More

    ಚಿಕ್ಕಬಳ್ಳಾಪುರಕ್ಕೆ 15ರ ಸಂಭ್ರಮ ; ಈಡೇರಲಿ ಅಭಿವೃದ್ಧಿಯ ಅಭಯ 

    ಚಿಕ್ಕಬಳ್ಳಾಪುರ: ಕೋಲಾರದಿಂದ ಪ್ರತ್ಯೇಕಗೊಂಡು ಚಿಕ್ಕಬಳ್ಳಾಪುರ ಜಿಲ್ಲೆ ರಚನೆಯಾಗಿ ಇಂದಿಗೆ (ಆ.23ಕ್ಕೆ) 14 ವರ್ಷಗಳು ಪೂರ್ಣಗೊಂಡು 15ರ ಹರಯಕ್ಕೆ ಜಿಲ್ಲೆ ಪದಾರ್ಪಣೆ ಮಾಡುತ್ತಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಾಗಿರುವ ಅಭಿವೃದ್ಧಿ, ಜನರಿಗೆ ಸಿಕ್ಕ ಭರವಸೆಗಳಲ್ಲಿ ಈಡೇರಿರುವುದೆಷ್ಟು? ಆಗಬೇಕಾಗಿರುವ ಕೆಲಸಗಳೇನು? ಉಪನಗರದ ಆಶಾಗೋಪುರ ಬರೀ ಗಾಳಿಗೋಪುರವಾಗಲಿದೆಯೇ? ಹೀಗೆ ಹಲವು ನಿರೀಕ್ಷೆಗಳಲ್ಲಿ ಬಯಲುಸೀಮೆ ಕಂಡಿರುವ ಅಭಿವೃದ್ಧಿ ಚಿತ್ರಣ ಇಲ್ಲಿದೆ…

    ಸರ್ ಎಂ.ವಿ.ಜಿಲ್ಲಾ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳು ನಡೆಸಿದ ಹಲವು ಹೋರಾಟಗಳ ಫಲವಾಗಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿದ್ದ ಚಿಕ್ಕಬಳ್ಳಾಪುರವನ್ನು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2007ರಲ್ಲಿ ಪ್ರತ್ಯೇಕ ಜಿಲ್ಲೆಯನ್ನಾಗಿಸಿದರು. ಸರ್ಕಾರಿ ಕಚೇರಿ ಕೆಲಸ ಸೇರಿ ಆಡಳಿತ ಇತರ ಸೇವೆಗೆ ಈ ಭಾಗದ ಜನರು ದೂರದ ಕೋಲಾರಕ್ಕೆ ಹೋಗುವುದನ್ನು ತಪ್ಪಿಸಿದರು. ಮತ್ತೊಂದೆಡೆ ಪ್ರತ್ಯೇಕ ಜಿಲ್ಲಾಡಳಿತ, ಜಿಪಂ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ರಚನೆ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೈಟೆಕ್ ಕಟ್ಟಡಗಳ ನಿರ್ಮಾಣ ಪ್ರತ್ಯೇಕ ಜಿಲ್ಲೆಯ ಸ್ವರೂಪವನ್ನು ಹೆಚ್ಚಿಸಿದೆಯಾದರೂ ಬರಪೀಡಿತ ಜಿಲ್ಲೆಯು ನೀರಾವರಿ ಸೇರಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ.

    ನೀರಾವರಿ ಸೌಲಭ್ಯ ಅಗತ್ಯತೆ : ಜಿಲ್ಲೆಯು ಆಗಾಗ ಬರಕ್ಕೆ ನಲಗುತ್ತಿದ್ದು ಈ ಭಾಗಕ್ಕೆ ನೀರಾವರಿ ಸೌಲಭ್ಯ ಒದಗಿಸಬೇಕೆಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಸ್ಪಂದಿಸಿದ ಸರ್ಕಾರ ಎತ್ತಿನಹೊಳೆ ಯೋಜನೆ ಮತ್ತು ಎಚ್.ಎನ್.ವ್ಯಾಲಿ ಯೋಜನೆಗೆ ಚಾಲನೆ ನೀಡಿದೆ. ಆದರೆ, ಈಗ ಕೇವಲ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಮಾತ್ರ ಕೆರೆಗಳಿಗೆ ಹರಿಸಲಾಗುತ್ತಿದ್ದು ಶಾಶ್ವತ, ಸಮಗ್ರ ನೀರಾವರಿ ಯೋಜನೆ ಅನುಷ್ಠಾನದ ಅಗತ್ಯವಿದೆ. ಇದರ ಜತೆಗೆ ಪರಮಶಿವಯ್ಯ ವರದಿ ಜಾರಿ, ವೃಷಭಾವತಿ ಯೋಜನೆ, ಆಂಧ್ರದ ಕೃಷ್ಣ ನದಿಯ ನೀರಿನ ಹಂಚಿಕೆ ಸೇರಿ ಹಲವು ಭರವಸೆಗಳು ಸಾಕಾರಗೊಳ್ಳಬೇಕಿದೆ.

    ಅಭಿವೃದ್ಧಿಯ ಕನಸು, ನನಸು ನಿಧಾನ: ರಾಜಧಾನಿ ಬೆಂಗಳೂರು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಜಿಲ್ಲೆಯನ್ನು ಬೃಹತ್ ಕೈಗಾರಿಕಾ ಹಬ್ ಆಗಿ ಅಭಿವೃದ್ಧಿಪಡಿಸುವುದರ ಜತೆಗೆ ಆರೋಗ್ಯ, ಶೈಕ್ಷಣಿಕ, ಕ್ರೀಡೆ ಮತ್ತು ಸಾಂಸ್ಕೃತಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ಕಸನು ಬಿತ್ತಲಾಗಿದೆಯಾದರೂ ಪ್ರಗತಿ ಮಾತ್ರ ನಿಧಾನಗತಿಯಲ್ಲಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲಕರವಾದ ವಾತಾವರಣವಿದೆ. ಟೆಕ್ಸ್‌ಟೈಲ್ಸ್ ಪಾರ್ಕ್ ನಿರ್ಮಾಣದ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ.

    ಪ್ರವಾಸಿತಾಣಗಳಿಗೆ ಬೇಕಿದೆ ಮೂಲಸೌಲಭ್ಯ: ಬೆಟ್ಟ-ಗುಡ್ಡಗಳು, ಪ್ರಾಕೃತಿಕ ರಮ್ಯ ತಾಣಗಳು ಜಿಲ್ಲೆಯಲ್ಲಿ ಕಡಿಮೆಯೇನೂ ಇಲ್ಲ, ಕರ್ನಾಟಕದ ಊಟಿ ಎಂದೇ ಖ್ಯಾತಿ ಹೊಂದಿರುವ ನಂದಿ ಗಿರಿಧಾಮ, ಶಿಲ್ಪಕಲೆ ನೈಪುಣ್ಯತೆ ಸಾಕ್ಷಿಯಾಗಿರುವ ಭೋಗನಂದೀಶ್ವರ ಮತ್ತು ಯೋಗ ನಂದೀಶ್ವರ, ರಂಗಸ್ಥಳ ದೇವಾಲಯ, ಪಾಳೇಗಾರ ಆಳ್ವಿಕೆಯ ಗುಮ್ಮನಾಯಕನಪಾಳ್ಯದ ಕೋಟೆ-ಕೊತ್ತಲು, ಗುಡಿಬಂಡೆಯ ಸುರಸದ್ಮಗಿರಿ, ತಲಕಾಯಲಬೆಟ್ಟ ಸೇರಿ ಪ್ರವಾಸಿ ಜಿಲ್ಲೆಯಲ್ಲಿವೆ, ಆದರೆ ತಾಣಗಳು ಮೂಲ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿವೆ. ನಂದಿ ಗಿರಿಧಾಮಕ್ಕೆ ರೋಪ್ ವೇ ಅಳವಡಿಕೆ ಬೇಡಿಕೆ ಇಂದಿಗೂ ಈಡೇರಿಲ್ಲ. ಗುಮ್ಮನಾಯಕನಪಾಳ್ಯದ ಕೋಟೆ ಕಾಲನ ಹೊಡೆತಕ್ಕೆ ಸಮಾಧಿಯಾಗುತ್ತಿವೆ. ಮೂಲಸೌಲಭ್ಯಗಳನ್ನು ಕಲ್ಪಿಸುವ ಜತೆಗೆ ಅಭಿವೃದ್ಧಿಗೆ ಬದ್ಧತೆ ತೋರಬೇಕಿದೆ.

    ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ: ಸತತ ಬರಗಾಲು, ಕೊಳವೆಬಾವಿಗಳ ವೈಲ್ಯ, ಅಂತರ್ಜಲಮಟ್ಟ ಕುಸಿತದ ಸವಾಲಿನ ನಡುವೆಯೂ ಜಿಲ್ಲೆ ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಹಣ್ಣುಗಳು, ಹೂವು ಬೆಂಗಳೂರು ಸೇರಿ ಹೊರ ರಾಜ್ಯಗಳಿಗೆ ಸಾಗಣೆಯಾಗುತ್ತಿದೆ. ಕೃಷಿ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಪ್ರೋತ್ಸಾಹದಾಯಕವಾಗಿ ಸ್ಥಳೀಯ ಉತ್ಪನ್ನಗಳಿಗೆ ಹೊಸ ತಂತ್ರಜ್ಞಾನ ಪರಿಚಯ, ಮಾರುಕಟ್ಟೆ ವ್ಯವಸ್ಥೆ ಸೇರಿ ವಿಶೇಷ ಆದ್ಯತೆ ನೀಡಬೇಕಾಗಿದೆ.

    ವಲಸೆ ತಪ್ಪಿಸಿ ಉದ್ಯೋಗ ಸೃಷ್ಟಿಸಿ: ನಂಜುಂಡಪ್ಪ ವರದಿ ಪ್ರಕಾರ ಚಿಕ್ಕಬಳ್ಳಾಪುರ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿದೆ, ಇಲ್ಲಿನ ಯುವಸಮುದಾಯ, ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರು, ಆಂಧ್ರ ಸೇರಿ ವಿವಿಧೆಡೆಗೆ ವಲಸೆ ಹೋಗುತ್ತಿದ್ದಾರೆ. ಅಂತರ್ಜಲಮಟ್ಟ ಕುಸಿತ ಮತ್ತು ನೀರಾವರಿ ಸಮಸ್ಯೆಯಿಂದಾಗಿ ಕೃಷಿ ಹಿನ್ನಡೆ ಕಾಣುತ್ತಿದೆ. ಜತೆಗೆ ಸ್ಥಳೀಯವಾಗಿ ಹೆಚ್ಚಿನ ಕೈಗಾರಿಕೆಗಳು ಹಾಗೂ ಕೃಷಿ ಸಂಬಂಧಿತ ವಹಿವಾಟಿಗೆ ಅಗತ್ಯ ಉತ್ತೇಜನ ನೀಡುವ ಮೂಲಕ ವಲಸೆ ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಸರ್ಕಾರ ಆಸಕ್ತಿ ತೋರಬೇಕಿದೆ.

    ಅಕ್ರಮಗಳಿಗೆ ಬೀಳದ ಕಡಿವಾಣ: ಕಳೆದ ಎಸ್ಸೆಸ್ಸೆಲ್ಸಿ ಲಿತಾಂಶದಲ್ಲಿ ರಾಜ್ಯದಲ್ಲೇ ಜಿಲ್ಲಾವಾರು ಪ್ರಥಮ ಸ್ಥಾನ ಪಡೆದ ಜಿಲ್ಲೆಯ ಶೈಕ್ಷಣಿಕವಾಗಿ ಮತ್ತಷ್ಟು ಸಾಧನೆ ತೋರಬೇಕಿದೆ. ಆದರೆ ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿ ಸರ್ಕಾರಿ ಸಂಸ್ಥೆಗಳಲ್ಲಿ ಪ್ರಗತಿಯ ನಿಧಾನವಾಗಿರುವುದು ಅಡ್ಡಿಯಾಗಿದೆ. ಜತೆಗೆ ಆಂಧ್ರದ ಗಡಿಯಲ್ಲಿರುವ ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಅಸ್ಪೃಶ್ಯತೆ, ಅಕ್ರಮ ಮರಳು ದಂಧೆ, ಕೆರೆ ಮತ್ತು ಕಾಲುವೆಗಳ ಅಕ್ರಮ ಒತ್ತುವರಿ, ಅರಣ್ಯ ನಾಶ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಪೂರ್ಣ ಯಶಸ್ಸನ್ನು ಸಾಧಿಸಬೇಕಿದೆ.

    ಜಿಲ್ಲೆಯ ಸಾಧನೆಯ ಗರಿಮೆ: 1. ಜಿಲ್ಲೆಯಲ್ಲಿ ಚೇಳೂರು, ಮಂಚೇನಹಳ್ಳಿ ಹೊಸ ತಾಲೂಕುಗಳ ರಚನೆ.
    2. ಗೌರಿಬಿದನೂರಿನ ಹೊಸೂರಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ಸ್ಥಾಪನೆ.
    3. ಹಲವು ಕೆರೆಗಳ ಒಡಲು ತುಂಬಿದ ಎಚ್.ಎನ್.ವ್ಯಾಲಿ ನೀರು. 4. ಸಕಾಲ ಯೋಜನೆ ಸಮರ್ಪಕ ಅನುಷ್ಠಾನ, ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರಕ್ಕೆ ರಾಜ್ಯದಲ್ಲಿ ಮೊದಲ ಸ್ಥಾನ. 5. ಚಿಂತಾಮಣಿ ತಾಲೂಕಿನ ಮುನಗನಹಳ್ಳಿ ಗ್ರಾಪಂಗೆ ರಾಷ್ಟ್ರೀಯ ಮಕ್ಕಳ ಸ್ನೇಹಿ ಪ್ರಶಸ್ತಿ. 6. ಆಸ್ಪತ್ರೆಗಳಲ್ಲಿ ಲಕ್ಷ್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಗೌರಿಬಿದನೂರು, ಚಿಂತಾಮಣಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಮಾಣೀಕರಣಕ್ಕೆ ಆಯ್ಕೆ. 7. 610 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರದ ಅರೂರು ಬಳಿ ವೈದ್ಯಕೀಯ ಕಾಲೇಜು ನಿರ್ಮಾಣ. 8. ಶಿಡ್ಲಘಟ್ಟದ ಅಮರಾವತಿ ಬಳಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಸ್ಥಾಪನೆ ಮತ್ತು 175 ಎಕರೆ ಜಮೀನು ಮಂಜೂರಾತಿ.

    ಜನರ ನಿರೀಕ್ಷೆ: 1.ಶಾಶ್ವತ ನೀರಾವರಿ ಸೌಲಭ್ಯ, 2. ಕೈಗಾರಿಕೆಗಳ ಸ್ಥಾಪನೆ ಮತ್ತು ಉದ್ಯೋಗ ಸೃಷ್ಟಿ,
    3. ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕ, 4.ದ್ರಾಕ್ಷಿ ಸಂಸ್ಕರಣಾ ಘಟಕ ಸ್ಥಾಪನೆ, 5.ಸ್ಥಳೀಯ ರೇಷ್ಮೆ ಉತ್ಪಾದನೆಗೆ ಪ್ರೋತ್ಸಾಹ, 6. ಮೂಲ ಸೌಕರ್ಯ ಸಮಸ್ಯೆಗಳ ಪರಿಹಾರ, 7. ಪ್ರವಾಸಿ ತಾಣಗಳ ಸಮರ್ಪಕ ಅಭಿವೃದ್ಧಿ, 8.ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ, 9. ಆಡಳಿತ ವ್ಯವಸ್ಥೆಯ ಸುಧಾರಣೆ, 10.ಕ್ರೀಡಾಂಗಣಗಳ ಅಭಿವೃದ್ಧಿ, ಪ್ರತಿಭಾವಂತ ಕ್ರೀಡಾಪಟುಗಳಿಗೆ ತರಬೇತಿ.

    ಪ್ರಧಾನಿ ನರೇಂದ್ರ ಮೋದಿ ಒಲಿಂಪಿಕ್ ಸೇರಿ ವಿವಿಧ ಕ್ರೀಡಾಕೂಟಗಳಲ್ಲಿ ಹೆಚ್ಚಿನ ಪದಕಗಳನ್ನು ಭಾರತ ಗೆಲ್ಲುವಂತಾಗಲು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಜಿಲ್ಲಾಮಟ್ಟದಲ್ಲೂ ಪ್ರತಿಭಾವಂತರನ್ನು ಬೆಳಕಿಗೆ ತರಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮುಂದಾಗಬೇಕು.
    ಮಂಚನಬಲೆ ಶ್ರೀನಿವಾಸ್, ಅಂತಾರಾಷ್ಟ್ರೀಯ ಕ್ರೀಡಾಪಟು, ಚಿಕ್ಕಬಳ್ಳಾಪುರ

    ಕಣ್ಣೊರೆಸುವ ನಾಟಕದ ಯೋಜನೆಗಳ ಘೋಷಣೆಗಳ ಬದಲಿಗೆ ಜಿಲ್ಲೆಗೆ ಸಮಗ್ರ ನೀರಾವರಿ ಯೋಜನೆಯನ್ನು ಒದಗಿಸಬೇಕು. ಈ ಮೂಲಕ ಜಿಲ್ಲೆಗೆ ಅಂಟಿರುವ ಬರಪೀಡಿತ ಹಣೆಪಟ್ಟಿ ಕಳಚಬೇಕು.
    ಆರ್.ಆಂಜನೇಯರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಚಿಕ್ಕಬಳ್ಳಾಪುರ

    ಹಲವು ಗಂಭೀರ ಸಮಸ್ಯೆಗಳ ನಡುವೆಯೂ ರೇಷ್ಮೆ ಮತ್ತು ಹಾಲು ಉತ್ಪಾದನೆ, ಹೂವು, ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ. ಇದಕ್ಕೆ ಸಮರ್ಪಕ ಪ್ರೋತ್ಸಾಹ ಸಿಕ್ಕಾಗ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗುತ್ತದೆ.
    ರವಿಕುಮಾರ್, ಹೋರಾಟಗಾರ, ಚಿಕ್ಕಬಳ್ಳಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts