More

    ಕರ್ಫ್ಯೂ ಏಕತಾನತೆಗೆ ಬೀಚ್ ರಿಲ್ಯಾಕ್ಸ್

    ಮಂಗಳೂರು: ಕೋವಿಡ್ ಕರ್ಫ್ಯೂನಿಂದಾಗಿ ಹೊರಗೆ ಹೋಗಲಾಗದ ಜನರೀಗ ಕಡಲ ತೀರಗಳಿಗೆ ದಾಂಗುಡಿ ಇಡತೊಡಗಿದ್ದಾರೆ.
    ಇಡೀ ದಿನ ಮನೆಯಲ್ಲೇ ಕುಳಿತು ಬೋರ್ ಆಗುತ್ತಿದೆ ಎನ್ನುವವರಿಗೆ ತಿರುಗುವುದಕ್ಕೆ ಪಾರ್ಕ್ ಕ್ಲೋಸ್, ಮಾಲ್ ಬಂದ್, ಸಿನಿಮಾ ಹಾಲ್ ಕೂಡಾ ಇಲ್ಲ. ಹಾಗಾಗಿ ಮಂಗಳೂರಿನವರಿಗೆ ಇರುವ ಒಂದೇ ಮನರಂಜನೆ, ರಿಲ್ಯಾಕ್ಸ್ ಆಗುವ ಸ್ಥಳವೆಂದರೆ ಬೀಚ್.

    ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿದ್ದು ಸದ್ಯ ಊರಿನಲ್ಲಿ ವರ್ಕ್‌ಫ್ರಂ ಹೋಂನಲ್ಲಿರುವವರು ಅಲ್ಲದೆ, ಹೊರ ಊರಿನಿಂದ ಬಂದು ಇಲ್ಲಿನ ರೆಸಾರ್ಟ್‌ಗಳಲ್ಲಿ ರಜಾ ಮೂಡ್‌ನಲ್ಲಿರುವವರು ಹೆಚ್ಚಿದ್ದು ಹೊರಗೆ ಹೋಗಲಾಗದೆ ಸಂಜೆಯಾಗುತ್ತಲೇ ಹತ್ತಿರದ ಬೀಚ್ ಸೇರುತ್ತಾರೆ.
    ಸಂಜೆಯಿಂದ ರಾತ್ರಿ ತನಕವೂ ಬೀಚ್‌ನಲ್ಲಿ ಆಟವಾಡುವುದೋ, ಕುಳಿತು ಸಮಯ ಕಳೆಯುವುದೋ ಮಾಡುವುದು ಸದ್ಯದ ಟ್ರೆಂಡ್. ಕರಾವಳಿಯಲ್ಲಿ ಬೀಚ್ ಪಕ್ಕದಲ್ಲಿ ಉದ್ದಕ್ಕೂ ಇರುವ ರೆಸಾರ್ಟ್‌ಗಳಲ್ಲೂ ಹೊರಗಿನಿಂದ ಬಂದ ಜನರು ಕಾಣತೊಡಗಿದ್ದಾರೆ. ಕೋವಿಡ್ ಕಾರಣ ಸಾಕಷ್ಟು ಬಿಡುವಿದ್ದು, ವಾಹನದಲ್ಲಿ ಸಂಚರಿಸುವುದಕ್ಕೂ ಸದ್ಯ ಯಾವುದೇ ದೊಡ್ಡ ಅಡಚಣೆ ಇಲ್ಲದ ಕಾರಣ ರೆಸಾರ್ಟ್ ಸೇರಿಕೊಳ್ಳುವುದು ಸುಲಭ.

    ದೊಡ್ಡ ಬೀಚ್‌ಗಳು ಲಾಕ್: ಕರೊನಾ ಕಾರಣಕ್ಕೆ ಪಣಂಬೂರು, ತಣ್ಣೀರುಬಾವಿಯಂತಹ ದೊಡ್ಡ ಹಾಗೂ ಹೆಸರಾಂತ ಬೀಚ್‌ಗಳಿಗೆ ಜನರು ಪ್ರವೇಶಿಸುವುದನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ರಸ್ತೆ ಪಕ್ಕದಲ್ಲೇ ಈ ಕುರಿತು ಬ್ಯಾನರ್ ಕೂಡಾ ಹಾಕಲಾಗಿದೆ. ಆದರೆ ಮಂಗಳೂರಿನ ಉತ್ತರಕ್ಕೆ ಸುರತ್ಕಲ್, ಪಡುಬಿದ್ರಿವರೆಗೂ ಉದ್ದಕ್ಕೆ ಬೀಚ್ ಇದೆ. ಅದರಲ್ಲಿ ಎಲ್ಲಾ ಕಡೆಗೂ ಕಣ್ಗಾವಲು ಇರಿಸುವುದು ಕಷ್ಟ ಎನ್ನುವುದು ಅಧಿಕಾರಿಗಳ ಹೇಳಿಕೆ.
    ಸುರತ್ಕಲ್, ಇಡ್ಯಾ, ಹೊಸಬೆಟ್ಟು, ಮೂಲ್ಕಿ, ಪಡುಬಿದ್ರಿ ಮುಂತಾದೆಡೆ ಸಂಜೆ ವೇಳೆ ಜನರು ಅಲ್ಲಲ್ಲಿ ಸೇರುವುದು, ಕ್ರಿಕೆಟ್ ವಾಲಿಬಾಲ್ ಆಡುವುದು ಕಂಡುಬರುತ್ತಿದೆ.

    ಜನರು ಸೇರುವುದಕ್ಕೆ ನಿರ್ಬಂಧ ಹಾಕಿದ್ದೇವೆ. ಬ್ಯಾನರ್ ಕೂಡಾ ಅಲ್ಲಲ್ಲಿ ಹಾಕಿದ್ದೇವೆ. ಮೇಲುಸ್ತುವಾರಿಗೆ ಕೆಲ ಸಿಬ್ಬಂದಿಯನ್ನೂ ಇರಿಸಿದ್ದೇವೆ. ಅಲ್ಲದೆ ಪೊಲೀಸರಿಗೂ ಈ ಕುರಿತು ಮಾಹಿತಿ ನೀಡಿದ್ದೇವೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಮಾಣಿಕ್ಯ.
    ಸದ್ಯ ರೆಸಾರ್ಟ್, ಹೋಟೆಲ್‌ಗಳಲ್ಲಿ ಜನ ನಿಲ್ಲುವುದಕ್ಕೆ ಮಾರ್ಗಸೂಚಿಯಲ್ಲಿ ಯಾವುದೇ ನಿರ್ಬಂಧ ಇಲ್ಲ. ಹಾಗಾಗಿ ಅದನ್ನು ನಿಯಂತ್ರಿಸುವುದು ಕಷ್ಟ. ಆದರೆ ಜನರು ಒಟ್ಟು ಸೇರಿ ಆಟವಾಡುವಂತಿಲ್ಲ. ಅದನ್ನು ನಿಯಂತ್ರಿಸುವ ಬಗ್ಗೆ ಪೊಲೀಸರಿಗೆ ಸೂಚನೆ ನೀಡುವುದಾಗಿ ತಿಳಿಸುತ್ತಾರೆ.

    ಭಗವತಿ ಪ್ರೇಮ್ ಆಕರ್ಷಣೆ!: ಸುರತ್ಕಲ್ ಹಾಗೂ ಹೊಸಬೆಟ್ಟು ಬೀಚ್ ನಡುವೆ ಡ್ರೆಜ್ಜರ್ ನೌಕೆ ಭಗವತಿ ಪ್ರೇಂ ನಿಲ್ಲಿಸಿ ಎರಡು ವರ್ಷವೇ ಆಗುತ್ತಾ ಬಂದಿದೆ. ಈ ಹಡಗು ಬೀಚ್‌ನಿಂದ ಸುಮಾರು 400 ಮೀಟರ್ ದೂರದಲ್ಲಿ ವಾಲಿಕೊಂಡು ನಿಂತಿರುವುದು ಹೊರಗಿನ ಜನರಿಗೆ ಆಕರ್ಷಣೆಯ ತಾಣ. ಅದರ ಮುಂಭಾಗ ಒಂದಷ್ಟು ಜನ ಸೇರುವುದು ಫೋಟೋ ತೆಗೆಯುವುದು ಕಾಣುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts