More

    ಹೈಟೆಕ್ ಮಟನ್ ಮಾರುಕಟ್ಟೆ ಶೀಘ್ರ

    ಚಿತ್ರದುರ್ಗ: ಮಟನ್ ಮಾರುಕಟ್ಟೆ ಹೊಸದಾಗಿ ನಿರ್ಮಾಣ ಮಾಡಲು ನಗರಸಭೆಯಿಂದ ನೀಲಿ ನಕ್ಷೆ ತಯಾರಿಸಿದ್ದು, ಕೆಲ ದಿನಗಳಲ್ಲಿ ಹೈಟೆಕ್ ಮಾಂಸದ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

    ನಗರದ ಪ್ರಸನ್ನ ಚಿತ್ರಮಂದಿರ ರಸ್ತೆಯಲ್ಲಿರುವ ಮಾಂಸದ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ನಗರದಲ್ಲಿರುವ ಮಾಂಸದ ಮಾರುಕಟ್ಟೆ ಸ್ವಚ್ಛವಾಗಿಲ್ಲ. ಈ ಕಾರಣಕ್ಕೆ ಜನ ಇಲ್ಲಿ ಖರೀದಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದರು.

    3 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೈಲಿಯ ಮಾರುಕಟ್ಟೆ ನಿರ್ಮಿಸಿಕೊಡುತ್ತೇವೆ. ಇದರಿಂದ ಕೆಲ ದಿನ ವ್ಯಾಪಾರಕ್ಕೆ ತೊಂದರೆಯಾಗಬಹುದು ಎಂದು ಹೇಳಿದರು.

    ಕರೊನಾ ಸೋಂಕಿನ ಆತಂಕ ಇರುವುದರಿಂದ ಇನ್ನು ಮುಂದೆ ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಮಾರುಕಟ್ಟೆ ವಾತಾವರಣ ಸ್ವಚ್ಛವಾಗಿರಬೇಕು. ಈ ಹಿನ್ನೆಲೆಯಲ್ಲಿ ವ್ಯವಸ್ಥಿತವಾದ ಮಾರುಕಟ್ಟೆಯ ಅಗತ್ಯವಿದೆ. ಶುಚಿತ್ವಕ್ಕೆ ಒತ್ತು ಕೊಟ್ಟು ವ್ಯಪಾರ ವಹಿವಾಟು ನಡೆಯಬೇಕು ಎಂದು ತಿಳಿಸಿದರು.

    ನಗರಸಭೆ ಪೌರಾಯುಕ್ತ ಹನುಮಂತರಾಜು ಮಾತನಾಡಿ, ಇಲ್ಲಿರುವ ಮಟನ್ ಮಾರುಕಟ್ಟೆ 80 ವರ್ಷ ಹಳೆಯದು. ಈ ಹಿನ್ನೆಲೆಯಲ್ಲಿ 7500 ಚದರ ಅಡಿ ವಿಸ್ತೀರ್ಣದಲ್ಲಿ ಆಧುನಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದರು.

    ಹೊಸ ಮಾರುಕಟ್ಟೆಯಲ್ಲಿ 84 ಮಳಿಗೆಗಳಿರುತ್ತವೆ. ಮೊದಲ ಮಹಡಿಯಲ್ಲಿ 24 ಮಳಿಗೆಗಳಿರುತ್ತವೆ. ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಮಾಡಲಾಗುವುದು. ಕಟ್ಟಡದ ಮೇಲ್ಭಾಗದಲ್ಲಿ ಕೋಲ್ಡ್ ಸ್ಟೋರೇಜ್ ಮಾಡಲಾಗುವುದು. ಇದರಿಂದ ಉಳಿದ ಮಾಂಸವನ್ನು ಕೆಡದಂತೆ ಸಂಗ್ರಹಿಸಿಡಬಹುದು ಎಂದು ತಿಳಿಸಿದರು.

    ಸಮರ್ಪಕ ನೀರು, ವಾಷ್ ಬೇಸಿನ್, ಶೌಚಗೃಹ ಸೇರಿ ಎಲ್ಲ ರೀತಿಯ ಸೌಲಭ್ಯಗಳು ಹೊಸ ಮಾಂಸ ಮಾರುಕಟ್ಟೆಯಲ್ಲಿರಲಿವೆ ಎಂದು ನೀಲಿ ನಕ್ಷೆ ಪ್ರದರ್ಶಿಸಿದರು.

    ನಗರಸಭೆ ಸದಸ್ಯರಾದ ಮಹಮದ್ ಪಾಷಾ, ಹರೀಶ್, ಟಿ.ರಮೇಶ್, ವೆಂಕಟೇಶ್, ಕೃದ್ದಿನ್, ತಾಪಂ ಮಾಜಿ ಸದಸ್ಯ ವೀರೇಶ್, ಮುಜಿಬುಲ್ಲಾ, ರಫೀಕ್, ಇಂಜಿನಿಯರ್‌ಗಳಾದ ಮನೋಹರ್, ಕಿರಣ್, ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್‌ಇನ್ಸ್‌ಪೆಕ್ಟರ್ ಭಾರತಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts