More

    ಮಾನವೀಯ ಧರ್ಮ ಮುಖ್ಯವೆಂದು ಸಾರಿದ ನಿಜ ಶರಣ

    ಚಿತ್ರದುರ್ಗ: ಎಲ್ಲ ಧರ್ಮಗಳಿಗಿಂತ ಮಾನವೀಯ ಧರ್ಮ ಮುಖ್ಯವೆಂದು ನಿಜಶರಣ ಅಂಬಿಗರ ಚೌಡಯ್ಯ ಜಗತ್ತಿಗೆ ಸಾರಿದ್ದಾರೆಂದು ರಾಣೇ ಬೆನ್ನೂರಿನ ನಿವೃತ್ತ ಪ್ರಾಚಾರ‌್ಯ ಎನ್.ಕೆ.ರಾಮಚಂದ್ರಪ್ಪ ಹೇಳಿದರು.

    ಜಿಲ್ಲಾಡಳಿತ ಮಂಗಳವಾರ ತರಾಸು ರಂಗಮಂದಿರದಲ್ಲಿ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವದಲ್ಲಿ ಅವರು ಉಪನ್ಯಾಸ ನೀಡಿದರು.

    12 ನೇ ಶತಮಾನದಲ್ಲೇ ಬಹು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣರಾದ ಬಸವಾದಿ ಶರಣರೆಲ್ಲ ಮಾನವೀಯತೆಯೇ ಮುಖ್ಯವಾದ ಧರ್ಮವೆಂದು ಪ್ರತಿಪಾದಿಸಿದ್ದಾರೆ. ಅಂಬಿಗರ ಚೌಡಯ್ಯ 1186 ರಲ್ಲಿ ರಾಣೇಬೆನ್ನೂರು ತಾಲೂಕು ದಾನಪುರದಲ್ಲಿ ಜನಿಸಿದ್ದರೆಂಬ ಉಲ್ಲೇಖವಿದೆ. ಜಾತಿ ತಾರತಮ್ಯ ತೊಡೆದು, ಸಮಾಜದ ಅನಿಷ್ಟ ಪದ್ಧತಿಗಳು ಹಾಗೂ ಲಿಂಗ ಭೇದ ಸಲ್ಲದೆಂದು ಸಾರಿದರು.

    ಅಂಬಿಗರ ಚೌಡಯ್ಯನವರ ವಚನಗಳಲ್ಲಿ 330 ದೊರೆತಿವೆ. ಶರಣರ ಆದರ್ಶಗಳನ್ನು ಪಾಲಿಸುವ ಬದಲು ನಾವಿಂದು ಜಾತಿ, ಧರ್ಮ ಎಂದೆಲ್ಲ ಸಂಕುಚಿತರಾಗುತ್ತಿದ್ದೇವೆ. ಚೌಡಯ್ಯ ನಿಷ್ಠುರವಾದಿ ಆಗಿದ್ದರು. ಡಾಂಭಿಕ ಪೂಜೆಗಿಂತ ಭಕ್ತಿ ಮುಖ್ಯ, ದುಂದು ವೆಚ್ಚದ ಬದಲು ಪ್ರತಿಯೊಬ್ಬರಿಗೆ ಶಿಕ್ಷಣ ನೀಡಬೇಕೆಂದು ವಚನಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದರು.

    ಸಮಾರಂಭ ಉದ್ಘಾಟಿಸಿದ ಡಿಸಿ ಆರ್.ವಿನೋತ್‌ಪ್ರಿಯಾ ಮಾತನಾಡಿ, ಮಹನೀಯರ ಸಾಧನೆ ಸ್ಮರಿಸಲು ಸರ್ಕಾರ ಜಯಂತಿಗಳನ್ನು ಆಚರಿಸುತ್ತಿದೆ. ದಾರ್ಶನಿಕರನ್ನು ಯಾವುದೇ ಜಾತಿಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.

    ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ಜಿಲ್ಲಾ ಗಂಗಾಂಬಿಕ ಬೆಸ್ತರ ಸಂಘದ ಅಧ್ಯಕ್ಷ ಡಿ.ಎಚ್. ರಂಗಯ್ಯ, ಕಾರ್ಯದರ್ಶಿ ಪಿ.ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಮತ್ತಿತರರು ಇದ್ದರು.

    ವೇದಿಕೆ ಕಾರ‌್ಯಕ್ರಮಕ್ಕೂ ಮುನ್ನ ನಗರದ ಜೋಗಿಮಟ್ಟಿ ರಸ್ತೆ ತಿಪ್ಪಿನಘಟ್ಟಮ್ಮ ದೇವಾಲಯ ಆವರಣದಲ್ಲಿ ಉಪವಿಭಾಗಾಧಿಕಾರಿ ವಿ.ಪ್ರಸನ್ನಕುಮಾರ್ ಅಂಬಿಗರ ಚೌಡಯ್ಯರ ಭಾವಚಿತ್ರದ ಅದ್ಧೂರಿ ಮೆರವಣಿಗೆಗೆ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts