More

    1.15 ಲಕ್ಷ ರೂ. ಮೌಲ್ಯದ ಕೋಳಿ ಕಳ್ಳತನ; ಕಣ್ಣೀರು ಹಾಕುತ್ತಿರುವ ಅನ್ನದಾತ

    ರಾಣೆಬೆನ್ನೂರ: ಇಷ್ಟು ದಿನ ಕುರಿ, ಆಕಳು, ಮೇಕೆ ಕಳ್ಳತನ ಮಾಡುತ್ತಿದ್ದ ಖದೀಮರು ಇದೀಗ ಫಾರ್ಮ್ ಕೋಳಿಗಳನ್ನು ಕಳ್ಳತನಕ್ಕೆ ಮುಂದಾಗಿದ್ದು, ತಾಲೂಕಿನ ಕಮದೋಡ ಗ್ರಾಮದ ಬಳಿ ಫಾರ್ಮ್‌ನಲ್ಲಿ ಸಾಕಿದ್ದ 1.15 ಲಕ್ಷ ರೂ. ಮೌಲ್ಯದ 500 ಕೋಳಿಗಳನ್ನು ರಾತ್ರೋರಾತ್ರಿ ದೋಚಿದ ಘಟನೆ ಸಂಭವಿಸಿದೆ.
    ಗ್ರಾಮದ ಹನುಮಂತಪ್ಪ ಹರಿಹರ ಎಂಬುವರಿಗೆ ಸೇರಿದ ಕೋಳಿಗಳು ಕಳ್ಳನವಾಗಿರುವುದು.
    ಇವರು ಗ್ರಾಮದ ಹೊರವಲಯದ ತಮ್ಮ ಜಮೀನಿನಲ್ಲಿ ಕೋಳಿಫಾರ್ಮ್‌ನಲ್ಲಿ ರಾತ್ರಿ 10 ಗಂಟೆಯವರೆಗೆ ಇದ್ದು ಮಲಗುವ ಸಲುವಾಗಿ ವಾಪಸ್ ಮನೆಗೆ ಬಂದಿದ್ದರು. ಈ ಸಮಯದಲ್ಲಿ ಫಾರ್ಮ್‌ಗೆ ನುಗ್ಗಿದ ಖದೀಮರು 2 ಕೆ.ಜಿ. ತೂಕದ ಒಟ್ಟು 500 ಕೋಳಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಕಣ್ಣೀರು ಹಾಕುತ್ತಿರುವ ರೈತ…
    ರೈತ ಹನುಮಂತಪ್ಪ ಕೋಳಿಗಳನ್ನು ಸಾಕಾಣಿಕೆ ಮಾಡಿ ಅಕ್ಕಪಕ್ಕದ ಚಿಕನ್ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದ. 500 ಕೋಳಿಗಳನ್ನು ಸಾಕಾಣಿಕೆ ಮಾಡಿ 38 ದಿನ ಕಳೆದಿತ್ತು. ಇನ್ನೂ 4 ದಿನ ಕಳೆದಿದ್ದರೆ, ಕಾರ್ಖಾನೆಯವರು ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.
    ಅಷ್ಟರಲ್ಲಿಯೆ ಖದೀಮರು ಕೋಳಿಗಳನ್ನು ದೋಚಿದ್ದಾರೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಹನುಮಂತಪ್ಪ ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಪೊಲೀಸರು ಆದಷ್ಟು ಬೇಗ ಖದೀಮರನ್ನು ಪತ್ತೆ ಮಾಡಬೇಕು. ನಮಗೆ ಆಗಿರುವ ಸ್ಥಿತಿ ಬೇರೊಬ್ಬರಿಗೆ ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts