರೆ ನ್ಯಾಯಾಲಯ ತೀರ್ಮಾನಿಸಬೇಕಾಗುತ್ತದೆ. ಅಜ್ಜಂಪುರ ಬಳಿಯ ರೈಲ್ವೆ ಕೆಳ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ನೀರಿನ ಹರಿವಿಗಿದ್ದ ಮುಖ್ಯತೊಡಕೂ ನಿವಾರಣೆ ಆಗಿದೆ ಎಂದರು.

    ಜಗಳೂರಿಗೆ 2,42 ಟಿಎಂಸಿ ಅಡಿ ನೀರು: ಜಗಳೂರಿಗೆ 2.42 ಟಿಎಂಸಿ ಅಡಿ ನೀರು ಹಂಚಿಕೆ ಆಗಿದ್ದರೂ, ಹೊಸ ಕೆರೆಗಳ ಸಂಖ್ಯೆಗೆ ಡಿಪಿಆರ್ ಆಗಿಲ್ಲ. ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳ ಕೆರೆಗಳನ್ನು ತುಂಬಿಸಲು 538.71 ಕೋಟಿ ರೂ., ಪಾವಗಡ ತಾಲೂಕು ಕೆರೆಗಳನ್ನು ತುಂಬಿಸಲು 6321.45 ಕೋಟಿ ರೂ. ಹಾಗೂ ರಾಣಿಕೆರೆ-108.21, ಸಾಣೀಕೆರೆಗಾಗಿ 58.95 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ನಾರಾಯಣಸ್ವಾಮಿ ಹೇಳಿದರು.

    ಡಿಎಸ್ ಹಳ್ಳಿ ಬಳಿಯ ಎನ್‌ಎಚ್ 48ರ ಬೈಪಾಸ್ ಹಾಗೂ ರಾ.ಹೆ.ಗಳಲ್ಲಿ ಬಾಕ್ಸ್‌ಗಳನ್ನು ಅಳವಡಿಸಲು ಎಂಟು ಕೋಟಿ ರೂ. ವೆಚ್ಚವಾಗಲಿದೆ. ಸಮೀಪದ ರೈಲ್ವೆ ಕ್ರಾಸಿಂಗ್ ಬಳಿ ಕಾಮಗಾರಿಗೆ ಇಲಾಖೆಗೆ ಹಣ ಪಾವತಿಸಲಾಗಿದೆ.
    ಎ.ನಾರಾಯಣಸ್ವಾಮಿ ಸಂಸದರು

    ಯೋಜನೆಯಡಿ 29.90 ಟಿಎಂಸಿ ಅಡಿ ನೀರು ಹಂಚಿಕೆ ಆಗಿದ್ದು, 2,25,515 ಹೆ. ನೀರಾವರಿ ಕ್ಷೇತ್ರ ಹಾಗೂ ನಾಲ್ಕು ಜಿಲ್ಲೆಗಳ 367 ಕೆರೆಗಳ ನೀರು ತುಂಬಿಸಲಾಗುತ್ತಿದೆ.
    ಯೋಜನೆ (ವಿವರ)
    ನೀರಾವರಿ ಕ್ಷೇತ್ರ ಹೆ.-ಕೆರೆಗಳ ಸಂಖ್ಯೆ
    ತರೀಕೆರೆ-22189-81
    ಕಡೂರು-22366-32
    ಹೊಸದುರ್ಗ-44608-27
    ಹೊಳಲ್ಕೆರೆ-371-21
    ಹಿರಿಯೂರು-67034-32
    ಚಿತ್ರದುರ್ಗ-28966-8
    ಚಳ್ಳಕೆರೆ-13266-51
    ಮೊಳಕಾಲ್ಮೂರು-00-20
    ಚಿಕ್ಕನಾಯಕನಹಳ್ಳಿ-4657-19
    ಸಿರಾ-14558-41
    ಪಾವಗಡದ-00-30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts