More

    ಮಕ್ಕಳಿಗೆ ಪೋಕ್ಸೋ ಜಾಗೃತಿ ಅತ್ಯವಶ್ಯ

    ಚನ್ನಗಿರಿ: ಮಕ್ಕಳ ಮೇಲಿನ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಪೋಕ್ಸೋ ಕಾಯ್ದೆ ಕುರಿತು ಜಾಗೃತಿ ಮೂಡಿಸುವುದು ಇಂದಿನ ತುರ್ತು ಅಗತ್ಯ ಎಂದು ಜೆಎಂಎಫ್‌ಸಿ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶಮ ಶ್ರೀವತ್ಸ ತಿಳಿಸಿದರು.

    ಇಲ್ಲಿನ ರಾಮ ಮನೋಹರ ಲೋಹಿಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಶ್ರಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆ ಅರಿವು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಶನಿವಾರ ಮಾತನಾಡಿದರು.

    ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅತ್ಯಂತ ಹೀನ ಕೃತ್ಯವಾಗಿದೆ. ಅವರ ಜೀವನದಲ್ಲಿ ಮಾಸದಂತಹ ಗುರುತಾಗಿ ಉಳಿದು ಬಿಡುತ್ತದೆ ಇದನ್ನು ತಡೆಗಟ್ಟುವಂತಹ ಕೆಲಸ ಪ್ರತಿಯೊಬ್ಬರಿಂದ ಆಗಬೇಕಿದೆ ಎಂದರು.

    ಆಧುನಿಕ ಯುಗದಲ್ಲಿ ಯಾರೊಬ್ಬರೂ ಸುರಕ್ಷಿತರಲ್ಲ ಎನ್ನುವುದು ಸತ್ಯ. ಮನೆಯಿಂದ ಹೊರ ಹೋದವರು ಮತ್ತೆ ವಾಪಸ್ ಬರುತ್ತಾರೆ ಎನ್ನುವ ಭರವಸೆಯೇ ಇಲ್ಲದಂತಾಗಿದೆ. ಇತ್ತ ಮನೆಯಲ್ಲಿ ಇದ್ದವರು ಸುರಕ್ಷಿರಾಗಿದ್ದಾರೆ ಎಂದು ನಂಬಲು ಆಗುತ್ತಿಲ್ಲ. ಇನ್ನು ಮಕ್ಕಳ ಸ್ಥಿತಿ ಹೇಳಲು ಆಗದಂತೆ ಆಗಿದೆ ಎಂದು ವಿಷಾದಿಸಿದರು.

    ದೌರ್ಜನ್ಯಗಳಿಂದ ಮಕ್ಕಳನ್ನು ರಕ್ಷಿಸಲು 2012ರಲ್ಲಿ ಈ ಕಾಯ್ದೆ ಜಾರಿಗೆ ಬಂತು. ಈ ಕಾಯ್ದೆಯಡಿ ಪಾಲಕರು, ವೈದ್ಯರು, ಶಾಲಾ ಸಿಬ್ಬಂದಿ ದೂರು ಸಲ್ಲಿಸಬಹುದಾಗಿದೆ. ಪೋಕ್ಸೋ ಸಾಬೀತಾದರೆ 16ರಿಂದ 18 ವರ್ಷದ ಒಳಗೆ ಇರುವಂತವರಾಗಿದ್ದರೆ 10 ವರ್ಷ ಸೆರೆವಾಸ, ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. 16 ವರ್ಷದ ಒಳಗಿನವರಾಗಿದ್ದರೆ 20 ವರ್ಷ ಸೆರೆವಾಸ, ಜೀವನದ ಉಳಿದ ಅವಧಿಗೆ ಜೈಲು ಶಿಕ್ಷೆ ಮತ್ತು ದಂಡಕ್ಕೆ ವಿಸ್ತರಿಸಲಾಗುತ್ತದೆ ಎಂದರು.

    ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ. ರಾಜಪ್ಪ, ಕಾರ್ಯದರ್ಶಿ ಜಗದೀಶ್, ವಕೀಲರಾದ ಎಂ.ಎಸ್. ವಿಜಯಲಕ್ಷ್ಮೀ, ತಿಪ್ಪೇಸ್ವಾಮಿ, ಸದಾಶಿವಪ್ಪ, ಸಿಆರ್‌ಪಿ ಮಹೇಶ್ವರಪ್ಪ, ಶಿಕ್ಷಕಿ ಹೇಮಾವತಿ, ಕೃಷ್ಣಮೂರ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts