More

    3ನೇ ಅಲೆ ತಡೆಗೆ ಸನ್ನದ್ಧರಾಗಿ: ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಸೂಚನೆ

    ಚಿತ್ರದುರ್ಗ: ರೂಪಾಂತರಿ ಕೋವಿಡ್ 3ನೇ ಅಲೆ ಹತ್ತಿರವಾಗುತ್ತಿದೆ. ಅದನ್ನು ಎದುರಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಿ.
    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ನೀಡಿದ ಸೂಚನೆಯಿದು. ಸದ್ಯದಲ್ಲೇ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಬೆಡ್, ಔಷಧ, ತಜ್ಞ ವೈದ್ಯರು, ಅಗತ್ಯ ಸಿಬ್ಬಂದಿಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

    ಜಿಲ್ಲೆಯಲ್ಲಿ ಶೇಂಗಾ ಸಂಸ್ಕರಣಾ ಘಟಕ ಆರಂಭಿಸಲು ಕೇಂದ್ರ ಸೂಚಿಸಿದ್ದರೂ ಅನುಷ್ಠಾನ. ಫಲಾನುಭವಿಗಳಿಗೆ ಸಾಲ ಮಂಜೂರಾಗುತ್ತಿಲ್ಲ. ಐದು ಲಕ್ಷ ರೂ. ಸಬ್ಸಿಡಿ ಇದೆ, ಸಾಲ ಕೊಡದಿದ್ದರೆ ಹೇಗೆ? ನಿಮ್ಮಿಂದ ಉದ್ಯಮಿಗಳು, ರೈತರಿಗೆ ತೊಂದರೆಯಾಗಿದೆ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಜಂಟಿ ಕೃಷಿ ನಿರ್ದೇಶಕರ ವಿರುದ್ಧ ಹರಿಹಾಯ್ದ ಸಚಿವರು, ಈ ಕುರಿತು ಅಭಿವೃದ್ಧಿ ಆಯುಕ್ತರೊಂದಿಗೆ ಸಭೆ ಆಯೋಜಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು.

    ಜಿಲ್ಲಾಸ್ಪತ್ರೆಗೆ ಕನಿಷ್ಠ 10 ತಜ್ಞ ವೈದ್ಯರ ಅಗತ್ಯವಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಡಾ.ಬಸವರಾಜಪ್ಪ ಹೇಳಿದರು. ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ, ಜಿಲ್ಲಾಸ್ಪತ್ರೆ ಹಾಗೂ ಐದು ತಾಲೂಕುಗಳಲ್ಲಿಯೂ ಆಮ್ಲಜನಕ ಘಟಕ ಸಿದ್ಧವಿದೆ. ಹೊಳಲ್ಕೆರೆಯಲ್ಲಿ 10 ದಿನದೊಳಗೆ ಕಾರ್ಯಾರಂಭ ಮಾಡಲಿದೆ ಎಂದು ಮಾಹಿತಿ ನೀಡಿದರು. ಶಾಲಾ ಕೊಠಡಿಗಳ ನಿರ್ಮಾಣ ಕುರಿತು ಡಿಡಿಪಿಐ ರವಿಶಂಕರ್ ರೆಡ್ಡಿ ಮಾಹಿತಿ ನೀಡಿದರು. ಡಿಸಿ ಕವಿತಾ ಎಸ್.ಮನ್ನಿಕೇರಿ, ಜಿಪಂ ಸಿಇಒ ಡಾ.ಕೆ.ನಂದಿನಿದೇವಿ, ಎಸ್ಪಿ ಜಿ.ರಾಧಿಕಾ ಇತರರಿದ್ದರು.

    ಮರುಕಳಿಸದಿರಲಿ ತಪ್ಪು

    ಮೊದಲ ಮತ್ತು 1ನೇ ಅಲೆಯಲ್ಲಾದ ಪ್ರಮಾದಗಳಿಂದ ಸಾಕಷ್ಟು ನೋವು-ಸಾವುಗಳಾಗಿವೆ. ಮತ್ತೆ ಅದೇ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಸೂಚಿಸಿದರು. ಆ್ಯಕ್ಸಿಜನ್ ಕೊರತೆ ಆಗಬಾರದು, ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಪರಿಹಾರ ವಿತರಿಸಬೇಕು ಎಂದರು. ಕೋಟ್ಯಂತರ ರೂ. ವೆಚ್ಚದಲ್ಲಿ ಹಿರಿಯೂರು ತಾಲೂಕು ಐಮಂಗಲ, ಜವನಗೊಂಡನಹಳ್ಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಐದು ವರ್ಷವಾದರೂ ಪೂರ್ಣಗೊಂಡಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

    ಗ್ರಾಮ ಪಂಚಾಯಿತಿಗೆ ಅಧಿಕಾರ ಕೊಡಿ

    ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆ ಅಧಿಕಾರವನ್ನು ಗ್ರಾಮ ಪಂಚಾಯಿತಿಗಳಿಗೆ ಕೊಡುವಂತೆ ಸಿಇಒ ಅವರಿಗೆ ಕೇಂದ್ರ ಸಚಿವರು ಸೂಚಿಸಿದರು. ಟೆಂಡರ್ ಪ್ರಕ್ರಿಯೆ ಪೂರ್ಣವಾಗುತ್ತಿದ್ದಂತೆ ಸೂಕ್ತ ಅನುದಾನದೊಂದಿಗೆ ನಿರ್ವಹಣೆ ಅಧಿಕಾರವನ್ನು ಗ್ರಾಪಂಗೆ ವಹಿಸಲಾಗುವುದು. ಜಿಲ್ಲೆಯಲ್ಲಿ 1095 ಆರ್‌ಒ ಘಟಕಗಳ ಪೈಕಿ 956 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ನಂದಿನಿದೇವಿ ಮಾಹಿತಿ ನೀಡಿದರು.

    ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಮಾರ್ಗದ ಕಾಮಗಾರಿ ಮಾರ್ಚ್‌ನಲ್ಲಿ ಆರಂಭಿಸುವ ಗುರಿ ಇದೆ. ಭೂ ಸ್ವಾಧೀನವಾಗಿರುವ ಎಲ್ಲ ರೈತರಿಗೆ ಫೆಬ್ರವರಿ 15 ರೊಳಗೆ ಪರಿಹಾರ ಪಾವತಿಸಬೇಕು. ಸರ್ವೇ ಮಾಡಿದ ಮಾರ್ಗದಲ್ಲಿ ಬಾಂದ್ ಕಲ್ಲು ಹಾಕಬೇಕು.
    -ಎ.ನಾರಾಯಣಸ್ವಾಮಿ ಕೇಂದ್ರ ಸಚಿವ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts