More

    ಕೃಷಿಕರ ಮಕ್ಕಳಿಗೆ ವರವಾದ ವಿದ್ಯಾನಿಧಿ: ಕೊಪ್ಪಳ ಜಿಲ್ಲೆಯ 36 ಸಾವಿರ ವಿದ್ಯಾರ್ಥಿಗಳಿಗೆ ಪ್ರಯೋಜನ

    ವಿ.ಕೆ. ರವೀಂದ್ರ ಕೊಪ್ಪಳ

    ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದು, ಮೊದಲ ವರ್ಷ ಜಿಲ್ಲೆಯ 36 ಸಾವಿರ ವಿದ್ಯಾರ್ಥಿಗಳಿಗೆ 11 ಕೋಟಿ ರೂ. ಶಿಷ್ಯವೇತನ ದೊರೆತಿರುವುದು ವಿಶೇಷ.

    ವಿದ್ಯಾರ್ಥಿಗಳ ಶಿಕ್ಷಣ ಪ್ರೋತ್ಸಾಹಕ್ಕಾಗಿ ಸರ್ಕಾರ ಈಗಾಗಲೇ ಹಲವು ಶಿಷ್ಯ ವೇತನ, ವಸತಿ ಶಾಲೆ ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಪಡೆದ ಅಂಕಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಆಧಾರದಲ್ಲಿ ಸ್ಕಾಲರ್‌ಶಿಪ್ ದೊರೆಯುತ್ತಿವೆ. ಮೊದಲ ಬಾರಿಗೆ ರೈತರ ಮಕ್ಕಳಿಗಾಗಿ ಕಳೆದ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೈತ ವಿದ್ಯಾನಿಧಿ ಯೋಜನೆ ಘೋಷಿಸಿದ್ದಾರೆ. ಪಹಣಿ ಪತ್ರ ಹೊಂದಿದ ರೈತರ ಮಕ್ಕಳು ಸೌಲಭ್ಯ ಪಡೆಯಬಹುದಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿಪರ ಕೋರ್ಸ್‌ಗಳನ್ನು ಅಭ್ಯಾಸ ಮಾಡುವವರೂ ಸ್ಕಾಲರ್‌ಶಿಪ್ ಪಡೆಯಲು ಅರ್ಹತೆ ಹೊಂದಿದ್ದು, ಆಯಾ ಕೋರ್ಸ್‌ಗೆ ತಕ್ಕಂತೆ ಶಿಷ್ಯವೇತನ ನಿಗದಿಪಡಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಬಾಲಕರಿಗಿಂತ ಬಾಲಕಿಯರಿಗೆ ಹೆಚ್ಚಿನ ಶಿಷ್ಯವೇತನ ನೀಡಲಾಗುತ್ತಿದೆ.

    ಎಂಟರಿಂದ ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾಭ್ಯಾಸಕ್ಕೆ ರೈತ ಕುಟುಂಬದ ಹೆಣ್ಣುಮಕ್ಕಳಿಗೆ ವಾರ್ಷಿಕ ಎರಡು ಸಾವಿರ ರೂ. ನೀಡಲಾಗುತ್ತಿದೆ. ಪಿಯುಸಿ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳಿಗೆ 2,500 ರೂ., ವಿದ್ಯಾರ್ಥಿನಿಯರಿಗೆ 3,000 ರೂ., ಪದವಿಗೆ ವಿದ್ಯಾರ್ಥಿಗಳಿಗೆ 5 ಸಾವಿರ, ವಿದ್ಯಾರ್ಥಿನಿಯರಿಗೆ 5,500 ರೂ, ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ 7,500 ರೂ., ವಿದ್ಯಾರ್ಥಿನಿಯರಿಗೆ 8,000 ರೂ., ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳಿಗೆ 10 ಸಾವಿರ ರೂ., ವಿದ್ಯಾರ್ಥಿನಿಯರಿಗೆ 11 ಸಾವಿರ ರೂ. ಶಿಷ್ಯವೇತನ ನಿಗದಿಪಡಿಸಲಾಗಿದೆ. 2021-22ರಿಂದ ಯೋಜನೆ ಜಾರಿಗೆ ಬಂದಿದ್ದು, ಕೃಷಿ ಇಲಾಖೆಯಲ್ಲಿ ಎಫ್‌ಐಡಿ (ಫಾರ್ಮರ್ ಐಡಿ) ಹೊಂದಿದ ರೈತರ ಮಕ್ಕಳು ಅರ್ಜಿ ಸಲ್ಲಿಸಬಹುದು. ಇತರ ಶಿಷ್ಯವೇತನ ಸೌಲಭ್ಯ ಪಡೆಯುವ ರೈತರ ಮಕ್ಕಳೂ ರೈತ ವಿದ್ಯಾನಿಧಿ ಶಿಷ್ಯವೇತನವನ್ನೂ ಪಡೆಯಬಹುದು.

    ಯಾವ ತಾಲೂಕಿಗೆ ಎಷ್ಟು ಸಿಕ್ಕಿದೆ?: 2021-22ನೇ ಸಾಲಿನಲ್ಲಿ ಗಂಗಾವತಿ ತಾಲೂಕಿನಲ್ಲಿ 9,557 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, 3.30 ಕೋಟಿ ರೂ.ಶಿಷ್ಯ ವೇತನ ಪಡೆದಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ 10,210 ವಿದ್ಯಾರ್ಥಿಗಳಿಗೆ 4.23ಕೋಟಿ ರೂ., ಕುಷ್ಟಗಿಯಲ್ಲಿ 5,671 ವಿದ್ಯಾರ್ಥಿಗಳಿಗೆ 1.73 ಕೋಟಿ ರೂ. ಹಾಗೂ ಯಲಬುರ್ಗಾ ತಾಲೂಕಿನಲ್ಲಿ 5,378 ವಿದ್ಯಾರ್ಥಿಗಳಿಗೆ 1.80ಕೋಟಿ ರೂ. ಸ್ಕಾಲರ್‌ಶಿಪ್ ಬಂದಿದೆ. ಒಟ್ಟು 30,816 ಅಭ್ಯರ್ಥಿಗಳಿಗೆ 11.07ಕೋಟಿ ರೂ. ದೊರೆತಿದೆ. ಕೊಪ್ಪಳ ತಾಲೂಕಿನ ಅಭ್ಯರ್ಥಿಗಳಿಗೆ ಹೆಚ್ಚಿನ ಶಿಷ್ಯವೇತನ ಬಂದಿರುವುದು ವಿಶೇಷ.

    ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಕೃಷಿಕರ ಮಕ್ಕಳಿಗೆ ಅನುಕೂಲವಾಗಿದೆ. ಕಳೆದ ವರ್ಷ ಅರ್ಜಿ ಸಲ್ಲಿಸಿದ ಎಲ್ಲರಿಗೂ ಶಿಷ್ಯವೇತನ ಬಂದಿದೆ. ಈ ವರ್ಷ ಇನ್ನೂ ಅರ್ಜಿ ಆಹ್ವಾನಿಸಿಲ್ಲ. ಶೀಘ್ರವೇ ಕರೆಯಲಿದ್ದು, ಅರ್ಹ ರೈತರ ಮಕ್ಕಳು ಅರ್ಜಿ ಸಲ್ಲಿಸಿ ಸ್ಕಾಲರ್‌ಶಿಪ್ ಪಡೆದು ಉನ್ನತ ವಿದ್ಯಾಭ್ಯಾಸ ಕೈಗೊಳ್ಳಬಹುದು.
    | ವಿ.ಸದಾಶಿವ, ಜಂಟಿ ಕೃಷಿ ನಿರ್ದೇಶಕ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts