More

    ಚಂದ್ರವಳ್ಳಿ ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ

    ಚಿತ್ರದುರ್ಗ: ನಗರದ ಚಂದ್ರವಳ್ಳಿ ಮೈದಾನದ ಬಾನಂಗಳದಲ್ಲಿ ಶನಿವಾರ ಬೆಳಗ್ಗೆ ಮೂಡಿದ್ದ ಗಾಳಿಪಟಗಳ ಚಿತ್ತಾರ ನೋಡುಗರಿಗೆ ಹಬ್ಬದ ಸಂಭ್ರಮ ಮೂಡಿಸಿತು. ರಾಷ್ಟ್ರೋತ್ಥಾನ ಪರಿಷತ್ ಜ್ಞಾನ ಭಾರತಿ ವಿದ್ಯಾಮಂದಿರದಿಂದ ಆಯೋಜಿಸಿದ್ದ ಗಾಳಿಪಟ ಹಬ್ಬದಲ್ಲಿ ನೂರಾರು ವಿದ್ಯಾರ್ಥಿಗಳು ಹಾರಿಸಿದ ಬಣ್ಣ ಬಣ್ಣದ ನಾನಾ ರೂಪದ ಗಾಳಿಪಟಗಳು ನೋಡುಗರ ಕಣ್ಮನ, ಹೃನ್ಮನ ಸೆಳೆದವು.

    ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಸದಾ ಮುಗಿಲೆತ್ತರಕ್ಕೆ ಹಾರುವ ಗಾಳಿಪಟದಂತೆ ತಮ್ಮ ಭ ವಿಷ್ಯವೂ ಎತ್ತರಕ್ಕೆ ಏರಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
    ಗಾಳಿಪಟವನ್ನು ಬಾನೆತ್ತರಕ್ಕೆ ಹಾರಿಸಲು ಶ್ರಮಿಸುವ ಮಾದರಿಯಲ್ಲೇ ನಮ್ಮ ಜೀವನವನ್ನೂ ಸಮಚಿತ್ತದಿಂದ ಉನ್ನತಿಯತ್ತ ಕೊಂಡೊಯ್ಯಲು ಮುಂದಾಗಬೇಕು ಎಂದು ವಿದ್ಯಾರ್ಥಿ-ಪಾಲಕರಿಗೆ ಸಲಹೆ ನೀಡಿದರು.
    ವಿದ್ಯಾರ್ಥಿ ಜೀವನದಲ್ಲಿ ನೂರಾರು ಆಸೆ, ಆಮಿಷ, ಆಕರ್ಷಣೆ ಎದುರಾಗಬಹುದು. ಆದರೆ ಅವೆಲ್ಲವನ್ನೂ ಬದಿಗಿರಿಸಿ ಶಿಕ್ಷಣದೆಡೆ ಮಾತ್ರ ಗಮನ ಕೊಡುವ ಮೂಲಕ ಗುರಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

    ತಹಸೀಲ್ದಾರ್ ಸತ್ಯನಾರಾಯಣ ಮಾತನಾಡಿ, ನಗರದ ಈ ವಿದ್ಯಾಮಂದಿರ ಶಾಲೆಗೆ 5 ಎಕರೆ ಜಮೀನು ಮಂಜೂರು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

    ಶಾಲಾ ಆಡಳಿತ ಮಂಡಳಿ ಕಾರ‌್ಯದರ್ಶಿ ಡಾ.ರಾಜೀವಲೋಚನ ಮಾತನಾಡಿ, ಪರಿಷತ್ ನಗರದಲ್ಲಿ 49 ವರ್ಷಗಳಿಂದ ಶಾಲೆಯನ್ನು ನಡೆಸಿಕೊಂಡು ಬಂದಿದೆ. ನಮ್ಮ ಈ ಶಾಲೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

    ರಾಜ್ಯದಲ್ಲಿರುವ ನಮ್ಮ ಶಾಲೆಗಳಲ್ಲಿ 18 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಓದುತ್ತಿದ್ದಾರೆ. ರಾಜ್ಯ ಪಠ್ಯದ ಜತೆ ವಿದ್ಯಾರ್ಥಿಗಳು ಪರಿಷತ್ ಪಠ್ಯವನ್ನು ಅಭ್ಯಾಸ ಮಾಡುತ್ತಾರೆ. ಪಂಚಮುಖಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ ಎಂದರು. ಪ್ರಾಚಾರ್ಯ ಬಿ.ಎಂ.ಪ್ರಜ್ವಲ್ ಸ್ವಾಗತಿಸಿದರು. ಶಿಕ್ಷಕಿಯರಾದ ವೈಭವಿ ನಿರೂಪಿಸಿ, ಅನಿತಾ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts