More

    ಬಂಗಾರದ ದರ ಮೀರಿಸಿದ ಮೆಣಸಿನಕಾಯಿ

    ಬ್ಯಾಡಗಿ: ಅಂತಾರಾಷ್ಟ್ರೀಯ ಖ್ಯಾತಿಯ ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 1,05,090 ಚೀಲಗಳು ಆವಕಗೊಂಡಿದ್ದು, ಬ್ಯಾಡಗಿ ಡಬ್ಬಿ ತಳಿ ಕ್ವಿಂಟಾಲ್​ಗೆ 50,111 ರೂ.ಗೆ ಮಾರಾಟವಾಗಿ ದಾಖಲೆ ಸೃಷ್ಟಿಸಿದೆ.

    ದೇಶದಲ್ಲಿ ಆಂಧ್ರದ ಗುಂಟೂರು ಅತಿದೊಡ್ಡ ಮೆಣಸಿನಕಾಯಿ ಮಾರುಕಟ್ಟೆಯಾಗಿದ್ದು, ಎರಡನೇ ಸ್ಥಾನದಲ್ಲಿ ಬ್ಯಾಡಗಿ ಮಾರುಕಟ್ಟೆಯಿದೆ. ಇಲ್ಲಿನ ಮೆಣಸಿನಕಾಯಿ ರುಚಿ ಹಾಗೂ ಬಣ್ಣದಿಂದ ಖ್ಯಾತಿ ಗಳಿಸಿದೆ. ಹೀಗಾಗಿ ದಿಲ್ಲಿ ಮಸಾಲಾ ಕಂಪನಿ, ಕೇರಳ, ಚನ್ನೈಸೇರಿದಂತೆ ದೇಶದ ಮೂಲೆಮೂಲೆಗೂ ಇಲ್ಲಿಂದ ಮೆಣಸಿನಕಾಯಿ ರಫ್ತಾಗುತ್ತಿದೆ. ಇಲ್ಲಿ ದೊಡ್ಡಮಟ್ಟದ ಖರೀದಿದಾರರಿದ್ದು, ಆನ್​ಲೈನ್ ಟೆಂಡರ್ ಮೂಲಕ ಗುಣಮಟ್ಟಕ್ಕೆ ತಕ್ಕಂತೆ ಉತ್ತಮ ದರ ನೀಡಲಾಗುತ್ತಿದೆ. ಹೀಗಾಗಿ, ಮಾರುಕಟ್ಟೆಗೆ ಎಗ್ಗಿಲ್ಲದೆ ಮೆಣಸಿನಕಾಯಿ ಚೀಲಗಳು ಬರುತ್ತಿವೆ. ದೂರದ ಆಂಧ್ರ ಸೀಮೆ ಸೇರಿದಂತೆ ಬಳ್ಳಾರಿ ಹಾಗೂ ರಾಯಚೂರು ಪ್ರದೇಶದಲ್ಲಿ ಬೆಳೆದ ಮೆಣಸಿನಕಾಯಿಯನ್ನು ರೈತರು ತರುತ್ತಿದ್ದಾರೆ.

    ಮೆಣಸಿನಕಾಯಿಗೆ ಬಂಗಾರದ ಬೆಲೆ: ಐದಾರು ದಶಕಗಳ ಇತಿಹಾಸದಲ್ಲಿ ಹಿಂದೆಂದೂ ಕೇಳರಿಯದಷ್ಟು ದರದಲ್ಲಿ ಮೆಣಸಿನಕಾಯಿ ಮಾರಾಟ ಕಂಡಿದ್ದು, ಬೆಳೆಗಾರರಲ್ಲಿ ಸಂತಸ ಇಮ್ಮಡಿಗೊಂಡಿದೆ.

    ಈ ಹಿಂದಿನ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 28 ಸಾವಿರ ರೂ. ದಿಂದ 30 ಸಾವಿರ ರೂ.ವರೆಗೆ ಮಾರಾಟವಾಗುತ್ತಿತ್ತು. ಕರೊನಾ, ಅತಿವೃಷ್ಟಿ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವು ಬೆಳವಣಿಗೆ ಮಧ್ಯೆಯೂ ಮಾರುಕಟ್ಟೆ ವಹಿವಾಟು ಏರಿಕೆಯಾಗುತ್ತಿದೆ. 2020 ಡಿಸೆಂಬರ್​ನಲ್ಲಿ ಬ್ಯಾಡಗಿ ಮಾರುಕಟ್ಟೆಗೆ ಶುಕ್ರದೆಸೆ ಎನ್ನಬಹುದು.

    ಕಳೆದ ವಾರ ಡಬ್ಬಿ ಕ್ವಿಂಟಾಲ್​ಗೆ 33,500 ರೂ., ಬಳಿಕ 45,111 ರೂ. ದರ ಅತಿಹೆಚ್ಚು ಎನ್ನಲಾಗಿತ್ತು. ಆದರೆ, ಸೋಮವಾರ ಏಕಾಏಕಿ ಕ್ವಿಂಟಾಲ್​ಗೆ 5 ಸಾವಿರ ರೂ. ಏರಿಕೆ ಕಂಡಿದೆ. ಸೋಮವಾರ (ಡಿ. 28ರಂದು) ಇಲ್ಲಿನ ಎ.ಸಿ. ಕಟ್ಟೆಪ್ಪನವರ ದಲಾಲರ ಅಂಗಡಿಯಲ್ಲಿ ಖರೀದಿದಾರ ಚಂದ್ರಶೇಖರ ಆಲದಗೇರಿ ಎಂಬುವರು, ಗದಗ ಜಿಲ್ಲೆ ಬೆಟಗೇರಿಯ ರೈತ ಮಲ್ಲಿಕಾರ್ಜುನ ಬಿ. ಕರಮಿಸ್ಕಿ ಅವರ 3 ಚೀಲ ಡಬ್ಬಿ ಮೆಣಸಿನಕಾಯಿ ಚೀಲಗಳಿಗೆ ಕ್ವಿಂಟಾಲ್​ಗೆ 50,111 ರೂ.ನಂತೆ ಟೆಂಡರ್​ನಲ್ಲಿ ನೀಡಿ ಖರೀದಿಸಿದ್ದಾರೆ. ಕ್ವಿಂಟಾಲ್ ಮೆಣಸಿಕಾಯಿಗೆ ತೊಲೆ ಬಂಗಾರದ ಮೌಲ್ಯ ಬಂದಿದ್ದು, ಮೆಣಸಿನಕಾಯಿ ದರ ಅರ್ಧ ಲಕ್ಷ ದಾಟಿದಂತಾಗಿದೆ. ಮಾರುಕಟ್ಟೆಯಲ್ಲಿ ವಾರಂಪ್ರತಿ ದರ ಏರುತ್ತಿರುವುದು ರೈತರನ್ನು ಹುಬ್ಬೇರಿಸುವಂತೆ ಮಾಡಿದೆ.

    ಸೋಮವಾರದ ದರ: ಕ್ವಿಂಟಾಲ್​ಗೆ ಬ್ಯಾಡಗಿ ಕಡ್ಡಿ 1929-38009, ಡಬ್ಬಿ 3009-50111, ಗುಂಟೂರು 600-13509 ರೂ. ದರದಲ್ಲಿ ಮಾರಾಟವಾಯಿತು. ಒಟ್ಟು 257 ದಲಾಲರ ಅಂಗಡಿಗಳಲ್ಲಿ 20145 ಲಾಟ್​ಗಳಿದ್ದವು. 353 ಖರೀದಿದಾರರು ಪಾಲ್ಗೊಂಡಿದ್ದರು. ಸೋಮವಾರ 1,05,090 ಚೀಲಗಳು ಆವಕವಾಗಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts