More

    ಬೆಳೆ ಹಾನಿ ನಿಖರ ವರದಿ ಸಲ್ಲಿಕೆಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

    ಹಾವೇರಿ: ಅತಿವೃಷ್ಟಿಯಿಂದಾದ ಹಾನಿಯ ವರದಿ ಅತ್ಯಂತ ನಿಖರವಾಗಿರಬೇಕು. ಜಿಲ್ಲೆಯಲ್ಲಿ ಬೆಳೆ ಹಾನಿ ವರದಿ ಉತ್ಪ್ರೇಕ್ಷೆಯಿಂದ ಕೂಡಿದ್ದು, ಪುನರ್ ಪರಿಶೀಲನೆ ನಡೆಸಿ ವಾಸ್ತವಾಂಶಗಳ ಆಧಾರದ ಮೇಲೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.

    ಅತಿವೃಷ್ಟಿ ಬಾಧಿತ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಶನಿವಾರ ಸಂಜೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಮನೆ ಹಾನಿ, ಬೆಳೆ ಹಾನಿ, ಮೂಲ ಸೌಕರ್ಯಗಳ ಹಾನಿ, ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದರು.

    ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಎನಿಸುತ್ತದೆ. ಈ ಕುರಿತು ಪುನರ್ ಪರಿಶೀಲನೆ ನಡೆಸಿ ಹಾನಿಯ ಪ್ಲಾಟ್​ಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲಿಸಬೇಕು. ಮೂರ್ನಾಲ್ಕು ದಿನ ತಡವಾದರೂ ನಿಖರವಾದ ವರದಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ಮನೆ ಹಾನಿ ಸಂತ್ರಸ್ತರಿಗೆ ಕೂಡಲೆ ಪರಿಹಾರ ವಿತರಿಸಬೇಕು. ಹಾನಿಗೊಳಾದ ಅಂಗನವಾಡಿ, ಶಾಲೆ, ರಸ್ತೆ, ಸೇತುವೆ ಸೇರಿ ಮೂಲ ಸೌಕರ್ಯಗಳ ದುರಸ್ತಿಗೆ ಕ್ರಮವಹಿಸಿ ಶಾಶ್ವತ ಕಾಮಗಾರಿ ಅಂದಾಜು ವೆಚ್ಚದ ಪಟ್ಟಿ ತಯಾರಿಸಿ ಸರ್ಕಾರಕ್ಕೆ ಕಳುಹಿಸಿ. ವಿದ್ಯುತ್ ಟ್ರಾನ್ಸ್​ಫಾರ್ಮರ್ ಹಾಗೂ ಕಂಬಗಳ ಹಾನಿ ಕುರಿತು ಸರ್ವೆ ನಡೆಸಿ, ಪುನರ್ ಸ್ಥಾಪನೆಗೆ ಕ್ರಮವಹಿಸಬೇಕು. ವಿದ್ಯುತ್ ಕಡಿತದಿಂದ ಯಾವುದೇ ಹಳ್ಳಿಗಳು ತೊಂದರೆಗೊಳಗಾಗಬಾರದು. ಹೆಸ್ಕಾಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮವಹಿಸಬೇಕು ಎಂದರು.

    ತಗ್ಗು ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಬೇಕು. ವರದಾ, ಕುಮದ್ವತಿ ಸೇರಿದಂತೆ ನದಿಗಳ ಏರಿಳಿತದ ಬಗ್ಗೆ ಗಮನ ಹರಿಸಬೇಕು. ಅತಿವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಿರಿ. ಉತ್ತಮ ಗುಣಮಟ್ಟದ ಆಹಾರ ಜತೆಗೆ ಮೂಲ ಸೌಕರ್ಯಗಳನ್ನುಕಲ್ಪಿಸಿ ಎಂದರು.

    ಜಿಪಂ ಸಿಇಒ ಮಹ್ಮಮದ್ ರೋಷನ್ ಮಾತನಾಡಿ, 1,361 ಕಿಮೀ ಗ್ರಾಮೀಣ ರಸ್ತೆ, 971 ಪ್ರಾಥಮಿಕ ಶಾಲೆ, 38 ಅಂಗನವಾಡಿ ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲಾಗಿದೆ ಎಂದರು.

    ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ ಕೃಷಿ ಬೆಳೆ ಹಾನಿ ಮಾಹಿತಿ ನೀಡಿ, ಪ್ರಾಥಮಿಕ ಸರ್ವೆಯಲ್ಲಿ 9,372 ಹೆಕ್ಟೇರ್ ಹಾನಿ ನಮೂದಿಸಲಾಗಿತ್ತು. ಬೆಳೆಯಲ್ಲಿ ನೀರು ನಿಂತು ಫಸಲು ಹಳದಿ ರೂಪಕ್ಕೆ ತಿರುಗಿದ ಪರಿಣಾಮ ಹಾನಿ ಪ್ರಮಾಣ ಹೆಚ್ಚಾಗಿದೆ. 27 ಸಾವಿರ ಹೆಕ್ಟೇರ್ ಹಾನಿಯಾಗಿರುವ ವರದಿ ಸಲ್ಲಿಕೆಯಾಗಿದೆ. ಮರು ಸಮೀಕ್ಷೆ ಕೈಗೊಂಡು ನಿಖರ ವರದಿ ಸಲ್ಲಿಸಲಾಗುವುದು ಎಂದರು.

    ಎಸ್​ಪಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

    1,402 ಮನೆಗಳಿಗೆ ಹಾನಿ

    ಜಿಲ್ಲೆಯ ಅತಿವೃಷ್ಟಿ ಹಾನಿ ಕುರಿತು ಮುಖ್ಯಮಂತ್ರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ನದಿಯ ಪ್ರವಾಹ ಅಪಾಯ ಮಟ್ಟ ಮೀರಿಲ್ಲ. ಅಗತ್ಯಬಿದ್ದಲ್ಲಿ ಕಾಳಜಿ ಕೇಂದ್ರ ತೆರೆಯಲು ಕ್ರಮವಹಿಸಲಾಗಿದೆ. 1,402 ಮನೆಗಳಿಗೆ ಹಾನಿಯಾಗಿದ್ದು, ಇದರಲ್ಲಿ 26 ಮನೆಗಳು ಪೂರ್ಣ ಬಿದ್ದಿವೆ. 538 ಮನೆಗಳ ವಿವರವನ್ನು ಆರ್​ಜಿಎಸ್ ಪೋರ್ಟಲ್​ನಲ್ಲಿ ದಾಖಲಿಸಲಾಗಿದೆ. 3.89 ಕೋಟಿ ರೂ. ಪರಿಹಾರ ನೀಡಲಾಗಿದೆ. 9,372 ಹೆಕ್ಟೇರ್ ಕೃಷಿ ಬೆಳೆ, 724 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ಹಾನಿಯಾಗಿದೆ. ಆದರೆ, ಕೃಷಿ ಇಲಾಖೆಯವರು 27 ಸಾವಿರ ಹೆಕ್ಟೇರ್ ಹಾನಿಯಾಗಿರುವ ಕುರಿತು ಶನಿವಾರ ವರದಿ ನೀಡಿದ್ದಾರೆ. ಈ ವರದಿಯನ್ನು ಪುನರ್ ಪರಿಶೀಲನೆ ಮಾಡಲು ಕೃಷಿ ಇಲಾಖೆಗೆ ತಿಳಿಸಿರುವುದಾಗಿ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts