More

    ಚಿಣ್ಣರ ಬಾಯಿ ಸೇರಿದ ಜೀವ ರಕ್ಷೆ

    ಚಿತ್ರದುರ್ಗ: ವೈದ್ಯರು, ದಾದಿಯರ ಕಂಡು ಸೂಜಿ ಚುಚ್ಚುತ್ತಾರೆಂದು ಚಿರಾಡಿದ ಚಿಣ್ಣರು. ಅಮ್ಮ, ಅಪ್ಪನ ರಚ್ಚೆ ಹಿಡಿದ ಪುಟಾಣಿಗಳು. ಬಾಯಿ ತೆರೆಸಲು ಪರದಾಡಿದ ಆರೋಗ್ಯ ಇಲಾಖೆ ಸಿಬ್ಬಂದಿ.

    ಚಾಕಲೇಟ್ ಆಸೆ ತೋರಿಸಿ ಬಾಯಿ ತೆರೆಸಿ ಲಸಿಕೆ ಹಾಕಿದ ದಾದಿಯರು. ಕೆಲ ಮಕ್ಕಳು ಬಾಯಿ ತೆರೆದರೆ, ಇನ್ನೂ ಕೆಲವೆಡೆ ಮಕ್ಕಳ ಬಾಯಿ ತೆರೆಸಿ ಜೀವ ರಕ್ಷೆ ಹಾಕಿಸಲು ಪಾಲಕರ ಹರಸಾಹಸ. ಇದು ಜಿಲ್ಲಾದ್ಯಂತ ಭಾನುವಾರ ಆರಂಭವಾದ ಪೋಲಿಯೋ ಲಸಿಕೆ ವೇಳೆ ಕಂಡು ಬಂದ ವಿಭಿನ್ನ ದೃಶ್ಯಗಳು.

    ಪೋಲಿಯೋ ವಿರುದ್ಧದ ಗೆಲುವು ಮುಂದುವರಿಸೋಣ ಎಂಬ ಘೋಷಣೆಯೊಂದಿಗೆ ಜಿಲ್ಲಾದ್ಯಂತ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

    ಜಿಲ್ಲೆಯಲ್ಲಿ 0-5 ವರ್ಷದೊಳಗಿನ 1,51.951 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇತ್ತು. ಇಂದು 1,42,027 ಮಕ್ಕಳಿಗೆ ಲಸಿಕೆ ಹಾಕಲಾಯಿತು.

    ಜಿಲ್ಲಾ ಕೇಂದ್ರದಲ್ಲಿ ಬುದ್ಧ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಪಂ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಈ ವೇಳೆ ಮಾತನಾಡಿ, 5 ವರ್ಷ ವಯೋಮಿತಿಯೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸುವ ಮೂಲಕ ಆರೋಗ್ಯ ಪೂರ್ಣ ದೇಶ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ, ಸಂಭವನೀಯ ಅಪಾಯ ತಪ್ಪಿಸಲು ಈ ಕಾರ್ಯಕ್ರಮ ಮುಂದುವರಿಸಲಾಗಿದೆ ಎಂದರು.

    ಜಿಪಂ ಸಿಇಒ ಸಿ.ಸತ್ಯಭಾಮಾ ಮಾತನಾಡಿ, ಭಾರತಕ್ಕೆ ಮತ್ತೆ ಪೋಲಿಯೋ ಕಾಲಿಡದಂತೆ ಎಚ್ಚರ ವಹಿಸೋಣ. ಈಗ ಇದರ ಮೇಲೆ ಸಾಧಿಸಿರುವ ಜಯವನ್ನು ಮುಂದುವರಿಸೋಣ ಎಂದು ತಿಳಿಸಿದರು.

    ಆರೋಗ್ಯ ಇಲಾಖೆ ಉಪ ನಿರ್ದೇಶಕ ಡಾ.ಜಗದೀಶ್ ಮಾತನಾಡಿ, 2011ರಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ 1,51,951 ಮಕ್ಕಳಿಗೆ ಲಸಿಕೆ ಹಾಕುವ ಉದ್ದೇಶವಿದ್ದು, ಕಳೆದ ವರ್ಷ ಶೇ.103 ಸಾಧನೆಯಾಗಿತ್ತು ಎಂದರು.

    ಡಿಎಚ್‌ಒ ಡಾ.ಸಿಎಲ್.ಪಾಲಾಕ್ಷ ಮಾತನಾಡಿ, ಮೊದಲ ದಿನ 61 ಟ್ರಾೃನಿಟ್ ಹಾಗೂ 13 ಮೊಬೈಲ್ ಸಹಿತ 1080 ಬೂತ್‌ಗಳಲ್ಲಿ ಹಾಗೂ ಇನ್ನುಳಿದ ಎರಡು ದಿನ ಮನೆ, ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ 19ರಂದು 2500ಕ್ಕೂ ಹೆಚ್ಚು ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

    ಎಂಎಲ್‌ಸಿ ಜಯಮ್ಮ ಬಾಲರಾಜ್, ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ರಾಜಾನಾಯಕ್, ಡಿಎಸ್ ಡಾ.ಎಚ್.ಜೆ.ಬಸವರಾಜಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಮೂಗಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts