More

    ಹಳ್ಳಿಗಳಲ್ಲೂ ಮೊಳಗಿದ ರಾಮನಾಮ ಜಪ

    ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಬಳಿಕ ನಗರ ವ್ಯಾಪ್ತಿಯಲ್ಲೂ ಮಾತ್ರವಲ್ಲದೇ ಜಿಲ್ಲೆಯ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲೂ ರಾಮನಾಮ ಜಪ ಮೊಳಗಿತು.

    ಶ್ರೀ ಆಂಜನೇಯ, ರಾಮೇಶ್ವರ (ಈಶ್ವರ), ಸೀತಾರಾಮಾಂಜನೇಯ ದೇವಸ್ಥಾನಗಳಲ್ಲಿ ಬೆಳಗ್ಗೆ ಅಭಿಷೇಕ, ವಿಶೇಷ ಪೂಜೆ ಕೈಂಕಾರ್ಯಗಳನ್ನು ಕೈಗೊಂಡರು. ಮಹಿಳೆಯರಿಂದ ಭಜನೆ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರತಿಯೊಬ್ಬರು ಮನೆ ಮುಂದೆ ರಂಗೋಲಿ ಬಿಡಿಸಿ ತಳಿರು ತೋರಣಗಳನ್ನು ಕಟ್ಟಿ ಹಬ್ಬದ ಮಾದರಿಯಲ್ಲಿ ರಾಮೋತ್ಸವವನ್ನು ಆಚರಿಸಿದ್ದು ವಿಶೇಷವಾಗಿತ್ತು.
    ಜೈಲ್ ವೃತ್ತದಲ್ಲಿ ಎಂಎಲ್‌ಸಿ ಎಸ್.ರುದ್ರೇಗೌಡರ ಅಭಿಮಾನಿ ಬಳಗ, ರಸ್ತೆ ಬದಿ ವ್ಯಾಪಾರಿಗಳ ಸಂಘ ಹಾಗೂ ಗ್ಯಾರೇಜ್ ವಿಜಿ ಅಭಿಮಾನಿಗಳ ಸಂಘದ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಪಾನಕ ಮತ್ತು ಕೋಸಂಬರಿ ವಿತರಿಸಲಾಯಿತು. ಜಯನಗರದ ರಾಮಮಂದಿರದಲ್ಲಿ ರಾಜಬೀದಿ ಉತ್ಸವ ನಡೆಯಿತು. ಕೋಟೆ ಆಂಜನೇಯ ದೇವಸ್ಥಾನದಲ್ಲಿ ರಾಮ ತಾರಕ ಹೋಮ ಮತ್ತು ಪ್ರಸಾದ ವಿತರಣೆ, ರಾಮಣ್ಣ ಶ್ರೇಷ್ಠಿಪಾರ್ಕ್ ವೃತ್ತದಲ್ಲಿ ಭಾಹುಸಾರ ಕ್ಷತ್ರಿಯ ಸಂಘದಿಂದ ಅನ್ನಸಂತರ್ಪಣೆ ನಡೆಯಿತು. ಮೈಲಾರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ರಾಮ ಜಪ ನಡೆಯಿತು. ಲಕ್ಷ್ಮೀ ಚಲನಚಿತ್ರ ಮಂದಿರದ ಬಳಿ ರಾಮನಿಗಾಗಿ ಚೌಡೇಶ್ವರಿ ಗೆಳೆಯರ ಬಳಗದಿಂದ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

    ಮೂರ್ತಿ ಪ್ರತಿಷ್ಠಾಪನೆ ವೀಕ್ಷಣೆಗೆ ಅವಕಾಶ
    ಜಿಲ್ಲೆಯ ಎಲ್ಲ ಮುಜರಾಯಿ ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಶ್ರೀರಾಮನ ಪ್ರತಿಷ್ಠಾಪನೆಯನ್ನು ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರಮುಖವಾಗಿ ಶಿವಮೊಗ್ಗ ಬಿ.ಎಚ್.ರಸ್ತೆಯ ಮೈಲಾರೇಶ್ವರ ದೇವಸ್ಥಾನ, ಕೋಟೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಸ್ಥಾನ, ಉಷಾ ನರ್ಸಿಂಗ್ ಹೋಮ್ ಹೊರ ಭಾಗ, ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ದೊಡ್ಡ ಎಲ್‌ಇಡಿ ಸ್ಕ್ರೀನ್‌ಗಳನ್ನು ಅಳವಡಿಸಿದ್ದರಿಂದ ಸಾವಿರಾರು ಭಕ್ತರು ಮೂರ್ತಿ ಪ್ರತಿಷ್ಠಾಪನೆಯನ್ನು ನೇರವಾಗಿ ವೀಕ್ಷಿಸಿದರು.

    ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ
    ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಶಿವಮೊಗ್ಗದ ಕೋಟೆ ರಾಮ ಮಂದಿರ, ಬಿಬಿ ಸ್ಟ್ರೀಟ್ ನಲ್ಲಿರುವ ಜೈನ ಮಂದಿರ ಸೇರಿ ಹಲವು ದೇವಸ್ಥಾನಗಳಲ್ಲಿ ಭಕ್ತರು ಕಿಕ್ಕಿರಿದು ಅಯೋಧ್ಯಾ ರಾಮಮಂದಿರದ ಲೋಕಾರ್ಪಣೆಗೆ ಸಾಕ್ಷಿಯಾದರು. ರಾಮ ಜಪ, ರಾಮ ನಾಮ ಸ್ಮರಣೆ ಮಾಡಿದರು. ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಭಕ್ತರಿಗೆ ಪಾನಕ, ಬಾದಾಮಿ ಹಾಲು ಮತ್ತು ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಶ್ರೀರಾಮನ ಫ್ಲೆಕ್ಸ್, ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts