More

    ಚನ್ನಪಟ್ಟಣದಲ್ಲೇ ಆಟಿಕೆ ಕ್ಲಸ್ಟರ್ ನಿರ್ಮಿಸಲು ಒತ್ತಾಯ

    ಚನ್ನಪಟ್ಟಣ: ನಮ್ಮ ನೆಲದ ಬೊಂಬೆಗಳು ವಿಶ್ವಪ್ರಸಿದ್ಧಿ ಪಡೆದಿವೆ. ಬೊಂಬೆನಗರಿ, ಬೊಂಬೆಗಳ ನಾಡು ಎಂದೆಲ್ಲ ಖ್ಯಾತಿ ಪಡೆದಿರುವ ಚನ್ನಪಟ್ಟಣ ತಾಲೂಕಿನಲ್ಲೇ ಬೊಂಬೆ ಉದ್ಯಮದ ಆಟಿಕೆ ಕ್ಲಸ್ಟರ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಕೆಂಗಲ್ ಅಂಜನೇಯ ಅರಗು ಬಣ್ಣದ ಕರಕುಶಲ ಕರ್ಮಿಗಳ ಟ್ರಸ್ಟ್‌ನ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

    ನಗರದ ಮಹದೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್‌ನ ಪದಾಧಿಕಾರಿಗಳು, ಇಲ್ಲಿನ ಆಟಿಕೆ ಬೊಂಬೆಗಳು ವಿಶ್ವದ ಗಮನಸೆಳೆದಿವೆ. ಖುದ್ದು ದೇಶದ ಪ್ರಧಾನ ಮಂತ್ರಿಗಳೇ ನಮ್ಮ ಬೊಂಬೆಗಳನ್ನು ಹಾಡಿ ಹೊಗಳಿದ್ದಾರೆ. ಚನ್ನಪಟ್ಟಣ ತಾಲೂಕಿನಲ್ಲಿ ಆಟಿಕೆ ಕ್ಲಸ್ಟರ್ ಸ್ಥಾಪಿಸುವುದನ್ನು ಬಿಟ್ಟು, ಕೊಪ್ಪಳದಲ್ಲಿ ಯೋಜನೆ ರೂಪಿಸಿರುವುದು ಬೇಸರ ತಂದಿದೆ ಎಂದರು.

    ಬಹಳ ಹಿಂದಿನಿಂದಲೂ ಸಾಂಪ್ರದಾಯಿಕ ಕಲೆಯಾಗಿರುವ ಬೊಂಬೆ ಉದ್ಯಮವನ್ನೆ ನಂಬಿ ತಾಲೂಕಿನಲ್ಲಿ ಸಾವಿರಾರು ಕುಟುಂಬಗಳು ಜೀವಿಸುತ್ತಿವೆ. ಇಲ್ಲಿ ಆಟಿಕೆ ಕ್ಲಸ್ಟರ್ ಮಾಡಿದರೆ ಸಾಕಷ್ಟು ಅನುಕೂಲವಾಗಲಿದೆ. ಈ ಯೋಜನೆಗೆ ಬೇಕಾದ ವಿಫುಲ ಅವಕಾಶಗಳು ಇಲ್ಲಿದ್ದರೂ ಕೊಪ್ಪಳದಲ್ಲಿ ಕ್ಲಸ್ಟರ್ ನಿರ್ಮಿಸಲು ಸರ್ಕಾರ ಮುಂದಾಗಿರುವುದು ಏತಕ್ಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಸರ್ಕಾರ ಕೂಡಲೇ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು. ರಾಜಧಾನಿಗೆ ಹತ್ತಿರ ಸೇರಿ ಹಲವು ಅನುಕೂಲವಿರುವ ನಮ್ಮ ತಾಲೂಕಿನಲ್ಲಿ ಕ್ಲಸ್ಟರ್ ನಿರ್ಮಿಸಲು ಮನಸ್ಸು ಮಾಡಬೇಕು. ಈ ಮೂಲಕ ಸಾಂಪ್ರದಾಯಿಕ ಕಲೆಯನ್ನೆ ನಂಬಿ ಜೀವಿಸುತ್ತಿರುವ ತಾಲೂಕಿನ ಕರಕುಶಲಕರ್ಮಿಗಳ ಬದುಕು ಹಸನಾಗಲಿದೆ ಎಂದು ಮನವಿ ಮಾಡಿದರು.

    ಜನಪ್ರತಿನಿಧಿಗಳು ಒತ್ತಡ ಹೇರಲಿ: ಬೊಂಬೆನಗರಿಯಲ್ಲೇ ಆಟಿಕೆ ಕ್ಲಸ್ಟರ್ ನಿರ್ಮಾಣವಾಗಲು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕು. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಂಸದ ಡಿ.ಕೆ,ಸುರೇಶ್, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ಈ ಸಂಬಂಧ ಸರ್ಕಾರದ ಜತೆ ಮಾತುಕತೆ ನಡೆಸಬೇಕು ಎಂದು ಮನವಿ ಮಾಡಿದರು.

    ಈಗಾಗಲೇ ತಾಲೂಕಿನ ಬೊಂಬೆ ಉದ್ಯಮ ಸಂಕಷ್ಟಗಳ ಸರಮಾಲೆಗಳನ್ನು ಅನುಭವಿಸುತ್ತಿದೆ. ಬ್ಯಾಂಕ್ ಸಾಲ ಸೇರಿ ಯಾವ ಅನುಕೂಲಗಳು ದೊರಕುತ್ತಿಲ್ಲ. ಸರ್ಕಾರ ನಮ್ಮ ಉದ್ಯಮಕ್ಕೆ ಸಹಾಯಧನ ಘೋಷಿಸಬೇಕು. ಹೆದ್ದಾರಿ ಬದಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

    ಟ್ರಸ್ಟ್‌ನ ಅಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಕುಮಾರ್, ಉಪಾಧ್ಯಕ್ಷ ರಾಜು, ನಗರಸಭೆ ಮಾಜಿ ಸದಸ್ಯ ವೆಂಕಟೇಶ್ ಸೇರಿ ಹಲವು ಕುಶಲಕರ್ಮಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts