More

    ಕರೊನಾ ಪರಿಹಾರ ನಿಧಿಗೆ ಹುಂಡಿ ಹಣ

    ವಿಜಯವಾಣಿ ಸುದ್ದಿಜಾಲ ಹಾವೇರಿ

    ಕರೊನಾ ಮಹಾಮಾರಿ ನಿಯಂತ್ರಣಕ್ಕೆ ವಿಶ್ವದಾದ್ಯಂತ ನಾನಾ ರೀತಿಯ ಹೋರಾಟ ನಡೆಯುತ್ತಿದೆ. ಕರೊನಾ ಮಹಾಮಾರಿ ತೊಲಗಿಸಲು ಸರ್ಕಾರಕ್ಕೆ ಅನೇಕರು ನೆರವಿನ ರೂಪದಲ್ಲಿ ಕೈಜೋಡಿಸಿದ್ದಾರೆ. ಆದರೆ, ಹಾವೇರಿಯಲ್ಲಿ ಮೂವರು ಸಣ್ಣಮಕ್ಕಳು ತಮಗಾಗಿ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನೇ ಪರಿಹಾರ ನಿಧಿಗೆ ನೀಡಿ ಮಾದರಿಯಾಗಿದ್ದಾರೆ.

    ನಗರದ ಕಾಂಗ್ರೆಸ್ ಮುಖಂಡ ಬಸವರಾಜ ಬಳ್ಳಾರಿ ಅವರ ಮಕ್ಕಳಾದ ಅವನಿ ಬಳ್ಳಾರಿ (7), ಸನ್ನಿಧಿ ಬಳ್ಳಾರಿ (6), ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಪುತ್ರಿ ದೀಪ್ತಿ ಪಾಟೀಲ (7) ಈ ಮೂವರು 3 ವರ್ಷಗಳಿಂದ ಹುಂಡಿಯಲ್ಲಿ ಕೂಡಿಟ್ಟಿದ್ದ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಮೂಲಕ ನೀಡಿದ್ದಾರೆ.

    ಪಾಲಕರು ತಮಗೆ ಆಗಾಗ್ಗೆ ನೀಡಿದ್ದ ಚಿಲ್ಲರೆ ಹಣವನ್ನು ಹುಟ್ಟುಹಬ್ಬಕ್ಕೆ ವೆಚ್ಚ ಮಾಡುವ ಉದ್ದೇಶದಿಂದ ಹುಂಡಿಯಲ್ಲಿಟ್ಟಿದ್ದರು. ಕರೊನಾ ಸಮಯದಲ್ಲಿ ತಮ್ಮ ಪಾಲಕರು ಸಂಘ ಸಂಸ್ಥೆಗಳ ಮೂಲಕ ಅನೇಕರಿಗೆ ನೆರವಾಗುತ್ತಿರುವುದನ್ನು ನೋಡಿ ಪ್ರೇರಣೆಗೊಂಡ ಈ ಮಕ್ಕಳು, ನಮ್ಮಲ್ಲಿರುವ ಹಣವನ್ನೂ ಈ ಸಮಯದಲ್ಲಿ ಕೊಡುತ್ತೇವೆ ಎಂದು ಹುಂಡಿಯನ್ನು ತೆಗೆದು ನಾಣ್ಯ, ನೋಟುಗಳನ್ನು ಎಣಿಸಿ ಪಾಲಕರಿಗೆ ಕೊಟ್ಟು ಇದನ್ನು ಕರೊನಾ ಪರಿಹಾರಕ್ಕೆ ಬಳಸಲು ಮುಖ್ಯಮಂತ್ರಿಗಳಿಗೆ ಕೊಡಿ ಎಂದು ಹೇಳಿದ್ದಾರೆ. ಮಕ್ಕಳ ಭಾವನೆ ಅರ್ಥಮಾಡಿಕೊಂಡ ಪಾಲಕರು ತಮ್ಮದೊಂದಿಷ್ಟು ಹಣ ಸೇರಿಸಿ ಸಿಎಂ ಪರಿಹಾರ ನಿಧಿಗೆ 25 ಸಾವಿರ ರೂ.ಗಳ ಡಿಡಿ ತೆಗಿಸಿ ಮಂಗಳವಾರ ಜಿಲ್ಲಾಧಿಕಾರಿಗೆ ಮಕ್ಕಳ ಮೂಲಕ ಕೊಡಿಸಿದ್ದಾರೆ.

    ಮಕ್ಕಳಿಗೆ ಕೈ ಮುಗಿದ ಡಿಸಿ: ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಅವರಿಗೆ ಡಿಡಿ ಕೊಟ್ಟ ಮಕ್ಕಳು ಇದನ್ನು ಕರೊನಾ ವಿರುದ್ಧದ ಹೋರಾಟಕ್ಕೆ ಬಳಸಲು ಮುಖ್ಯಮಂತ್ರಿಗಳಿಗೆ ಕಳಿಸಿಕೊಡಿ ಎಂದು ಕೈಮುಗಿದಿದ್ದಾರೆ. ಮಕ್ಕಳ ಈ ಮಾತುಗಳಿಂದ ಬಾವುಕರಾದ ಜಿಲ್ಲಾಧಿಕಾರಿ ಮಕ್ಕಳಿಗೆ ಕೈಮುಗಿದು, ಅವರ ನಿಸ್ವಾರ್ಥ ಸೇವೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts