More

    ಬ್ಲಡ್ ಬ್ಯಾಂಕ್‌ಗಳಿಗೆ ರಕ್ತದ ಕೊರತೆ

    ಚಿತ್ರದುರ್ಗ: ಕರೊನಾ ಭೀತಿಯಿಂದಾಗಿ ಬ್ಲಡ್ ಬ್ಯಾಂಕ್‌ಗಳು ‘ಅನಿಮೀಯಾದಿಂದ’ ಬಳಲುತ್ತಿವೆ. ಸಾಮಾನ್ಯ ದಿನಗಳಲ್ಲಿ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿರಲಿಲ್ಲ. ಆದರೆ, ಈಗ ಚಿತ್ರದುರ್ಗ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದಲ್ಲೂ ಸಮಸ್ಯೆ ಕಂಡು ಬಂದಿದೆ.

    ಸೋಂಕು ಹರಡುವ ಆತಂಕದಿಂದಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಾಧ್ಯವಾಗದೆ ಎಂಟತ್ತು ದಿನಗಳಿಂದ ರಕ್ತ ನಿಧಿ ಕೇಂದ್ರ ರಕ್ತದ ಕೊರತೆಯಿಂದ ಬಳಲುತ್ತಿರುವುದು ಜಿಲ್ಲಾಸ್ಪತ್ರೆ ವೈದ್ಯರನ್ನು ಆತಂಕಕ್ಕೆ ದೂಡಿದೆ. ತಲೆಸೀಮಿಯಾ, ಶಸ್ತ್ರಚಿಕಿತ್ಸೆಗೆ ಒಳಪಡ ಬೇಕಿರುವ ರೋಗಿಗಳು, ಅಪಘಾತಕ್ಕೆ ಈಡಾದವರ ಚಿಕಿತ್ಸೆ ಮತ್ತು ಗರ್ಭಿಣಿಯರಿಗೆ ರಕ್ತದ ಅಗತ್ಯವಿರುತ್ತದೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ತಿಂಗಳಿಗೆ ಸರಾಸರಿ 800 ಹೆರಿಗೆಗಳಾಗುತ್ತಿದ್ದು, ಇವರಲ್ಲಿ ಶೇ.50 ಗರ್ಭಿಣಿಯರು, ಬಾಣಂತಿಯರಿಗೆ ಕೊಡಲು ಕನಿಷ್ಠ 400 ಯೂನಿಟ್ ರಕ್ತದ ಅವಶ್ಯವಿದೆ. ಜಿಲ್ಲಾಸ್ಪತ್ರೆಯಲ್ಲಿ ದಿನವೊಂದಕ್ಕೆ 15-20 ಯೂನಿಟ್ ರಕ್ತದ ಅಗತ್ಯವಿದೆ. ಇಲ್ಲಿ ತಿಂಗಳಿಗೆ ಅಂದಾಜು 300 ಹೆರಿಗೆಗಳಾಗುತ್ತಿದ್ದು, ಗರ್ಭಿಣಿ, ಬಾಣಂತಿಯರಿಗೆ ಕೊಡಲು ತಿಂಗಳಿಗೆ ಕನಿಷ್ಠ ಸರಾಸರಿ 200 ಯೂನಿಟ್ ರಕ್ತದ ಅಗತ್ಯವಿದೆ.

    ಒಂದು ಕ್ಯಾಂಪಿಗೆ 50 ಯೂನಿಟ್: ರಕ್ತ ನಿಧಿ ಕೇಂದ್ರ ಪ್ರತಿ ತಿಂಗಳು ಮೂರ‌್ನಾಲ್ಕು ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಉತ್ತಮ ಪ್ರಮಾಣದಲ್ಲಿ ರಕ್ತವನ್ನು ಸಂಗ್ರಹಿಸುತ್ತಿತ್ತು. ಒಂದು ಕ್ಯಾಂಪಿನಲ್ಲಿ ಕನಿಷ್ಠವೆಂದರೂ 50 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಒ, ಎ, ಬಿ ಹಾಗೂ ಎಬಿ ಪಾಸಿಟಿವ್ ಮತ್ತು ಈ ಎಲ್ಲ ಗುಂಪಿನ ನೆಗೆಟಿವ್ ರಕ್ತ ಸಂಗ್ರಹವಾಗುತ್ತಿತ್ತು. ಸಾಮಾನ್ಯವಾಗಿ ಎಬಿ ನೆಗೆಟಿವ್ ಸಿಗುವುದು ವಿರಳ. ಆದರೆ, ಈಗ ಎಲ್ಲ ಗುಂಪುಗಳಿಗೂ ತತ್ವಾರ ಬಂದೊದಗಿದೆ.

    ಆಸ್ಪತ್ರೆಗೆ ಬರಬೇಕಿದೆ: ದಾನಿಗಳು ಆಸ್ಪತ್ರೆಗೆ ಬಂದು ರಕ್ತ ಕೊಡಬೇಕಿದೆ. ಆದರೆ, ಆಸ್ಪತ್ರೆಗೆ ರಕ್ತದಾನಿಗಳ ಬರುವುದು ಕಡಿಮೆ ಇದ್ದು, ಪರಿಸ್ಥಿತಿ ಹೀಗೆ ಮುಂದು ವರಿದರೆ ಸಮಸ್ಯೆ ಹೇಗೆ ಹೆದರಿಸಬೇಕೆಂಬ ಚಿಂತೆ ಜಿಲ್ಲಾಸ್ಪತ್ರೆ ವೈದ್ಯರನ್ನು ಕಾಡ ತೊಡಗಿದೆ. ಈ ಸಂಬಂಧ ಆರೋಗ್ಯ ಇಲಾಖೆ ಬ್ಲಡ್ ಸೆಫ್ಟಿ ವಿಭಾಗದ ಉಪನಿರ್ದೇಶಕ ಡಾ.ಜಯರಾಜ್, ರಾಜ್ಯದ ಎಲ್ಲ ಆಸ್ಪತ್ರೆಗಳಿಗೆ ಸುತ್ತೋಲೆ ಕಳುಹಿಸಿ, ಪರಿಸ್ಥಿತಿ ನಿರ್ವಹಣೆಗೆ ಸಲಹೆ, ಸೂಚನೆಗಳನ್ನು ಕೊಟ್ಟಿದ್ದಾರೆ.

    ನಾಲ್ಕು ಬ್ಲಡ್ ಬ್ಯಾಂಕ್‌ಗಳಿವೆ: ಸರ್ಕಾರಿ ಆಸ್ಪತ್ರೆಗಳಲ್ಲೇ ರಕ್ತ ಸಂಗ್ರಹಕ್ಕೆ ವೈದ್ಯ-ಸಿಬ್ಬಂದಿ ಮುಂದಾಗಿದ್ದರೂ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಸರ್ಕಾರಿ ಕಚೇರಿಗಳಿಗೆ ತೆರಳಿ ದಾನಿಗಳಿಂದ ರಕ್ತ ಸಂಗ್ರಹಿಸುವುದು, ಚಿಕ್ಕ ಕ್ಯಾಂಪ್‌ಗಳನ್ನು ಏರ್ಪಡಿಸಲು ರಕ್ತ ನಿಧಿ ಕೇಂದ್ರದ ವೈದ್ಯರು, ಜಿಲ್ಲಾಧಿಕಾರಿ ಒಪ್ಪಿಗೆ ಕೇಳಿದ್ದಾರೆನ್ನಲಾಗಿದೆ. ಜಿಲ್ಲೆಯಲ್ಲಿ ನಾಲ್ಕು ಬ್ಲಡ್ ಬ್ಯಾಂಕ್‌ಗಳಿವೆ. ಚಿತ್ರದುರ್ಗದಲ್ಲಿ ಜಿಲ್ಲಾಸ್ಪತ್ರೆ, ಬಸವೇಶ್ವರ ಆಸ್ಪತ್ರೆ, ಖಾಸಗಿ ಬ್ಲಡ್ ಬ್ಯಾಂಕ್ ಹಾಗೂ ಚಳ್ಳಕೆರೆಯಲ್ಲಿ ಒಂದು ಬ್ಲಡ್ ಬ್ಯಾಂಕ್ ಇದೆ.

    ಡೇಂಜರ್ ರೆನ್: ರಕ್ತ ನಿಧಿ ಕೇಂದ್ರದಲ್ಲಿ ಬ್ಲಡ್ ಸ್ಟಾಕ್ ಕಡಿಮೆ ಆಗುತ್ತಿದ್ದು, ನಾವೀಗ ಡೆಂಜರ್ ರೆನ್‌ನಲ್ಲಿದ್ದೇವೆ. ಕರೊನಾ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಉಂಟಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿಗೆ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಜಿಲ್ಲಾ ಸರ್ಜನ್ ಡಾ.ಎಚ್.ಜೆ.ಬಸವರಾಜಪ್ಪ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts