More

    ಭೂತಾನ್​ ಮೂಲಕ ಭಾರತದ ಮೇಲೆ ಒತ್ತಡ ಹೇರುವ ಚೀನಾ ತಂತ್ರ; ಅದಕ್ಕೇ ತಿರುಮಂತ್ರ

    ನವದೆಹಲಿ: ವಿಸ್ತರಣಾವಾದಿ ಮನೋಭಾವದ ಚೀನಾ ಲಡಾಖ್​ನ ಪೂರ್ವಭಾಗದಲ್ಲಿ ಹೇಗಾದರೂ ಮಾಡಿ ಭಾರತದ ಭೂಮಿಯನ್ನು ಕಬಳಿಸಲೇಬೇಕು ಎಂದು ಹುನ್ನಾರ ನಡೆಸುತ್ತಿದೆ. ಇದಕ್ಕಾಗಿ ಅದು ಭೂತಾನ್​ನೊಂದಿಗಿನ ಗಡಿ ವಿವಾದದ ಕಿಡಿ ಹೊತ್ತಿಸುವ ಮೂಲಕ ಭಾರತದ ಮೇಲೆ ಒತ್ತಡ ಹೇರುವ ತಂತ್ರವನ್ನೂ ಅನುಸರಿಸಿತ್ತು. ಆದರೆ, ಅದರ ಈ ಪ್ರಯತ್ನ ಅದಕ್ಕೇ ತಿರುಗುಬಾಣವಾಗಿದೆ.

    2017ರ ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ನಡುವೆ ಸ್ಯಾಂಡ್​ವಿಚ್​ನಂತೆ ಕುಳಿತಿರುವ ಭೂತಾನ್​ ಒಂದು ಹಂತದಲ್ಲಿ ಭಾರತ ಮತ್ತು ಚೀನಾದೊಂದಿಗೆ ಸಮಾನ ಮಿತ್ರತ್ವ ಕಾಯ್ದುಕೊಳ್ಳಲು ನಿರ್ಧರಿಸಿತ್ತು. ಆದರೆ, ಚೀನಾದ ವಿಸ್ತರಣಾವಾದಿ ಮನೋಭಾವ ಹಾಗೂ ತನ್ನ ಅತ್ಯಮೂಲ್ಯವಾದ ರಾಷ್ಟ್ರೀಯ ಅಭಯಾರಣ್ಯವನ್ನು ಕಬಳಿಸಲು ನಡೆಸುತ್ತಿರುವ ಹುನ್ನಾರವನ್ನು ಮನಗಂಡ ನಂತರದಲ್ಲಿ ಭಾರತದೊಂದಿಗೆ ಹೆಚ್ಚಿನ ಸ್ನೇಹ ಹೊಂದುವುದೇ ಸುರಕ್ಷಿತ ಎಂದು ಭೂತಾನ್​ ಭಾವಿಸಿದೆ. ಈ ಹಿನ್ನೆಲೆಯಲ್ಲಿ ಅದು ಭಾರತಕ್ಕೆ ಮತ್ತಷ್ಟು ಸನಿಹವಾಗುವ ಪ್ರಯತ್ನಗಳಿಗೆ ಚಾಲನೆ ನೀಡಿದೆ.

    ಅಮೆರಿಕ ಮೂಲದ ಬಹುರಾಷ್ಟ್ರೀಯ ನಿಧಿ, ಜಾಗತಿಕ ಪರಿಸರ ಸೌಲಭ್ಯದ ಜೂನ್​ ತಿಂಗಳ ಸಭೆಯಲ್ಲಿ ತನ್ನ ಸಕ್​ಟೆಂಗ್​ ವನ್ಯಜೀವಿ ಅಭಯಾರಣ್ಯವನ್ನು ಅಭಿವೃದ್ಧಿಪಡಿಸಲು ಭೂತಾನ್​ ಕೇಳಿದ್ದ ಧನಸಹಾಯ ಕೊಡಲು ಚೀನಾ ತಿರಸ್ಕರಿಸಿತ್ತು. ಅಭಯಾರಣ್ಯದ 650 ಚದರ ಕಿ.ಮೀ. ಪ್ರದೇಶದ ಬಗ್ಗೆ ಚೀನಾ ಮತ್ತು ಭೂತಾನ್​ ನಡುವೆ ವಿವಾದ ಇರುವುದರಿಂದ ಅಭಯಾರಣ್ಯದ ಅಭಿವೃದ್ಧಿ ಹಣ ಕೊಡಲು ಸಾಧ್ಯವಿಲ್ಲ ಎಂದು ಚೀನಾದ ಪ್ರತಿನಿಧಿ ಮುಖಕ್ಕೆ ಹೊಡೆದಂತೆ ಹೇಳಿದ್ದರು. ಇದು ಭೂತಾನ್​ ಅನ್ನು ಕರೆಳಿಸಿ, ಭಾರತಕ್ಕೆ ಮತ್ತಷ್ಟು ಸನಿಹವಾಗುವಂತೆ ಭೂತಾನ್​ಗೆ ಪ್ರೇರೇಪಣೆ ಒದಗಿಸಿತು ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ತಮ್ಮ ರಾಯಭಾರ ಕಚೇರಿ ಮೂಲಕ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಭೂತಾನ್​ನ ಅಧಿಕಾರಿಗಳು, ತಮ್ಮ ಭೂಮಿಯನ್ನು ಅತಿಕ್ರಮಿಸಲು ಚೀನಾ ನಡೆಸುತ್ತಿರುವ ಹುನ್ನಾರವನ್ನು ಖಂಡಿಸಿದ್ದರು. ಯಾವುದೇ ಗಡಿ ವಿವಾದದ ಬಗ್ಗೆ ಈ ಕುರಿತು ನಡೆಯುವ ಮುಂದಿನ ಸುತ್ತಿನ ಸಭೆಯಲ್ಲಿ ಚರ್ಚಿಸೋಣ ಎಂದು ಸ್ವಲ್ಪ ಖಾರವಾಗಿಯೇ ಭೂತಾನ್​ ಪ್ರತಿಕ್ರಿಯಿಸಿತ್ತು.

    ಇದನ್ನೂ ಓದಿ: ವಧು-ವರ ಸೇರಿದಂತೆ ಮದುವೆಗೆ ಬಂದಿದ್ದ 43 ಮಂದಿಗೂ ಕರೊನಾ ಸೋಂಕು…!

    ಭೂತಾನ್​ ಮತ್ತು ಚೀನಾ ನಡುವೆ ಗಡಿ ವಿವಾದ ಇದ್ದು, 1984ರಿಂದ ಇದುವರೆಗೆ 24 ಸುತ್ತಿನ ಮಾತುಕತೆಗಳು ನಡೆದಿವೆ. ಡೋಕ್ಲಾಂ, ಸಿನ್​ಚುಲುಂಗ್​, ಡ್ರಮನ ಮತ್ತು ಶಾಕಟೋdಲ್ಲಿರುವ 269 ಚದರ ಕಿ.ಮೀ. ಪ್ರದೇಶವನ್ನು ತನಗೆ ಬಿಟ್ಟುಕೊಟ್ಟರೆ, ಪಸಾಮ್​ಲುಂಗ್​ ಮತ್ತು ಜಾಖರ್​ಲುಂಗ್​ ಕಣಿವೆಗಳನ್ನು ಭೂತಾನ್​ಗೆ ಬಿಟ್ಟುಕೊಡುವುದಾಗಿ ಹೇಳುತ್ತಿದೆ.

    ಭೂತಾನ್​ ಮತ್ತು ಚೀನಾ ನಡುವೆ 764 ಚದರ ಕಿ.ಮೀ. ಗಡಿ ವಿವಾದವಿದೆ. ಚೀನಾ ಹೇಳುತ್ತಿರುವಂತೆ ಟ್ರಾಸಿಗಾಂಗ್​ ಜಿಲ್ಲೆಯಲ್ಲಿ 650 ಚದರ ಕಿ.ಮೀ. ಪ್ರದೇಶದಲ್ಲಿ ಹಬ್ಬಿರುವ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯವನ್ನು ಚೀನಾಕ್ಕೆ ಬಿಟ್ಟುಕೊಟ್ಟರೆ, ವಿವಾದವಿರುವ ಪ್ರಾಂತ್ಯಕ್ಕಿಂತಲೂ ಹೆಚ್ಚಿನ ಪ್ರದೇಶವನ್ನು ಅದಕ್ಕೆ ಬಿಟ್ಟುಕೊಟ್ಟಂತೆ ಆಗುತ್ತದೆ ಎಂಬುದು ಭೂತಾನ್​ ಅಧಿಕಾರಿಗಳ ಪ್ರತಿಪಾದನೆಯಾಗಿದೆ. ಈ ಹಿನ್ನೆಲೆಯಲ್ಲಿ ಅದು ಚೀನಾದ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸುತ್ತಿದೆ.

    ಇದೇ ವೇಳೆ ಭಾರತ ಅಭಯಾರಣ್ಯದ ಮೂಲಕ ರಸ್ತೆ ನಿರ್ಮಿಸಿಕೊಡಲು ಭೂತಾನ್​ ಎದುರು ಪ್ರಸ್ತಾಪವಿರಿಸಿದೆ. ಈ ರಸ್ತೆ ನಿರ್ಮಾಣದಿಂದ ಭಾರತದ ಗುವಾಹಟಿ ಮತ್ತು ಅರುಣಾಚಲ ಪ್ರದೇಶದ ತವಾಂಗ್​ನ ನಡುವಿನ ಅಂತರ 450 ಕಿ.ಮೀ.ನಷ್ಟು ಕಡಿಮೆಯಾಗಲಿದೆ. ಈ ಬಗ್ಗೆ ಭೂತಾನ್​ಗೆ ಒಲವು ಇದ್ದು, ಅದನ್ನು ಭಾರತಕ್ಕೆ ಮತ್ತಷ್ಟು ಸಮೀಪ ತಂದಿದೆ ಎಂದು ಹೇಳಲಾಗುತ್ತಿದೆ.

    ಕಾರ್ಗಿಲ್​ ವಿಜಯೋತ್ಸವಕ್ಕೆ 21 ವರ್ಷ: ಈಗಲೂ ಇಮ್ಮಡಿಸುತ್ತದೆ ಉತ್ಸಾಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts