More

    ಪರಿಸರದಲ್ಲಿ ಮೈತಳೆದ ಪುರಾತನ ದೇಗುಲ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ: ತಾಲೂಕಿನ ಚಿಕ್ಕಮಧುರೆಯ ಹೊರವಲಯದಲ್ಲಿ ಕೆರೆ ತಟದ ಸುಂದರ ಪ್ರಾಕೃತಿಕ ಪರಿಸರದ ಮಧ್ಯೆ 9ನೇ ಶತಮಾನದ ಶ್ರೀ ಮಲ್ಲೇಶ್ವರಸ್ವಾಮಿ, ಗಣಪತಿ ಮತ್ತು ಆಂಜನೇಯಸ್ವಾಮಿ ದೇವಾಲಯಗಳಿವೆ.

    ಪುರಾತನ ಕಾಲದ ಮಲ್ಲೇಶ್ವರಸ್ವಾಮಿ ದೇವಾಲಯದ ಮೂಲಸ್ಥಳ ಮತ್ತು ಈಶ್ವರನ ಮೂಲ ವಿಗ್ರಹವನ್ನು ನಿಧಿಗಳ್ಳರು ವಿರೂಪಗೊಳಿಸಿದ್ದಾರೆ. ಕಲ್ಲುಗಳಲ್ಲಿ ಕೆತ್ತನೆ ಮಾಡಿದ್ದ ದೇವಾನು ದೇವತೆಗಳ ವಿಗ್ರಹಗಳನ್ನು ಕೂಡ ಧ್ವಂಸ ಮಾಡಲಾಗಿದೆ.

    ವಿರೂಪವಾದ ದೇವತೆಗಳ, ಈಶ್ವರನ ಮೂಲ ವಿಗ್ರಹವನ್ನು ಇತ್ತೀಚೆಗೆ ನೂತನವಾಗಿ ಪ್ರತಿಷ್ಠಾಪನೆ ಮಾಡಿಕೊಂಡು ಚಿಕ್ಕಮಧುರೆ ಸೇರಿ ಹಿರೇಮಧುರೆ, ಪಲ್ಲವಗೆರೆ, ಉಪ್ಪಾರಹಟ್ಟಿ, ಚಿಗನತಹಳ್ಳಿ, ಸೊಂಡೇಕೆರೆ ಗ್ರಾಮದ ಭಕ್ತರು ಪೂಜೆ ನೆರವೇರಿಸುತ್ತಿದ್ದಾರೆ.

    ಹಿನ್ನೆಲೆ: ಮಲ್ಲೇಶ್ವರ ದೇಗುಲ ಮುಂಭಾಗದ ಕಲ್ಲಿನ ಕಂಬಗಳಲ್ಲಿ ಕೆತ್ತನೆ ಮಾಡಲಾದ ಶಾಸನಗಳ ಪ್ರಕಾರ 9ನೇ ಶತಮಾನದ ದೇವಾಲಯ ಇದಾಗಿದೆ. ಕನ್ನಡ ನಾಡನ್ನು ವೈಭವದಿಂದ ಆಳಿದ ರಾಷ್ಟ್ರಕೂಟರ 2ನೇ ಗೋವಿಂದನ ಆಳ್ವಿಕೆಯ ಶಾಸನಗಳನ್ನು ಇಲ್ಲಿ ಕಾಣಬಹುದಾಗಿದೆ.

    ನೊಳಂಬರ ರಾಜ ಪೃಥ್ವಿವಲ್ಲಭ ಪರಮೇಶ್ವರ ಪಲ್ಲವಾದಿ ರಾಜನ ಪತಿ ಗವಗಣಬ್ಬೆ ಎಂಬ ರಾಣಿಯು ಮದರಿ ಕಲ್ಲನ್ನು (ಚಿಕ್ಕ ಮತ್ತು ಹಿರೇಮಧುರೆ) ರಾಜಧಾನಿಯನ್ನಾಗಿ ಮಾಡಿಕೊಂಡು ಈ ಪ್ರಾಂತ್ಯವನ್ನು ಆಡಳಿತ ಮಾಡಿದ ಕಾಲಾವಧಿಯಲ್ಲಿ ಈಶ್ವರನ ದೇವಾಲಯ ಕಟ್ಟಿಸಿ ಗವಗಣೇಶ್ವರ ಎಂದು ನಾಮಕರಣ ಮಾಡಿದ ಹಿನ್ನೆಲೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

    ಪೂಜಾ ಕಾರ್ಯಕ್ರಮಗಳು: ವಾರ್ಷಿಕವಾಗಿ ದೇವಾಲಯದಲ್ಲಿ ಕನಿಷ್ಟ 25 ಮದುವೆ ಕಾರ್ಯ ನಡೆಯುತ್ತವೆ. ಕಡೇ ಶ್ರಾವಣದಲ್ಲಿ ವಿಶೇಷವಾಗಿ ಕಾರ್ತಿಕೋತ್ಸವ ಆಚರಿಸಲಾಗುತ್ತದೆ. ಚಿಕ್ಕಮಧುರೆ, ಉಪ್ಪಾರಹಟ್ಟಿ, ದೊಡ್ಡಕೆರೆ, ಜೋಡಿಪುರ, ಹಿರೇಮಧುರೆ ಸೇರಿ ವಿವಿಧ ಗ್ರಾಮಗಳ 3 ಸಾವಿರಕ್ಕೂ ಅಧಿಕ ಭಕ್ತರು ಸೇರುವ ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಹರಕೆ ಸಲ್ಲಿಸುವ ಜತೆಗೆ ಅನ್ನಸಂತರ್ಪಣೆ ಕೂಡ ನೆರವೇರುತ್ತದೆ.

    ಬೇಕಿದೆ ರಕ್ಷಣೆ: ಕೆರೆ ದಡದ ಪುರಾತನ ಕಾಲದ ದೇವಾಲಯಗಳಿಗೆ ನಿಧಿಗಳ್ಳರಿಂದ ರಕ್ಷಣೆ ಬೇಕಿದೆ. ವಿರೂಪಗೊಂಡ ಶಿವಲಿಂಗ, ನಂದೀಶ ಇತರೆ ವಿಗ್ರಹಗಳನ್ನು ನವೀಕರಿಸಿ ಮರು ಪ್ರತಿಷ್ಠಾಪಿಸಲಾಗಿದ್ದು, ಇವುಗಳಿಗೆ ರಕ್ಷಣೆ ಬೇಕಿದೆ ಎಂಬುದು ಗ್ರಾಮಸ್ಥರ ಮನವಿ.

    ಹಿಂದಿನ ಕಾಲದ ಮಹನೀಯರು ಶಿವಲಿಂಗ ಪ್ರತಿಷ್ಠಾಪಿಸಿ ಪೂಜೆ ಮಾಡಿದ ಈ ಸ್ಥಳಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ಧಾರ್ಮಿಕ ಪ್ರತೀತಿ ಕಾಪಾಡಿಕೊಳ್ಳಬೇಕಿದೆ. ನಿಧಿಗಳ್ಳರ ಉಪಟಳ ತಡೆಗೆ ಪುರಾತತ್ವ ಇಲಾಖೆ ಮತ್ತು ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು.
    ಮೈರಾಡ ಚಂದ್ರಣ್ಣ ಅರ್ಚಕ

    ದೇವಾಲಯಗಳ ಸುತ್ತಲೂ ಸುಸಜ್ಜಿತ ಕಾಂಪೌಂಡ್ ಆಗಬೇಕು. ಬರುವ ಭಕ್ತರಿಗೆ ವಸತಿ ಗೃಹ ಮತ್ತು ಭವನ ನಿರ್ಮಾಣಕ್ಕೆ ಅವಕಾಶ ಆಗಬೇಕು.
    ಜವಳಿ ಮಲ್ಲೇಶಪ್ಪ ಚಿಕ್ಕಮಧುರೆ ಗ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts