More

    ನಗರದಲ್ಲಿ ಪೈಪ್ ಮೂಲಕ ಅಡುಗೆ ಅನಿಲ ಪೂರೈಕೆ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆ ಮನೆಗಳಿಗೆ ಪೈಪ್ ಮೂಲಕ ಅಡುಗೆ ಅನಿಲ ಪೂರೈಸುವ ಕಾಮಗಾರಿ ಆರಂಭ ಗೊಂಡಿದೆ.

    ಧವಳಗಿರಿ, ಬಿವಿಕೆಎಸ್ ಲೇಔಟ್ ಹಾಗೂ ನೆಹರು ನಗರದ ಅಂದಾಜು 3 ಸಾವಿರ ಮನೆಗಳಿಗೆ ಪ್ರಾಯೋಗಿಕವಾಗಿ ಅಡುಗೆ ಅನಿಲ ಪೂರೈಸಲಾಗುತ್ತಿದೆ. 80 ದಿನದೊಳಗೆ ಪೈಪ್‌ಲೈನ್ ಅಳವಡಿಕೆ ಬಳಿಕ ಮನೆಗಳಿಗೆ ಅನಿಲ ಪೂರೈಕೆ ಆಗಲಿದೆ.

    ಮಂಗಳವಾರ ನಗರಸಭೆಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪೈಪ್ ಅಳವಡಿಸಲು ಮತ್ತೆ ರಸ್ತೆ ಅಗೆಯಲಾಗುತ್ತಿದೆ ಎಂದಾಗ, ಆಯುಕ್ತ ಜಿ.ಟಿ.ಹನುಮಂತರಾಜ್, ಅಗೆದ ರಸ್ತೆ ದುರಸ್ತಿಗೆ ಗುತ್ತಿಗೆದಾರರು ಒಪ್ಪಂದ ಮಾಡಿಕೊಂಡಿದ್ದಾರೆ. ಒಂದು ಕೋಟಿ ರೂ.ಶುಲ್ಕ ಪಾವತಿಸಿದ್ದಾರೆ ಎಂದರು.

    ಸರ್ವಿಸ್ ರೋಡ್: 2021 ಮಾರ್ಚ್‌ನೊಳಗೆ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿಯಾಗಲಿದೆ. ಚಳ್ಳಕೆರೆ ಗೇಟ್‌ನಿಂದ ಪ್ರವಾಸಿ ಮಂದಿರದ ರಸ್ತೆಗೆ 7 ಕೋಟಿ ರೂ.ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಈ ಮಾರ್ಗದಲ್ಲಿ ಸರ್ವಿಸ್ ರೋಡ್ ನಿರ್ಮಿಸಲಾಗುವುದು. ಪ್ರವಾಸಿ ಮಂದಿರದಿಂದ ಕನಕ ವೃತ್ತದವರೆಗಿನ ರಸ್ತೆ ಅಭಿವೃದ್ಧಿಗೆ ಮತ್ತೆ ಟೆಂಡರ್ ಸಮಸ್ಯೆ ಎದುರಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.

    ರೈಲ್ವೆ ಮೇಲು ಸೇತುವೆ ಸಹಿತ 48 ಕೋಟಿ ರೂ. ವೆಚ್ಚದಲ್ಲಿ ಗಾಂಧಿ ವೃತ್ತದಿಂದ ಜೆಎಂಐಟಿ ಸರ್ಕಲ್‌ವರೆಗಿನ ದಾವಣಗೆರೆ ರಸ್ತೆ ಅಭಿವೃದ್ಧಿ ಹಾಗೂ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ ಎಂಡಿ, ಡಿಸಿ ಅವರೊಂದಿಗೆ ಸಭೆ ನಡೆಸಿ ಮನೆಗಳಿಗೆ ಶೀಘ್ರ ಒಳಚರಂಡಿ ಸಂಪರ್ಕ ಕಲ್ಪಿಸಲಾಗುವುದು.

    ನಗರ ಸ್ವಚ್ಛತೆ, ಉತ್ತಮ ಪರಿಸರಕ್ಕೆ ಬಜೆಟ್‌ನಲ್ಲಿ ಆದ್ಯತೆ ಕೊಡುವಂತೆ ಶಾಸಕರು ನಗರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸ್ವಚ್ಛ ಸರ್ವೇಕ್ಷಣೆ – 2020ರಲ್ಲಿ ಕರ್ನಾಟಕದ ನಗರಸಭೆಗಳಲ್ಲಿ ದುರ್ಗ ಮೊದಲ ಸ್ಥಾನ ಪಡೆದಿದ್ದರೂ, ನಗರದ ಹಂದಿ, ನಾಯಿಗಳ ಹಾವಳಿ ಹತೋಟಿಗೆ ಬಂದಿಲ್ಲ ಎಂದರು.

    ಪೌರ ಕಾರ್ಮಿಕರಿಗೆ ಮನೆ: ಫಲಾನುಭವಿ ಪಟ್ಟಿ ಇಲ್ಲವಾದ್ದರಿಂದ ನಿವೇಶನ ಹೊಂದಿರುವ ಪೌರಕಾರ್ಮಿಕರಿಗೆ ಮನೆ ನಿರ್ಮಿಸುವ ಕಾರ‌್ಯ ಏಳೆಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದೆ ಎಂದು ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಜಿ.ಮೂಡಲಗಿರಿಯಪ್ಪ ತಿಳಿಸಿದರು.

    ಎಪಿಎಂಸಿಯಲ್ಲಿ ಮಹಿಳಾ ಹಮಾಲರಿಗೆ ಮನೆ ನಿರ್ಮಾಣ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿದೆ, ಹಲವು ಫಲಾನುಭವಿಗಳಿಗೆ ನಗರಸಭೆ ಆಯುಕ್ತರ ಹೆಸರಿಗೆ ನಿವೇಶನ ನೋಂದಾಯಿಸಿಲ್ಲ. ಕನಕ ವೃತ್ತದ ಬಳಿ ಸ್ಮಶಾನ ಅಭಿವೃದ್ಧಿಗೂ ತೊಡಕಾಗಿದೆ ಎಂದಾಗ ಶಾಸಕರು ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು.

    ಯೋಜನಾ ನಿರ್ದೇಶಕ ರಾಜಶೇಖರ್, ಸಾಮಾಜಿಕ ಅರಣ್ಯ ಇಲಾಖೆ ಡಿಎಫ್‌ಓ ಚೋಳರಾಜಪ್ಪ, ಲೋಕೋಪಯೋಗಿ ಇಲಾಖೆ ಇಇ ಎನ್.ಸತೀಶ್, ಬೆಸ್ಕಾಂ ಎಇಇ ಪ್ರಭಾಕರ್, ಆರ್‌ಎಫ್‌ಒ ಸಂದೀಪ್ ಪಾಟೀಲ್ ಮತ್ತಿತರ ಅಧಿಕಾರಿಗಳಿದ್ದರು.

    ಜಾಗ ತೀರ್ಮಾನವಾಗದೇ ಡಿಸಿ ಕಚೇರಿಗೆ ಟೆಂಡರ್: ಜಾಗ ಯಾವುದೆಂದು ತೀರ್ಮಾನಿಸದೇ 50 ಕೋಟಿ ರೂ.ವೆಚ್ಚದಲ್ಲಿ ಹೊಸ ಡಿಸಿ ಕಚೇರಿ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಆರಂಭ ವಾಗಿದೆ. ಸದ್ಯಕ್ಕೆ ಸರ್ಕಾರ ಕುಂಚಿಗನಾಳ್ ಬಳಿ ಹೊಸ ಕಟ್ಟಡ ನಿರ್ಮಿಸಲು 25 ಕೋಟಿ ರೂ.ಅನುದಾನ ಬಿಡುಗಡೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts