More

    ಅವಧಿ ಮುಗಿದು 18 ತಿಂಗಳಾದರೂ ಚನ್ನಪಟ್ಟಣ ನಗರಸಭೆಗಿಲ್ಲ ಚುನಾವಣೆ

    ಚನ್ನಪಟ್ಟಣ: ನಗರಸಭೆ ಚುನಾವಣೆಗೆ ಮಹೂರ್ತ ನಿಗದಿಯಾಗದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಸಮಸ್ಯೆ ಉಂಟಾಗಿದೆ. ಈ ಮೂಲಕ ಜಿಲ್ಲೆಯ ಪ್ರತಿಷ್ಠಿತ ಸ್ಥಳೀಯ ಸಂಸ್ಥೆಯಲ್ಲಿ ಹೇಳೋರು.., ಕೇಳೋರು… ಇಲ್ಲದಂತಾಗಿದೆ.

    ನಗರಸಭೆಯ ಅಧಿಕಾರ ಅವಧಿ 2019ರ ಮಾರ್ಚ್​ನಲ್ಲಿ ಮುಕ್ತಾಯಗೊಂಡಿದ್ದು, ಮೀಸಲಾತಿ ಸಂಬಂಧ ತಡೆಯಾಜ್ಞೆ ಕೋರಿದ ಹಿನ್ನೆಲೆಯಲ್ಲಿ ಇನ್ನೂ ಚುನಾವಣೆ ನಿಗದಿಯಾಗಿಲ್ಲ. ಈಗಾಗಲೇ ಮಾಗಡಿ, ಕನಕಪುರದಲ್ಲಿ ಚುನಾವಣೆ ಮುಕ್ತಾಯವಾಗಿ ಅಧಿಕಾರದ ಗದ್ದುಗೆ ಹಿಡಿಯಲು ಕಸರತ್ತು ಆರಂಭವಾಗಿದೆ.

    ನಗರಸಭೆಯಲ್ಲಿ 32 ಸದಸ್ಯ ಬಲವಿದ್ದು, ವಿವಿಧ ಪಕ್ಷಗಳಿಂದ ಆಯ್ಕೆಯಾಗಿ ಬಂದ ಸದಸ್ಯರು ಹಲವು ರಾಜಕೀಯ ಮೇಲಾಟಗಳ ನಡುವೆ ಅಧಿಕಾರ ನಡೆಸುತ್ತಿದ್ದರು. ಆದರೆ, ಇದೀಗ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಇಲ್ಲದಂತಾಗಿದ್ದು, ಅಭಿವೃದ್ಧಿಯ ವೇಗ ಕಳೆದುಕೊಂಡಿದೆ.

    ಅಧಿಕಾರಿಗಳ ದರ್ಬಾರ್: ನಗರಸಭೆಗೆ ಸದಸ್ಯರಿಲ್ಲದಿರುವುದು ಇಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ದರ್ಬಾರ್​ಗೆ ಕಾರಣವಾಗಿದೆ. ಈ ಹಿಂದೆ ಕೆಲ ಸದಸ್ಯರು ನಗರಸಭೆಯ ಎಲ್ಲ ವಿಚಾರಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು. ಕಸ ಎತ್ತುವ ವಿಚಾರದಿಂದ ಹಿಡಿದು, ನಗರಸಭೆಯ ಅಭಿವೃದ್ಧಿ ವಿಚಾರದಲ್ಲೂ ನಿಲ್ಲುತ್ತಿದ್ದರು.

    ಕಸದ ಸಮಸ್ಯೆಗೂ ಇದೇ ಕಾರಣ: ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಉಲ್ಬಣಿಸಿದೆ. ಕಸದ ಸಮಸ್ಯೆ ಅಧಿಕಗೊಳ್ಳಲು ನಗರಸಭೆಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದೂ ಪ್ರಮುಖ ಕಾರಣ ಎನ್ನಬಹುದಾಗಿದೆ. ಈ ಹಿಂದೆಯೂ ಕಸ ವಿಲೇವಾರಿಗೆ ಸೂಕ್ತ ಜಾಗವಿಲ್ಲದಿದ್ದರೂ, ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರು ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ, ಕಸ ವಿಲೇವಾರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಿದ್ದರು. ಮಾಜಿಗಳಾದ ಮೇಲೆ ನಮಗ್ಯಾಕೆ ಎಂದು ಕೈಚೆಲ್ಲಿರುವುದು ಕಸದ ಸಮಸ್ಯೆ ಹೆಚ್ಚಲು ಕಾರಣವಾಗಿದೆ.

    ಒಟ್ಟಾರೆ ನಗರಸಭೆಗೆ ಪುರಪಿತೃಗಳ ಅವಶ್ಯಕತೆಯಿದ್ದು, ಆದಷ್ಟೂ ಬೇಗ ಚುನಾವಣೆ ನಡೆದು ನಗರಸಭೆಯ ಅಭಿವೃದ್ಧಿಯ ವೇಗ ಹೆಚ್ಚಾಗಲಿ ಎಂಬುದು ನಗರವಾಸಿಗಳ ಆಶಯವಾಗಿದೆ.

    ಸಂಸದರ ತಂತ್ರ ತಂದ ಅಡ್ಡಿ

    ಮೀಸಲಾತಿ ಹಾಗೂ ವಾರ್ಡ್ ವಿಂಗಡನೆ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣದಿಂದಾಗಿ ನಗರಸಭೆ ಚುನಾವಣೆಗೆ ಗ್ರಹಣ ಹಿಡಿಯಲು ಕಾರಣವಾಗಿದೆ. ಈ ಹಿಂದೆ ಕೈ-ತೆನೆ ಮೈತ್ರಿ ಸರ್ಕಾರವಿದ್ದಾಗ ಬಂದ ಸಂಸತ್ ಚುನಾವಣೆಯಲ್ಲಿ ಗೊಂದಲ ಉಂಟಾಗಬಾರದು ಎಂಬ ಕಾರಣಕ್ಕಾಗಿ ಸಂಸದರು ತಮ್ಮ ಬೆಂಬಲಿಗರ ಮೂಲಕ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾದರು. ಚುನಾವಣೆಯಾದರೆ, ಮೈತ್ರಿ ಪಕ್ಷದಲ್ಲಿ ಗೊಂದಲ ಮೂಡಿ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂಬ ಕಾರಣಕ್ಕಾಗಿ ಸಂಸದರು ಈ ಯೋಜನೆ ರೂಪಿಸಿದರು ಎಂಬುದು ಜಗಜ್ಜಾಹೀರು. ನಂತರ, ಕರೊನಾ ಸೇರಿ ಇತರ ಕಾರಣಗಳಿಂದ ಚುನಾವಣೆಗೆ ಮುಹೂರ್ತ ಕೂಡಿಬಂದಿಲ್ಲ.

    ಚುನಾಯಿತ ಪ್ರತಿನಿಧಿಗಳು ಇಲ್ಲ ಎಂದರೂ ಕೆಲಸ ಕಾರ್ಯಗಳು ಎಂದಿನಂತೆ ಸಾಗುತ್ತವೆ. ಆದರೆ, ಅವು ತೀವ್ರವಾಗಿ ಆಗಬೇಕು ಎಂದರೆ ಸದಸ್ಯರ ಅವಶ್ಯಕತೆಯಿದೆ. ಇಲ್ಲವಾದರೆ, ಸಿಬ್ಬಂದಿಗಳ ಆಟಾಟೋಪ ಹೆಚ್ಚಾಗಲಿದೆ. ಅಧಿಕಾರ ಅವಧಿ ಮುಗಿದು ಹಲವು ತಿಂಗಳಾದರೂ ನಗರಸಭೆಗೆ ಚುನಾವಣೆ ನಿಗದಿಯಾಗದ ಹಿನ್ನೆಲೆಯಲ್ಲಿ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಚುರುಕು ಮುಟ್ಟಿಸಿ ಕೆಲಸ ತೆಗೆಸಲು ಸದಸ್ಯರು ಅತಿಮುಖ್ಯ.

    | ಪಿ.ಮಧು ಪ್ರಭಾಕರ್ ನಗರಸಭೆ ಮಾಜಿ ಸದಸ

    ಯಾವುದೇ ಸ್ಥಳೀಯ ಸಂಸ್ಥೆಯಿರಲಿ ಅಧಿಕಾರಿಗಳ ಜತೆಗೆ, ಚುನಾಯಿತ ಸದಸ್ಯರೂ ಅತಿಮುಖ್ಯ. ನಗರಸಭೆಗೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ತೊಡಕಾಗಿದೆ. ಸ್ಥಳೀಯ ಸಂಸ್ಥೆಗಳ ಯಶಸ್ಸಿನಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದ್ದು, ನಗರಸಭೆಗೆ ಆದಷ್ಟೂ ಬೇಗ ಚುನಾವಣೆ ನಡೆದು, ಅಭಿವೃದ್ದಿ ವೇಗ ಹೆಚ್ಚಲಿ ಎಂಬುದು ನಗರದ ವಾಸಿಗಳ ಒತ್ತಾಸೆಯಾಗಿದೆ.

    | ಎಂ.ಕೆ.ನಿಂಗಪ್ಪ ವಕೀಲರು, ಚನ್ನಪಟ್ಟಣ

    ಅಭಿಲಾಷ್ ತಿಟ್ಟಮಾರನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts