More

    ಆಯುಷ್ ಚಿಕಿತ್ಸೆ ಅರಿವು ಜನರಲ್ಲಿ ಬಿತ್ತಿ

    ಚಿತ್ರದುರ್ಗ: ಆಯುಷ್ ಪದ್ಧತಿ ಕುರಿತು ಅರಿವು ಮೂಡಿಸಿಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ.ಕೆ.ಎಲ್.ವಿಶ್ವನಾಥ್ ಆಯುಷ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ಜಿಲ್ಲಾಡಳಿತ ಹಾಗೂ ಆಯುಷ್ ಇಲಾಖೆಯಿಂದ ನಗರದ ಕ್ರೀಡಾಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಯುಷ್ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ತಮ್ಮ ವೃತ್ತಿ ಸೇವೆಯಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿ ಅಳವಡಿಸಿಕೊಳ್ಳಿ. ಕೆಲ ಕಾಯಿಲೆಗಳಿಗೆ ಆಲೋಪತಿ ಒಗ್ಗದು. ಜನರಲ್ಲಿ ಆಯುಷ್ ಚಿಕಿತ್ಸೆ ಕುರಿತು ತಿಳಿವಳಿಕೆ ಮೂಡಿಸಲು ಉಪನ್ಯಾಸ, ತರಬೇತಿ, ಶಿಬಿರ ಏರ್ಪಡಿಸಲಾಗುತ್ತಿದೆ ಎಂದರು.

    ಆಯುಷ್ ಪದ್ಧತಿಯಲ್ಲಿ ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಹೋಮಿಯೋಪತಿ ಹಾಗೂ ಸಿದ್ಧ ಸೇರಿ ಐದು ವೈದ್ಯ ಪದ್ಧತಿಗಳಿದ್ದು, ಬೇರೆ ಬೇರೆ ವಿಧಾನಗಳಡಿ ಚಿಕಿತ್ಸೆ ಇರುತ್ತದೆ ಎಂದು ತಿಳಿಸಿದರು.

    ನಿವೃತ್ತ ಶಿಕ್ಷಕ ಚನ್ನಬಸಪ್ಪ ಮಾತನಾಡಿ, ಆಹಾರ, ವಿಹಾರ, ಅರಿವೇ ಆಯುರ್ವೇದವಾಗಿದೆ. ಪ್ರತಿ ಗಿಡಮೂಲಿಕೆಗಳಲ್ಲಿ ಔಷಧ ಗುಣಗಳಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ದಾವಣಗೆರೆ ಜಿಲ್ಲಾ ಆಸ್ಪತ್ರೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಉಪನ್ಯಾಸಕ ಡಾ.ಗಂಗಾಧರ್‌ವರ್ಮಾ ಮಾತನಾಡಿ, ಪ್ರಕೃತಿ ಚಿಕಿತ್ಸೆ ನಿರೌಷಧ ಪದ್ಧತಿಯಾಗಿದ್ದು, ಔಷಧ ಕೊಡದೆ ರೋಗ ನಿರೋಧಕ ಶಕ್ತಿ ಹೆಚ್ಚಿಸ ಬಹುದಾಗಿದೆ ಎಂದು ತಿಳಿಸಿದರು.

    ಸೂಜಿ, ಆಹಾರ, ಜಲ ಚಿಕಿತ್ಸೆ ಹಾಗೂ ಫಿಜಿಯೋಥೆರಪಿ ಮೂಲಕ ಹಲವು ಕಾಯಿಲೆಗಳನ್ನು ಗುಣಪಡಿಸಬಹುದು. ಬದಲಾದ ಇಂದಿನ ಜೀವನ ಶೈಲಿಯಿಂದಾಗಿ ಹಲವು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ ಎಂದು ವಿಷಾದಿಸಿದರು.

    ಡಾ.ಲೀಲಾವತಿ, ಡಾ.ಎ.ಸ್ಮಿತಾ, ಡಾ.ಟಿ.ಶಿವಕುಮಾರ್ ಉಪನ್ಯಾಸ ನೀಡಿದರು. ಆಯುಷ್ ಇಲಾಖೆಯ ಡಾ.ನಾರಾದಮುನಿ, ಡಾ.ಪ್ರಶಾಂತ್, ಡಾ.ಮಂಜುಳಾ, ಡಾ.ಉಮೇಶ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts