More

    ಕ್ಷಮೆ ಕೇಳಲು ನಾಳೆ ನಾವೇ ಇಲ್ಲವಾಗಬಹುದು!

    ಕ್ಷಮೆ ಕೇಳಲು ನಾಳೆ ನಾವೇ ಇಲ್ಲವಾಗಬಹುದು! ಅದೊಂದು ಮಿಠಾಯಿ ಅಂಗಡಿ. ಒಬ್ಬಾಕೆ ಹೆಣ್ಣು ಮಗಳು ಅಲ್ಲಿ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಳು.. ಒಮ್ಮೆ ಅಲ್ಲಿಗೆ ಕಪ್ಪು ಕನ್ನಡಕ ಧರಿಸಿದ್ದ ಮಧ್ಯ ವಯಸ್ಸಿನ ವ್ಯಕ್ತಿ ಒಬ್ಬ ಬಂದು ಅರ್ಧ ಕೆಜಿ ತೂಕದ 10 ಮಿಠಾಯಿ ಪೊಟ್ಟಣಗಳನ್ನು ಪ್ಯಾಕ್ ಮಾಡಲು ಹೇಳುತ್ತಾನೆ. ಅಂತೆಯೇ ಒಟ್ಟು ಬೆಲೆ ಎಷ್ಟಾಯ್ತು ಎಂದು ಆತ ಕೇಳಲಾಗಿ 800 ರೂ.ಗಳೆಂದು ಹುಡುಗಿ ಹೇಳುತ್ತಾಳೆ. ಆ ವ್ಯಕ್ತಿ ತನ್ನ ಜೇಬಿನಿಂದ ಕೆಲವು ನೋಟುಗಳನ್ನು ತೆಗೆದು, ‘ಮಗು ನಾನೊಬ್ಬ ಕುರುಡ, ಈ ಕಂತೆಯಿಂದ ನಾನು ತೆರಬೇಕಾದ ಹಣವನ್ನು ನೀನೇ ತೆಗೆದುಕೊಂಡು ಬಿಡು’ ಎಂದು ಹೇಳುತ್ತಾನೆ.

    ಇದು ತನಗೆ ಸುಲಭವಾಗಿ ದುಡ್ಡು ಮಾಡಲು ಸಿಕ್ಕಿದ ಸದವಕಾಶವೆಂದು ತಿಳಿದ ಹುಡುಗಿ 200 ರೂಪಾಯಿಗಳ ನಾಲ್ಕು ನೋಟುಗಳನ್ನು ತೆಗೆದುಕೊಳ್ಳುವುದರ ಬದಲು 500 ರೂಪಾಯಿಗಳ ಎರಡು ನೋಟುಗಳನ್ನು ಆರಿಸಿಕೊಂಡು ಲೆಕ್ಕ ಸರಿಹೋಯಿತು ಸಾರ್ ಎಂದಳು. ವ್ಯಕ್ತಿ ಹೊರಟು ಹೋದ. ಮರುದಿನವೂ ಅದೇ ವ್ಯಕ್ತಿ ಬಂದು ಮತ್ತೆ ಮಿಠಾಯಿಗಳ ಹತ್ತು ಪೊಟ್ಟಣಗಳನ್ನು ಪ್ಯಾಕ್ ಮಾಡುವಂತೆ ಹೇಳುತ್ತಾನೆ. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳದ ಆ ಹುಡುಗಿ ಮತ್ತೆ ಇನ್ನೂರು ರೂಪಾಯಿಗಳನ್ನು ತನ್ನದಾಗಿಸಿಕೊಳ್ಳುತ್ತಾಳೆ. ಮೂರನೇ ದಿನವೂ ಇದೇ ಕಥೆ ನಡೆಯಿತು. ಅಷ್ಟರಲ್ಲಿ, ಪ್ರತಿದಿನ 10 ಮಿಠಾಯಿ ಪೊಟ್ಟಣಗಳನ್ನು ಖರೀದಿಸುವ ಈ ವ್ಯಕ್ತಿ ಆ ಪೊಟ್ಟಣಗಳನ್ನು ಯಾರಿಗೆ ನೀಡುತ್ತಿರಬಹುದೆಂಬುದನ್ನು ಅರಿತುಕೊಳ್ಳುವ ಕುತೂಹಲದಿಂದ ತನ್ನ ಸಹಾಯಕಳಿಗೆ ಅಂಗಡಿಯನ್ನು ನೋಡಿಕೊಳ್ಳಲು ಹೇಳಿ ಆಕೆ ಆ ಕುರುಡನನ್ನು ಹಿಂಬಾಲಿಸುತ್ತಾಳೆ. ಆತ ಒಂದು ಬಡವರ ಬೀದಿಗೆ ಹೋಗಿ ಆ ಮಿಠಾಯಿಗಳನ್ನು ಬಡ ಮಕ್ಕಳಿಗೆ ಹಂಚುತ್ತಿದ್ದ. ನೀವು ಈ ಕೆಲಸವನ್ನೇಕೆ ಮಾಡುತ್ತಿರುವಿರಿ ಎಂದು ಕೇಳಲಾಗಿ ಆ ವ್ಯಕ್ತಿ ಹೇಳುತ್ತಾನೆ: ಮಗು ವೃತ್ತಿಯಿಂದ ನಾನೊಬ್ಬ ವೈದ್ಯ. ಆದರೆ ನಾನು ವೃತ್ತಿಯಲ್ಲಿ ಪ್ರಾಮಾಣಿಕತೆಯನ್ನು ಕಾಪಾಡಲಿಲ್ಲ.

    ಅಧರ್ಮದ ಹಾದಿಯಲ್ಲಿ ಹಣ ಸಂಪಾದಿಸಿದೆ. ಬಡ ರೋಗಿಗಳಿಂದಲೂ ಜಾಸ್ತಿ ಹಣವನ್ನೇ ಕಿತ್ತುಕೊಂಡೆ. ರೋಗಿ ಸತ್ತು ಹೋಗಿದ್ದಾನೆ ಎಂದು ಗೊತ್ತಾದರೂ ಇಲ್ಲದ ಇಂಜೆಕ್ಷನ್​ಗಳನ್ನು ಚುಚ್ಚಿ ಹಣ ವಸೂಲಿ ಮಾಡಿದೆ. ನಾನು ಮಾಡಿದ ಪಾಪಗಳ ಪ್ರತಿಫಲವೋ ಏನೋ ಒಮ್ಮೆ ಒಂದು ಭೀಕರ ಅಪಘಾತದಲ್ಲಿ ನನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡೆ. ಈಗ ನಾನು ಮಾಡಿದ ಕರ್ಮದ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಕ್ಕಾಗಿ ಈ ಬಡ ಮಕ್ಕಳ ಸೇವೆ ಮಾಡುತ್ತಿದ್ದೇನೆ ಎಂದನು. ಈ ಮಾತುಗಳನ್ನು ಕೇಳಿದ ಹುಡುಗಿಯಲ್ಲೂ ತಾನು ಮಾಡುತ್ತಿರುವ ಪಾಪ ಕರ್ಮಗಳ ಪ್ರಜ್ಞೆ ಜಾಗೃತವಾಯಿತು. ಮತ್ತೆ ಮರುದಿನ ಆ ವ್ಯಕ್ತಿ ಬಂದು ಮಿಠಾಯಿ ಪಟ್ಟಣಗಳನ್ನು ಪಡೆದು ಹಣ ಕೊಡಲು ಮುಂದಾದಾಗ ಹುಡುಗಿ ಹೇಳಿದಳು- ಬೇಡ ಸಾರ್, ನೀವು ಏನನ್ನೂ ಕೊಡಬೇಡಿ. ನಾನು ನಿಮ್ಮ ಕುರುಡುತನದ ಲಾಭವನ್ನು ಪಡೆದುಕೊಂಡು ಪ್ರತಿದಿನ ನೀವು ನೀಡಿದ ನೋಟುಗಳ ಕಂತೆಯಿಂದ 200 ರೂಪಾಯಿಗಳನ್ನು ಹೆಚ್ಚಾಗಿ ಕಿತ್ತುಕೊಳ್ಳುತ್ತಿದ್ದೆ. ಈಗ ನನ್ನ ಕಣ್ಣುಗಳು ತೆರೆದಿವೆ. ನನ್ನನ್ನು ಕ್ಷಮಿಸಿ ಎನ್ನುತ್ತಾ ಆ ವೈದ್ಯನ ಕಾಲಿಗೆ ಬೀಳುತ್ತಾಳೆ. ವೈದ್ಯ ಆಕೆಯ ತಲೆ ಸವರಿ, ಮಗು, ನಾವು ಜೀವನದಲ್ಲಿ ಏನು ಮಾಡುತ್ತೇವೆಯೋ ಮತ್ತೆ ಅದೇ ನಮಗೆ ತಿರುಗಿ ಬರುತ್ತದೆ. ಒಳ್ಳೆಯದು ಮಾಡಿದರೆ ಒಳ್ಳೆಯದು; ಕೆಟ್ಟದ್ದು ಮಾಡಿದರೆ ಕೆಟ್ಟದ್ದು. ಜೀವನದಲ್ಲಿ ಎಂದೂ ತಪ್ಪು ಕೆಲಸ ಮಾಡದಿರು. ನಿನಗೆ ಒಳ್ಳೆಯದಾಗಲಿ ಎಂದು ಹರಸುತ್ತಾನೆ.

    ಹೌದು. ಜೀವನದಲ್ಲಿ ಮೊದಲು ತಪ್ಪು ಮಾಡುವುದು ಅನಂತರ ಪಶ್ಚಾತ್ತಾಪ ಪಡುವುದು, ಕೊನೆಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು- ಇದು ಅನಿವಾರ್ಯವೇ?. ಅಲ್ಲ! ಏಕೆಂದರೆ ನಾಳೆಯ ದಿನ ಕ್ಷಮಿಸುವುದಕ್ಕೆ ಅವರೇ ಇಲ್ಲವಾಗಬಹುದು ಅಥವಾ ಕ್ಷಮೆ ಕೇಳಲು ನಾವೇ ಇಲ್ಲವಾಗಬಹುದು!

    ಭಗವಂತ ನಮಗೆ ಜೀವವನ್ನಷ್ಟೇ ಕೊಟ್ಟ; ಜೀವಿಸುವ ಬಗೆಯನ್ನು ನಮಗೆ ಬಿಟ್ಟುಬಿಟ್ಟ. ಜೀವನದ ಉದ್ದೇಶ ಸತ್ತ ಮೇಲೆ ಯಾರೂ ಕಂಡರಿಯದ ಸ್ವರ್ಗಕ್ಕೆ ಹೋಗುವುದಿರಲಿ; ನಾವು ಜೀವಂತವಿರುವಾಗಲೇ ಈ ಜಗತ್ತನ್ನು ಸ್ವರ್ಗಮಯವನ್ನಾಗಿ ಮಾಡಿ ನಾವು ಜೀವಿಸುತ್ತಿರುವ ಜಗತ್ತಿಗಿಂತಲೂ ಒಳ್ಳೆಯ ಜಗತ್ತನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವಂತಾಗಬೇಕು. ಈ ಜಗತ್ತಿಗೆ ಬರುವಾಗ ನಾವು ಖಾಲಿ ಕೈಯಲ್ಲಿ ಬಂದೆವು. ಜಗತ್ತನ್ನು ಬಿಟ್ಟು ಹೋಗುವಾಗಲೂ ಖಾಲಿ ಕೈಯಲ್ಲಿ ಹೊರಟು ಹೋಗುತ್ತೇವೆ. ಆದರೆ ಬಿಟ್ಟು ಹೋಗುವ ಮುನ್ನ ಜನರ ಹೃದಯಗಳಲ್ಲಿ ನಮ್ಮ ಹೆಸರನ್ನು ಬಿಟ್ಟು ಹೋಗಬೇಕು! ಅದುವೇ ಜೀವನದ ಸಾರ್ಥಕತೆ.

    | ಡಾ ಕೆ.ಪಿ. ಪುತ್ತೂರಾಯ

    ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು: ಪ್ರಾಣಾಪಾಯದಿಂದ ಪಾರು!

    ಲೋಕಸಭೆ ಚುನಾವಣೆ: ಸಿಎ ಪರೀಕ್ಷೆ ಮುಂದೂಡಿಕೆಗೆ ಸುಪ್ರೀಂ ನಿರಾಕರಣೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts