More

  ಶಿವಾನುಭವ ಆಲಿಕೆಯಿಂದ ಕತ್ತಲೆ ದೂರ

  ಚಿಂಚೋಳಿ: ಗುರುಗಳನ್ನು `ಸಿದ್ಧಗುರು, ಸಾಧಕ ಗುರು, ಸದ್ಗುರು’ ಎಂದು ಮೂರು ವಿಭಾಗದಲ್ಲಿ ಕಾಣಬಹುದಾಗಿದೆ. ಸದ್ಗುರುವಿನ ಜಾತ್ರೋತ್ಸವಕ್ಕೆ ಆಗಮಿಸಿ, ಶಿವಾನುಭವ ವಾಣಿ ಆಲಿಸಿದರೆ ಬದುಕಿನಲ್ಲಿನ ಕತ್ತಲು ದೂರವಾಗಿ ಬೆಳಕು ಕಾಣಲಿದೆ ಎಂದು ಹಾರಕೂಡ ಸಂಸ್ಥಾನ ಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹೇಳಿದರು.

  ಜಾತ್ರಾ ಮೈದಾನದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಹಾಗೂ ಚನ್ನಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ಚಚನ ನೀಡಿ, ಮಹಾತ್ಮರ ಆಶೀರ್ವಾದವಿದ್ದರೆ ಎಲ್ಲರೂ ಬಂಧುಗಳಾಗುತ್ತಾರೆ. ಚನ್ನಬಸವ ಶ್ರೀಗಳು ಸಾಖಷ್ಟು ಪವಾಡಗಳ ಮೂಲಕ ಅಸಂಖ್ಯಾತ ಭಕ್ತರನ್ನು ಉದ್ಧರಿಸಿದ್ದಾರೆ ಎಂದರು.

  ಬಡವರು, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತಿರುವವರನ್ನು ಗುರುತಿಸಿ ಚನ್ನಶ್ರೀ ಪುರಸ್ಕಾರ ನೀಡಿ ಆಶೀರ್ವದಿಸುವ ಕಾರ್ಯ ನಡೆಯುತ್ತಿದೆ. ಬೀದರ್ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ೧೨ ರೈತರು ಆತ್ಮಹತ್ಯೆಗೆ ಶರಣಾಗಿರುವು ನೋವು ತಂದಿದೆ. ಸಮಸ್ಯೆಗೆ ಆತ್ಮಹತ್ಯೆಯೇ ಪರಿಹಾರವಲ್ಲ, ಬದುಕಿದ್ದು ಎಲ್ಲವನ್ನು ಎದುರಿಸಬೇಕು. ನಿಮ್ಮನ್ನು ನಂಬಿಕೊಂಡು ಕುಟುಂಬವಿದೆ, ಅವರಿಗೆ ಅನ್ಯಾಯ ಮಾಡಬೇಡಿ. ಎದೆಗುಂದದೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಿ, ಶಿವಯೋಗಿಗಳ ಆಶೀರ್ವಾದದಿಂದ ಉತ್ತಮ ಮಳೆಯಾಗಲಿದೆ ಎಂದರು.

  ಮಲ್ಲಯ್ಯನಗಿರಿಯ ಶ್ರೀ ಬಸವಲಿಂಗ ಅವಧೂತ ಸಾನ್ನಿಧ್ಯ ವಹಿಸಿದ್ದರು.

  ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಡಾ.ಅವಿನಾಶ ಜಾಧವ್, ಪ್ರಮುಖರಾದ ಸುಭಾಷ ರಾಠೋಡ್, ಬಾಬು ಹೊನ್ನನಾಯಕ, ಎಚ್.ಕಾಶಿನಾಥರೆಡ್ಡಿ, ಡಾ.ವಿಕ್ರಮ ಪಾಟೀಲ್, ಗೌತಮ ಪಾಟೀಲ್, ಬಾಬುರಾವ ಪಾಟೀಲ್, ಅಜಿತ್‌ಕುಮಾರ ಪಾಟೀಲ್, ಸೋಮಲಿಂಗಮ್ಮ ದೇಶಮುಖ, ಗೀತಾ ಕಾಟಾಪುರ, ಕಲ್ಲಪ್ಪ ಹೊಗತಾಪುರೆ, ನಾಗರಾಜ ಕಲಬುರಗಿ, ಸುಭಾಷ ಸೀಳಿನ್, ವಿರೂಪಾಕ್ಷಪ್ಪ ಯಂಪಳ್ಳಿ, ಸಂತೋಷ ಗಡಂತಿ, ಮಲ್ಲಿಕಾರ್ಜುನ ಪಾಲಾಮೂರ, ಶಂಕರಗೌಡ ಅಲ್ಲಾಪುರ, ವಿರೇಶ ಯಂಪಳ್ಳಿ, ಸಂತೋಷ ಸೀಳಿನ್ ಇತರರಿದ್ದರು.
  ಶಿವಕುಮಾರ ದೇಶಮುಖ, ಡಾ.ಕಿಶನರಾವ ಕಾಟಾಪುರ ದಂಪತಿಯನ್ನು ವಿಶೇಷವಾಗಿ ಸತ್ಕರಿಸಲಾಯಿತು.

  ಮಹಾನ್ ಪವಾಡ ಪುರುಷ ಸದ್ಗುರು ಶ್ರೀ ಚನ್ನಬಸವ ಶಿವಯೋಗಿಗಳನ್ನು ನಾವೆಲ್ಲರೂ ಶ್ರೀ ಡಾ.ಚನ್ನವೀರ ಶಿಚಾಚಾರ್ಯರಲ್ಲಿ ಕಾಣುತ್ತಿದ್ದೇವೆ. ನಿಮ್ಮ ಕಷ್ಟ- ಕಾರ್ಪಣ್ಯಗಳೆಲ್ಲ ದೂರವಾಗಲಿ. ಗುರುಗಳು ಸುಖ, ಶಾಂತಿ, ಸಮೃದ್ಧಿ ಕರುಣಿಸಲಿ. ದುಶ್ಚಟಗಳನ್ನು ಮೈದಾನದಲ್ಲಿಯೇ ತ್ಯಜಿಸಿ, ಸುಜ್ಞಾನವನ್ನು ಮೈಗೂಡಿಸಿಕೊಂಡು ಉತ್ತಮ ಸಂಸ್ಕಾರದೊಂದಿಗೆ ಬದುಕಿ.
  | ಡಾ.ಬಸವಲಿಂಗ ಅವಧೂತ, ಮಲ್ಲಯ್ಯನಗಿರಿ

  ಸಾಧಕರಿಗೆ ಚನ್ನಶ್ರೀ ಗೌರವ: ವಿವಿಧ ಕ್ಷೇತ್ರದ ಸಾಧಕರಾದ ಭೀಮಳ್ಳಿಯ ಉದಯಕುಮಾರ ಶಾಸ್ತ್ರೀ, ಬೀದರ್‌ನ ಮಲ್ಲಿಕಾರ್ಜುನ ಸ್ವಾಮಿ, ಉಡಮನಳ್ಳಿಯ ಶಿವಕುಮಾರ ಸ್ವಾಮಿ, ಕಲಬುರಗಿಯ ಶಂಕರ ಕೋಡ್ಲಾ ಅವರಿಗೆ ಪ್ರಸಕ್ತ ಸಾಲಿನ ಚನ್ನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುರಸ್ಕಾರವೂ ೫ ಗ್ರಾಂ. ಬಂಗಾರ, ಪ್ರಶಸ್ತಿ ಫಲಕ ಹೊಂದಿದೆ.

  ಕುಸ್ತಿ ಪಂದ್ಯ, ಜಾನುವಾರು ಪ್ರದರ್ಶನ: ಚಿಂಚೋಳಿಯ ಜಾತ್ರಾ ಮೈದಾನದಲ್ಲಿ ಬುಧವಾರ ಬೆಳಗ್ಗೆ ನಡೆದ ಕುಸ್ತಿ ಪಂದ್ಯಾವಳಿ ಸಾಕಷ್ಟು ರೋಮಾಂಚನಗೊಳಿಸಿತು. ಬಲಾಡ್ಯ ದೇಹದ ಪೈಲ್ವಾನ್‌ಗಳು ಗೆಲುವಿಗಾಗಿ ಸಾಕಷ್ಟು ಕಸರತ್ತು ನಡೆಸಿದರು. ಮಣ್ಣಿನಲ್ಲಿ ಬಿದ್ದು, ಎದ್ದು ಪ್ರತಿ ಪೈಲ್ವಾನ್ ಭರ್ಜರಿ ಪ್ರದರ್ಶನ ನೀಡಿದರು. ಪ್ರವೀಣ ಮುದ್ದಡಗಾ ಪ್ರಥಮ ಸ್ಥಾನ ಪಡೆದರು. ೫ ತೊಲ ಬಂಗಾರ, ಬೆಳ್ಳಿ ಕಡೆ, ೫ ಸಾವಿರ ರೂ. ನಗದು ನೀಡಿ ಪ್ರೋತ್ಸಾಹಿಸಲಾಯಿತು. ಮಧ್ಯಾಹ್ನ ಜಾನುವಾರುಗಳ ಪ್ರದರ್ಶನ ಅಚ್ಚುಕಟ್ಟಾಗಿ ನಡೆಯಿತು. ತಾಲೂಕು ಮಾತ್ರವಲ್ಲದೆ, ವಿವಿಧೆಡೆಯಿಂದ ಸಾಕಷ್ಟು ರಾಸುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಬಸವರಾಜ ಸುಂಕದ ಅವರ ಜೋಡೆತ್ತುಗಳು ಪ್ರಥಮ, ಚಿಕ್ಕನಿಂಗದಳ್ಳಿಯ ರಾಜಶೇಖರ ಚವ್ಹಾಣ್ ಅವರ ಜೋಡೆತ್ತು ದ್ವಿತೀಯ ಸ್ಥಾನ ಪಡೆದವು. ಬಳಿಕ ಶ್ರೀಗಳು ರೈತರನ್ನು ಸನ್ಮಾನಿಸಿ, ಆಶೀರ್ವದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts