More

    ಶಾಲೆಗಳಲ್ಲಿ ಮಕ್ಕಳ ಕಲರವ

    ಹಾವೇರಿ: ಕರೊನಾ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು 8 ತಿಂಗಳು ತಡವಾಗಿ ಹೊಸ ವರ್ಷಾಚರಣೆಯೊಂದಿಗೆ ಶುಕ್ರವಾರ ಆರಂಭಗೊಂಡವು.

    ಜಿಲ್ಲೆಯ ಎಲ್ಲ ಶಾಲೆಗಳಿಗೆ ತಳಿರು, ತೋರಣ ಕಟ್ಟಿ ಸಿಂಗರಿಸಲಾಗಿತ್ತು. ಶಾಲಾ ಕೊಠಡಿ ಪ್ರವೇಶದ ಮುನ್ನವೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ನಡೆಸಿ, ಕೈಗೆ ಸ್ಯಾನಿಟೈಸರ್ ಹಾಕಿ ಒಳಬಿಡಲಾಯಿತು. ಕೊಠಡಿಯೊಳಗೆ ಮಕ್ಕಳಿಗೆ ವಿದ್ಯಾಗಮ ಪಠ್ಯ ಬೋಧನೆ, ಪರಸ್ಪರ ಅಂತರ ಕಾಯ್ದುಕೊಂಡು ನಡೆಸಲಾಯಿತು. ಕೇವಲ ಆನ್​ಲೈನ್, ಯೂಟ್ಯೂಬ್ ಮೂಲಕ ಪಾಠ ಕೇಳುತ್ತಿದ್ದ ಮಕ್ಕಳು ಇಂದು ಸಂಭ್ರಮದಲ್ಲಿದ್ದರು.

    ಮೊದಲ ದಿನ ದ್ವಿತೀಯ ಪಿಯು ಮತ್ತು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತರಗತಿ ಶುರು ಮಾಡಲಾಯಿತು. 6ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳು ನಡೆದವು. 10ರಿಂದ 15ಮಕ್ಕಳನ್ನು ಪ್ರತ್ಯೇಕವಾಗಿ ಕೂರಿಸಿ ಶಿಕ್ಷಕರು ಪಾಠ ಮಾಡಿದರು.

    ಜಿಲ್ಲೆಯಲ್ಲಿ ಮೊದಲ ದಿನ 25 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದರು. ದ್ವಿತೀಯ ಪಿಯು ವಿದ್ಯಾರ್ಥಿಗಳ ಹಾಜರಾತಿಯೂ ಶೇ. 20ರಷ್ಟಿತ್ತು. 1,200 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಗಮ ತರಗತಿಗೆ ಹಾಜರಾಗಿದ್ದರು. ಪಾಠಕ್ಕೂ ಮೊದಲು ಶಿಕ್ಷಕರು ವಿದ್ಯಾರ್ಥಿಗಳಿಗೆ ಕೋವಿಡ್ ಮುಂಜಾಗ್ರತಾ ಕ್ರಮದ ಕುರಿತು ಮಾಹಿತಿ ನೀಡಿದರು.

    ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ರಿಪೋರ್ಟ್​ನೊಂದಿಗೆ ಪಾಲಕರ ಒಪ್ಪಿಗೆ ಪತ್ರ ತರುವುದನ್ನು ಕಡ್ಡಾಯ ಮಾಡಿದ್ದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಲಿಲ್ಲ.

    ಜಿಪಂ ಸಿಇಒ ಮಹಮ್ಮದ ರೋಶನ್ ವಿವಿಧ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. ಡಿಡಿಪಿಐ ಅಂದಾನಪ್ಪ ವಡಗೇರಿ, ಬಿಇಒ ಎಂ.ಎಚ್. ಪಾಟೀಲ, ದೈಹಿಕ ಶಿಕ್ಷಣಾಧಿಕಾರಿ ಇಚ್ಚಂಗಿ ಸೇರಿದಂತೆ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಹಬ್ಬದ ಸಂಭ್ರಮ

    ಶಾಲಾ ಪ್ರಾರಂಭೋತ್ಸವವನ್ನು ಎಲ್ಲ ಶಾಲೆಗಳಲ್ಲಿ ಸಂಭ್ರಮದಿಂದಲೇ ಆಚರಿಸಲಾಯಿತು. ಹೊಸ ವರ್ಷದ ಮೊದಲ ದಿನವೂ ಆಗಿದ್ದರಿಂದ ವಿದ್ಯಾರ್ಥಿಗಳು, ಶಿಕ್ಷಕರು ಉತ್ಸಾಹದಿಂದಲೇ ಶಾಲೆಗೆ ಆಗಮಿಸಿದರು. ಶಾಲೆಗಳ ಎದುರು ರಂಗೋಲಿ ಹಾಕಿ, ತಳಿರು ತೋರಣ, ಬಲೂನ್ ಕಟ್ಟಿ ಸಿಂಗರಿಸಲಾಗಿತ್ತು. ಬಹಳ ದಿನಗಳ ಬಳಿಕ ಶಿಕ್ಷಕರು ವಿದ್ಯಾರ್ಥಿಗಳ ಭೇಟಿಯಾಗಿದ್ದರಿಂದ ಶಾಲಾ ಆವರಣದಲ್ಲಿ ಸಡಗರದ ವಾತಾವರಣ ನಿರ್ವಣವಾಗಿತ್ತು.

    ಶೇ. 50 ವಿದ್ಯಾರ್ಥಿಗಳ ಆಗಮನ

    ಹಾವೇರಿ ತಾಲೂಕಿನಲ್ಲಿ ಶೇ. 50, ಹಾನಗಲ್ಲ ಶೇ. 50, ಸವಣೂರ ಶೇ. 50, ಬ್ಯಾಡಗಿ, ರಾಣೆಬೆನ್ನೂರ ತಾಲೂಕಿನಲ್ಲಿ ಶೇ. 45, ಹಿರೇಕೆರೂರ ಶೇ. 35, ಶಿಗ್ಗಾಂವಿ ತಾಲೂಕಿನಲ್ಲಿ ಶೇ. 30ರಷ್ಟು ಮಕ್ಕಳು ಮೊದಲ ದಿನ ಶಾಲೆಗೆ ಆಗಮಿಸಿರುವುದಾಗಿ ಡಿಡಿಪಿಐ ಅಂದಾನೆಪ್ಪ ವಡಿಗೇರಿ ತಿಳಿಸಿದರು.

    ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ನೀಡಲು ಸಲಹೆ

    ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲಾ ಮುಖ್ಯವಾಹಿನಿಗೆ ತರಲು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಅಧಿನಿಯಮದಂತೆ ಸಮೀಕ್ಷೆ ನಡೆಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆ ಸದಸ್ಯರು ಸಮೀಕ್ಷೆ ಕೈಗೊಳ್ಳಲು ಮನೆಮನೆಗೆ ಭೇಟಿ ನೀಡಲಿದ್ದಾರೆ. ಕಾರಣ ಸಾರ್ವಜನಿಕರು ಶಾಲೆಯಿಂದ ಹೊರಗಳಿದ ಮಕ್ಕಳ ಸಂಪೂರ್ಣ ಮಾಹಿತಿಯನ್ನು ಸಮೀಕ್ಷೆದಾರರಿಗೆ ನೀಡುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts