More

    ಸಿದ್ಧೇಶ್ವರ ಶ್ರೀಗಳ ಬಾಲ್ಯ ಹೇಗಿತ್ತು? ಮಹಾನ್​​ ಸಂತನಾಗುವ ದಾರಿ ಒಲಿದ ಕಥೆ ರೋಚಕ..!

    ವಿಜಯಪುರ: ಸಿದ್ಧೇಶ್ವರ ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನಂದರಗಿ ಗ್ರಾಮದಲ್ಲಿ (ತಾಯಿಯ ತವರೂರು) 1940ರ ಸೆಪ್ಟೆಂಬರ್ 5 (ಶಾಲೆ ದಾಖಲಾತಿ ಪ್ರಕಾರ) ಗಣೇಶ ಚತುರ್ಥಿಯಂದು ಜನಿಸಿದ್ದರು. ತಂದೆ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಖ್ಯಾತ ಚಿತ್ರ ಕಲಾವಿದ ಓಗೆಪ್ಪ ಬಿರಾದಾರ, ತಾಯಿ ಸಂಗಮ್ಮ. ಈ ದಂಪತಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಹಿರಿಯ ಮಗ ಸಿದ್ಧಗೊಂಡಪ್ಪನೇ ಈ ಸಿದ್ಧೇಶ್ವರ ಶ್ರೀಗಳು. ಶ್ರೀಗಳು ಬಿಜ್ಜರಗಿ ಗ್ರಾಮದಲ್ಲಿ 4ನೇ ತರಗತಿವರೆಗೆ ಕಲಿತರು.

    ‘ಬೆಳೆವ ಸಿರಿ ಮೊಳಕೆ’ಯಲ್ಲಿ ಎಂಬಂತೆ ಶ್ರೀಗಳಿಗೆ ಬಾಲ್ಯದಿಂದಲೂ ಚುರುಕುಬುದ್ಧಿ. 1955-56ರಲ್ಲಿ ಮುಲ್ಕಿ (7ನೇ ವರ್ಗ) ಪರೀಕ್ಷೆ ಬರೆಯಲು ವಿಜಯಪುರದ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿಗೆ ಬಂದಾಗ, ಶಾಲೆ ಸಮೀಪವೇ ಇದ್ದ ಶಿವಾನುಭವ ಮಂಟಪದಲ್ಲಿ ವೇದಾಂತ ಕೇಸರಿ ಮಲ್ಲಿಕಾರ್ಜುನ ಶ್ರೀಗಳು ಹೇಳುತ್ತಿದ್ದ ಅಧ್ಯಾತ್ಮ ಪ್ರವಚನ ಅವರ ಮನಸ್ಸನ್ನು ಸೆಳೆಯುತ್ತಿತ್ತು. ಪರೀಕ್ಷೆಗಳು ಮುಗಿಸಿ ಸಹಪಾಠಿಗಳು ಬಿಜ್ಜರಗಿಗೆ ಹಿಂತಿರುಗಿದರೆ, ಸಿದ್ಧಗೊಂಡಪ್ಪ ಊರಿಗೆ ಮರಳದೆ ಗುರುವಿನ ಆಶ್ರಯಕ್ಕೆ ಹಂಬಲಿಸಿ ವಿಜಯಪುರದಲ್ಲೇ ಉಳಿದುಕೊಂಡರು.

    ಬೆಳಗ್ಗೆ ಪ್ರವಚನ ಕೇಳಿ ರಾತ್ರಿ ಶ್ರೀಗಳು ತಂಗುತ್ತಿದ್ದ ಕೋಣೆ ಮುಂಭಾಗದಲ್ಲೇ ಮಲಗುತ್ತಿದ್ದ ಸಿದ್ಧಗೊಂಡಪ್ಪರನ್ನು ಗಮನಿಸಿದ ಮಲ್ಲಿಕಾರ್ಜುನ ಶ್ರೀಗಳು ಚಕಿತರಾಗಿ ಅವರ ಬಗ್ಗೆ ವಿಚಾರಿಸಿ, ಊರಿಗೆ ಕಳಿಸುವಂತೆ ಅಪ್ಪಣೆ ಕೊಡುತ್ತಾರೆ. ಆದರೆ, ಊರಿಗೆ ತೆರಳಿದ ಸಿದ್ಧಗೊಂಡಪ್ಪ ಮತ್ತೆ ವಿಜಯಪುರಕ್ಕೆ ಹಿಂದಿರುಗಿ ಮತ್ತೆ ಶ್ರೀಗಳ ಪ್ರವಚನ ಕೇಳುವುದು, ಅವರ ಕೋಣೆಯ ಮುಂದೆ ಮಲಗುವುದನ್ನು ಮಾಡುತ್ತಿದ್ದರಂತೆ. ಶ್ರೀಗಳು ಬಾಲಕನ ತಂದೆ ಓಗಪ್ಪ ಅವರನ್ನು ಕರೆಸಿಕೊಂಡು ಈ ಮಗು ಒಂದಿಷ್ಟು ದಿನ ನಮ್ಮಲ್ಲಿಯೇ ಇರಲಿ. ಅವನಿಗೆ ತಿಳಿಹೇಳಿ ಕಳುಹಿಸುತ್ತೇವೆ ಎಂದು ಹೇಳಿದ್ದರಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts