More

    ಮಕ್ಕಳಾಟದ ಗೊಂಬೆಗಳಾದ ಅಧಿಕಾರಿಗಳು ; ಚನ್ನಪಟ್ಟಣ ತಹಸೀಲ್ದಾರ್ ಮತ್ತೆ ವರ್ಗಾವಣೆ

    ರಾಮನಗರ: ರಾಜಕಾರಣಿಗಳಿಗೆ ಆಟ, ಅಧಿಕಾರಿಗಳಿಗೆ ಪ್ರಾಣ ಸಂಕಟ. ಇಂತಹ ಒಂದು ಮಾತು ಇದೀಗ ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ನಿಜವಾಗಿದೆ.

    ತಮ್ಮ ರಾಜಕೀಯ ಲಾಭಕ್ಕೆ ಕಾರ್ಯಾಂಗವನ್ನು ಮಾಜಿ ಸಿ.ಎಂ.ಎಚ್.ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ದುರ್ಬಳಕೆ ಮಾಡಿಕೊಂಡಿದ್ದು, ಇವರ ಜಂಗೀ ಕುಸ್ತಿಗೆ ಅಧಿಕಾರಿಗಳು ತತ್ತರಿಸಿ ಹೋಗಿದ್ದಾರೆ. ಕಳೆದ 15 ದಿನಗಳಲ್ಲಿ ಇಬ್ಬರು ತಹಸೀಲ್ದಾರ್‌ಗಳು ಎರಡೆರಡು ಬಾರಿ ವರ್ಗಾವಣೆಗೊಳ್ಳುವ ಮೂಲಕ ರಾಜಕಾರಣಿಗಳು ಅಧಿಕಾರಿಗಳನ್ನು ಮಕ್ಕಳಾಟದ ಬೊಂಬೆಗಳಂತೆ ಬಳಕೆ ಮಾಡಿಕೊಂಡಿದ್ದಾರೆ.

    ಮತ್ತೆ ವರ್ಗಾವಣೆ: ಚನ್ನಪಟ್ಟಣ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್. ನಾಗೇಶ್ ಅವರನ್ನು ಶುಕ್ರವಾರ ಸಂಜೆ ಎರಡನೇ ಬಾರಿಗೆ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ತೆರವಾದ ಸ್ಥಾನಕ್ಕೆ ಈ ಹಿಂದೆ ಚನ್ನಪಟ್ಟಣದಲ್ಲಿ ಕರ್ತವ್ಯ ನಿರ್ವಹಿಸಿ ಹೆಸರು ಮಾಡಿದ್ದ ಬಿ.ಕೆ.ಸುದರ್ಶನ್ ಅವರನ್ನು ನಿಯೋಜಿಸಿತ್ತು. ತಕ್ಷಣವೇ ಸುದರ್ಶನ್ ಅಧಿಕಾರ ಸ್ವೀಕರಿಸಿ ಕರ್ತವ್ಯ ನಿರ್ವಹಿಸಲು ಆರಂಭಿಸಿದ್ದರು. ಇದರ ನಡುವೆ ಮತ್ತೆ ಶನಿವಾರ ಸಂಜೆ ರಾಜ್ಯ ಸರ್ಕಾರದಿಂದ ಹೊಸ ಆದೇಶ ಬಂದಿದ್ದು, ಸುದರ್ಶನ್ ಅವರನ್ನು ಹಿಂದೆ ಇದ್ದ ಹುದ್ದೆಗೆ ವರ್ಗಾವಣೆ ಮಾಡಿ, ಚನ್ನಪಟ್ಟಣ ತಹಸೀಲ್ದಾರ್ ಹುದ್ದೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಎಸ್‌ಎ್ಸಿಯಲ್ಲಿ ಗ್ರೇಡ್ 2 ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿ.ಪಿ. ಹರ್ಷವರ್ಧನ್ ಅವರನ್ನು ನಿಯೋಜಿಸಿದೆ.

    ರಾಜಕೀಯ: ಚನ್ನಪಟ್ಟಣ ತಹಸೀಲ್ದಾರ್ ವರ್ಗಾವಣೆ ವಿಚಾರದಲ್ಲಿ ಮೇಲ್ನೋಟಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ತಮಗೇನೂ ಗೊತ್ತೇ ಇಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಈ ಹೈಡ್ರಾಮಾ ಹಿಂದೆ ಈ ಇಬ್ಬರೂ ನಾಯಕರೇ ಸೂತ್ರಧಾರರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆಯೂ ತಹಸೀಲ್ದಾರ್ ನಾಗೇಶ್ ಅವರ ವರ್ಗಾವಣೆ ಆಗಿತ್ತು. ಆದರೆ ಸಂಜೆ ವೇಳೆಗೆ ಇದು ರದ್ದಾಗಿ ಬಿ.ಕೆ. ಸುದರ್ಶನ್ ಮರಳಿ ತಮ್ಮ ಸ್ಥಾನಕ್ಕೆ ತೆರಳುವಂತೆ ಆಗಿತ್ತು. ಇದರ ಹಿಂದೆ ಈ ಇಬ್ಬರೂ ನಾಯಕರ ಶೀತಲ ಸಮರ ಕಾರಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ.

    ಕಂದಾಯ ಸಚಿವರ ವಿರುದ್ಧ ಆಕ್ರೋಶ: ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಹೈಡ್ರಾಮಾಕ್ಕೆ ಕಂದಾಯ ಸಚಿವ ಆರ್. ಅಶೋಕ್ ಕಾರಣ ಎನ್ನುವ ಆಕ್ರೋಶ ವ್ಯಾಪಕವಾಗಿ ಕೇಳಿ ಬಂದಿದೆ. ಸುದರ್ಶನ್ ಅವರು ಮರಳಿ ಚನ್ನಪಟ್ಟಣಕ್ಕೆ ಬಂದ ಖುಷಿಯನ್ನು ಬಿಜೆಪಿ ಕಾರ್ಯಕರ್ತರು ತಮ್ಮದೇ ರೀತಿಯಲ್ಲಿ ಸಂಭ್ರಮಿಸಿದ್ದರು. ಅಲ್ಲದೆ, ಗುಂಪು ಗುಂಪಾಗಿ ಸುದರ್ಶನ್ ಅವರನ್ನು ಭೇಟಿ ಮಾಡಿ ಶುಭ ಕೋರುವ ಕೆಲಸ ಮಾಡಿದ್ದರು. ಆದರೆ ಶನಿವಾರ ಸಂಜೆ ವೇಳೆ ಬಂದ ಸುದ್ದಿ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಆರ್. ಅಶೋಕ್ ಜೆಡಿಎಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕಪಾಠ ಕಲಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

    ಕೆಎಟಿಗೆ ಹೋಗಬಹುದು: ಸುದರ್ಶನ್ ಅವರು ಚನ್ನಪಟ್ಟಣದಲ್ಲಿ ಅಧಿಕಾರ ಸ್ವೀಕಾರ ಮಾಡಿ ಎರಡು ದಿನ ಕೆಲಸ ಮಾಡಿರುವ ಕಾರಣ ಅವರು ತಮ್ಮ ದಿಢೀರ್ ವರ್ಗಾವಣೆ ಆದೇಶದ ವಿರುದ್ಧ ಕೆಎಟಿ ಮೊರೆ ಹೋಗುವ ಅವಕಾಶವೂ ಇದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಅವರು ಗಂಭೀರ ಚಿಂತನೆಯನ್ನು ಸಹ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರ ನಡುವೆ ಮತ್ತೆ ಎರಡು ಮೂರು ದಿನಗಳಲ್ಲಿ ಚನ್ನಪಟ್ಟಣ ರಾಜಕೀಯದಲ್ಲಿ ಸಾಕಷ್ಟು ಏರಿಳಿತಗಳು ಆಗಲಿವೆ ಎಂದು ಹೇಳಲಾಗುತ್ತಿದ್ದು, ಮುಂದೆನಾಗುವುದೋ ಕಾದು ನೋಡಬೇಕಿದೆ.

    ನಾನು ಸಿಎಂ ಆಗಿದ್ದ ಅವಧಿಯಲ್ಲಿ ಸುದರ್ಶನ್ ಅವರನ್ನು ಉತ್ತಮ ಕೆಲಸಗಾರ ಎಂದು ಚನ್ನಪಟ್ಟಣಕ್ಕೆ ಹಾಕಿಸಿಕೊಂಡಿದ್ದೆ. ಆಮೇಲೆ ಅವರೇನು ಎಂದು ಗೊತ್ತಾದ ಮೇಲೆ ವಾಪಸ್ ಕಳುಹಿಸಿದ್ದೆ. ಆಗಲೂ ಕೆಎಟಿ ಎಂದು ನಾಟಕವಾಡಿದರು. ಈಗ ಮತ್ತೆ ರಾಜಕೀಯ ಮಾಡಿಕೊಂಡು ಚನ್ನಪಟ್ಟಣಕ್ಕೆ ಬಂದಿದ್ದಾರೆ. ಪದೇಪದೆ ಚನ್ನಪಟ್ಟಣಕ್ಕೆ ಬರಲು ಕಾರಣವೇನು? ಚನ್ನಪಟ್ಟಣ ಶಾಸಕನಾಗಿ ನಾನು ಇನ್ನೂ ಬದುಕಿದ್ದೇನೆ. ಬಂದ ತಕ್ಷಣವೇ ಬಾಗಿಲು ಹಾಕಿಕೊಂಡು ಸಭೆ ಮಾಡುವ ಅಗತ್ಯವಾದರೂ ಆ ಅಧಿಕಾರಿಗೆ ಏನಿತ್ತು?
    ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ, ಚನ್ನಪಟ್ಟಣ ಶಾಸಕ

    ವರ್ಗಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಬಗ್ಗೆ ಹೆಚ್ಚಿಗೆ ಏನೂ ಹೇಳಲಾರೆ, ಆದರೆ ಪದೇಪದೆ ವರ್ಗಾವಣೆ ಆಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಗಮನಕ್ಕೂ ತರುತ್ತೇನೆ. ಅವರು ಗಮನ ಹರಿಸುತ್ತಾರೆ.
    ಸಿ.ಪಿ. ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ

    ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಅಧಿಕಾರಿಗಳ ವರ್ಗಾವಣೆ ಬಗ್ಗೆ ಏನೂ ಹೇಳಲಾರೆ. ಆದರೆ ಇದನ್ನು ಗಮನಿಸುತ್ತಿದ್ದೇನೆ. ಈ ನಾಟಕವನ್ನು ಕ್ಷೇತ್ರದ ಜನತೆ ಗಮನಿಸಬೇಕು ಮತ್ತು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
    ಡಿ.ಕೆ.ಸುರೇಶ್, ಸಂಸದ, ಬೆಂಗಳೂರು ಗ್ರಾಮಾಂತರ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts