More

    ಮುಂದುವರಿದ ಮಳೆ..ಮನೆಗಳೊಳಗೆ ನೀರು; ಚಿತ್ರದುರ್ಗ ಜಿಲ್ಲೆಯಲ್ಲಿ 20 ಮನೆಗಳಿಗೆ ಹಾನಿ

    ಚಿತ್ರದುರ್ಗ: ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಮಂಗಳವಾರ ರಾತ್ರಿ 20 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಹಲವು ಮನೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಸುಮಾರು 18 ಹೆಕ್ಟೇರ್‌ಗೂ ಹೆಚ್ಚು ಬೆಳೆ ನಷ್ಟ ಉಂಟಾಗಿದೆ. ವೇದಾವತಿ ನದಿ ನೀರಿನಲ್ಲಿ ಈಜಲು ಇಳಿದಿದ್ದ ಯುವಕನೊಬ್ಬ ಮೃತಪಟ್ಟಿದ್ದಾನೆ.

    ಜಿಲ್ಲೆಯ ವಿವಿಧೆಡೆ ಮನೆಗಳು ಹಾನಿಗೆ ಒಳಗಾಗಿವೆ. ಚಿತ್ರದುರ್ಗ-3, ಚಳ್ಳಕೆರೆ 1, ಹಿರಿಯೂರು 3, ಹೊಸದುರ್ಗ 5, ಹೊಳಲ್ಕೆರೆ 4, ಮೊಳಕಾಲ್ಮೂರಲ್ಲಿ 4 ಮನೆಗಳಿಗೆ ಹಾನಿಯಾಗಿದೆ. ಮೆಕ್ಕೆಜೋಳ, ಶೇಂಗಾ ಸೇರಿ ಇತರೆ 13.66 ಹೆಕ್ಟೇರ್ ಬೆಳೆ ಹಾಗೂ 4.4 ಹೆ. ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ.

    ಮೊಳಕಾಲ್ಮೂರಲ್ಲಿ ವಾರದ ಸಂತೆಗೆ ಅಡ್ಡಿ:

    ಮೊಳಕಾಲ್ಮೂರಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ವಾರದ ಸಂತೆಗೆ ಅಡ್ಡಿಪಡಿಸಿ ಅವಾಂತರ ಸೃಷ್ಟಿಸಿತು. ಮಂಗಳವಾರ ಬೆಳಗ್ಗೆ ಮತ್ತು ರಾತ್ರಿ ಬಿಡುವು ಕೊಟ್ಟಿದ್ದ ವರುಣ ಬುಧವಾರ ಬೆಳಗ್ಗೆ 9 ಗಂಟೆಗೆ ಶುರುವಾಗಿ ಮಧ್ಯಾಹ್ನದವರೆಗೂ ಸುರಿಯಿತು.

    ವಾರದ ಸಂತೆಯಲ್ಲಿ ಹಣ್ಣು, ತರಕಾರಿ ನೆನೆಯದಂತೆ ತಡೆಯಲು ವ್ಯಾಪಾರಸ್ಥರು ಹರಸಾಹಸಪಟ್ಟರು. ಕೆಲವರು ತಾಡಪಲ್ ಹಾಕಿಕೊಂಡರೆ, ಮತ್ತೆ ಕೆಲವರು ಮಳೆಯಲ್ಲೇ ಕಾಲ ಹಾಕಿದರು.

    ಮೂರ‌್ನಾಲ್ಕು ತಾಸು ಬಿಡದೆ ಸುರಿದ ಮಳೆಗೆ ಜನರು ಮನೆಯಿಂದ ಹೊರ ಬರದಾದರು. ಶಾಲೆಗೆ ತೆರಳುವ ಮಕ್ಕಳಿಗೆ ಕಿರಿ ಕಿರಿಯಾಯಿತು. ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಕಾಮಗಾರಿ ದೊಡ್ಡ ಅವಾಂತರ ತಂದೊಡ್ಡಿದೆ. ರಸ್ತೆಯುದ್ದಕ್ಕೂ ಕೆಸರು, ತಗ್ಗು ಗುಂಡಿಗಳು… ತುಸು ಮೈಮರೆತರೆ ಅನಾಹುತ..ಇದರಿಂದಾಗಿ ರೋಸಿ ಹೋಗಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ದಾರಿ ಹೋಕರು ಹಿಡಿ ಶಾಪ ಹಾಕುತ್ತಿದ್ದಾರೆ.

    ಈ ವರ್ಷ ಮುಂಗಾರು ತಡವಾಗಿ ಬಂದ ಕಾರಣ ಕಳೆದ 15 ದಿನಗಳಿಂದ ಶೇಂಗಾ ಬಿತ್ತನೆ ಚುರುಕು ಪಡೆದಿತ್ತು. ಬಿತ್ತನೆ ಪ್ರದೇಶದಲ್ಲಿ ತೇವಾಂಶ ಹೆಚ್ಚಿದ್ದರಿಂದ ಬೀಜ ಕೊಳೆ ರೋಗದ ಆತಂಕ ರೈತರ ನಿದ್ದೆಗೆಡಿಸಿದೆ.

    ಕೊಂಡ್ಲಹಳ್ಳಿ ಭಾಗದಲ್ಲಿ ಮನೆಗಳೊಳಗೆ ನೀರು:

    ಕೊಂಡ್ಲಹಳ್ಳಿ ಸುತ್ತಮುತ್ತಲೂ ಉತ್ತಮ ಮಳೆ ಸುರಿದಿದೆ. ಬುಧವಾರ ಬೆಳಗಿನಿಂದಲೇ ದಟ್ಟ ಮೋಡ ಕವಿದ ವಾತಾವರಣ ಕಂಡು ಬಂತು. ಬೆಳಗ್ಗೆ 9 ಗಂಟೆಗೆ ಶುರುವಾದ ಮಳೆ ರಭಸದಿಂದ ಸುರಿಯಿತು. ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಅಲ್ಲಲ್ಲಿ ಸಮಸ್ಯೆ ತಂದೊಡ್ಡಿತು.

    ಚರಂಡಿಗಳೆಲ್ಲ ತುಂಬಿ ಹರಿದಿವೆ. ಮಕ್ಕಳು ಶಾಲೆಗೆ ಹೋಗುವುದೂ ಕಷ್ಟವಾಗಿತ್ತು. ಬಿ.ಜಿ.ಕೆರೆ ಬಸವೇಶ್ವರ ನಗರದ ಲಿಡ್ಕರ್ ಕಾಲನಿಯಲ್ಲಿ ಮನೆಗಳಿಗೆ ನೀರು ನುಗ್ಗಿ ಜನರಲ್ಲಿ ಆತಂಕ ಮೂಡಿಸಿತು.

    ಮನೆಗಳಲ್ಲಿನ ದವಸ-ಧಾನ್ಯಗಳು, ಇತರ ಗೃಹಬಳಕೆಯ ವಸ್ತುಗಳು ನೀರು ಪಾಲಾಗಿವೆ. ಇದರಿಂದ ಜನರಿಗೆ ಅಪಾರ ನಷ್ಟ ಉಂಟಾಗಿದೆ. ಮನೆಯೊಳಕ್ಕೆ ಹೆಚ್ಚು ನೀರು ನುಗ್ಗಿದ್ದರಿಂದ ಜನರಲ್ಲಿ ಬಹಳ ಆತಂಕ ಉಂಟಾಗಿತ್ತು.

    ಕಾಲನಿಯ ಲಿಡ್ಕರ್ ಸಮುದಾಯ ಭವನ, ಬಿಎಸ್‌ಎನ್‌ಎಲ್ ಕಚೇರಿ ಕಾಂಪೌಂಡ್ ಗೋಡೆಗಳು ನೆಲಕ್ಕುರುಳಿವೆ. ಬಿಜಿ ಕೆರೆಯಲ್ಲಿ ಕರೆಂಟ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದದ್ದರಿಂದ ವಿದ್ಯುತ್ ವ್ಯತ್ಯಯವಾಗಿದೆ. ಬೆಸ್ಕಾಂ ಸಿಬ್ಬಂದಿ ಮರಗಳನ್ನು ತೆರವುಗೊಳಿಸುವಲ್ಲಿ ಹರಸಾಹಸಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts