ಚಿಕ್ಕಮಗಳೂರು: ಹಸಿವು, ನೀರಡಿಕೆಯಿಂದ ಕಂಗಾಲಾಗಿದ್ದ ತಮಿಳುನಾಡು ಮೂಳದ ಕಾರ್ವಿುಕ ಕುಟುಂಬವೊಂದು ಸೋಮವಾರ ಆನ್ಲೈನ್ ಪಾಸ್ಗಾಗಿ ತಾಲೂಕು ಕಚೇರಿ ಆವರಣದಲ್ಲೇ ಮಕ್ಕಳನ್ನು ಮಲಗಿಸಿ ಸರದಿಯಲ್ಲಿ ನಿಂತಿದ್ದ ದೃಶ್ಯ ಮನಕಲಕುವಂತಿತ್ತು.
ನಾಲ್ಕು ತಿಂಗಳ ಹಿಂದೆ ಕೂಲಿ ಕೆಲಸಕ್ಕೆ ಆಗಮಿಸಿದ್ದ ಕುಟುಂಬ ಲಾಕ್ಡೌನ್ ಹಿನ್ನೆಲೆಯಲ್ಲಿ ಕಾಸು ಮತ್ತು ಕೆಲಸವಿಲ್ಲದೆ ಕುಳಿತು ದಿನ ದೂಡುವಂತಾಗಿತ್ತು. ಈ ನಡುವೆ ವಲಸಿಗರು ಸ್ವಸ್ಥಳಕ್ಕೆ ಹಿಂತಿರುಗಲು ಸರ್ಕಾರ ಅವಕಾಶ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಕಾರ್ವಿುಕರು ಊರಿಗೆ ಮರಳಲು ಅನುಮತಿಗಾಗಿ ಬೆಳಗ್ಗೆ 6.30ಕ್ಕೆ ತಾಲೂಕು ಕಚೇರಿಗೆ ಬಂದು ಸರದಿಯಲ್ಲಿ ನಿಂತಿದ್ದರು.
ಮೂವರು ಸಣ್ಣ ಮಕ್ಕಳು ತೂಕಡಿಸತೊಡಗಿದಾಗ ಕಚೇರಿ ಆವರಣದಲ್ಲೇ ನೆಲದ ಮೇಲೆ ಮಲಗಿಸಿ ಮತ್ತೆ ಸರದಿಯಲ್ಲಿ ಸೇರಿಕೊಂಡರು. 8.30ರ ಸುಮಾರಿಗೆ ಮಲಗಿದ ಮಕ್ಕಳನ್ನು ಪುರುಷರು ಕಾಯುತ್ತ ಕುಳಿತಿದ್ದರು. ಮಹಿಳೆಯರು ಪಾಸ್ಗಾಗಿ ನಿಂತು ಪಡೆಯುವ ಹೊತ್ತಿಗೆ ಮಧ್ಯಾಹ್ನ ಗಂಟೆ 12 ಆಗಿತ್ತು.
ಬಿಹಾರ, ಅಸ್ಸಾಂ, ಆಂಧ್ರ ಸೇರಿ ಹಲವು ರಾಜ್ಯಗಳ ವಲಸಿಗರು ಬೆಳಗಿನಿಂದಲೇ ಪಾಸ್ಗಾಗಿ ಮಧ್ಯಾಹ್ನದವರೆಗೂ ಆನ್ಲೈನ್ನಲ್ಲಿ ಮಾಹಿತಿ ನೀಡಿ ಪಾಸ್ ಪಡೆದರು. ಇಲ್ಲಿಗೆ ಬಂದಿದ್ದ ಮಧ್ಯಪ್ರದೇಶದ ಕಾರ್ವಿುಕರ ಸ್ಥಿತಿಯೂ ಇದಕ್ಕೆ ಭಿನ್ನವಾಗಿಲ್ಲ. ಕೈಯಲ್ಲಿ ಕಾಸಿಲ್ಲ. ಹೊಟ್ಟೆ ಹಸಿವು ನೀಗಿಸಿಕೊಳ್ಳುವುದಕ್ಕೂ ದಾರಿ ಇಲ್ಲದೆ ಮಹಿಳಾ ಪೊಲೀಸ್ ಠಾಣೆ ಎದುರು ಮಧ್ಯಪ್ರದೇಶದ 9 ಜನರ ಕುಟುಂಬವೊಂದು ಆಕಳಿಸುತ್ತಾ, ತೂಕಡಿಸುತ್ತಾ ಚಿಂತಿಸುತ್ತಿತ್ತು.