More

    ಹುಬ್ಬಳ್ಳಿ -ಧಾರವಾಡ ಪಾಲಿಕೆಯಲ್ಲಿ ಖಾತಾ ಬದಲಾವಣೆ ಕಿರಿಕಿರಿ

    ಸಂತೋಷ ವೈದ್ಯ ಹುಬ್ಬಳ್ಳಿ
    ಡಿಜಿಟಲ್ ಯುಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ವ್ಯವಸ್ಥೆ ರೂಪಿಸಬೇಕಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಸಾಫ್ಟ್‌ವೇರ್ ಬದಲಾವಣೆ ನೆಪದಲ್ಲಿ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

    ಅವಳಿ ನಗರದ ಸ್ಥಿರಾಸ್ತಿ ಖರೀದಿದಾರರು ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಕಳೆದ ಒಂದೂವರೆ ತಿಂಗಳಿಂದ ಪರದಾಡುತ್ತಿದ್ದಾರೆ.
    ನಿವೇಶನ ಮತ್ತು ಮನೆ ಖರೀದಿಗೆ ಸಂಬಂಧಿಸಿದಂತೆ ಖರೀದಿದಾರರು ಕ್ರಯಪತ್ರ (ಸೇಲ್ ಡೀಡ್) ಮಾಡಿಕೊಳ್ಳಬೇಕು. ಬಳಿಕ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿಯನ್ನು ನೋಂದಾಯಿಸಿಕೊಳ್ಳುತ್ತಾರೆ.

    ಈ ಆಸ್ತಿಗೆ ತೆರಿಗೆ ನಿರ್ಧರಣೆಯಾಗಬೇಕಾದರೆ ಖಾತಾ ಬದಲಾವಣೆಯಾಗಬೇಕು. ಅಂದರೆ, ಆಸ್ತಿ ತೆರಿಗೆ ಪಾವತಿಯು ಖರೀದಿ ಮಾಡಿದವರ ಹೊಣೆಗಾರಿಕೆಯಾಗಿರುತ್ತದೆ.
    ಪ್ರತಿ ಆಸ್ತಿಯ (ನಿವೇಶನ ಅಥವಾ ಮನೆ) ನಿಖರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಪಾಲಿಕೆಯು ಹೊಸ ಸಾಫ್ಟ್‌ವೇರ್ ಅಳವಡಿಸಿಕೊಂಡಿದೆ. ಆಸ್ತಿಯಲ್ಲಿನ ಖಾಲಿ ನಿವೇಶನ, ಕಟ್ಟಡದ ಅಳತೆ, ಹಿಂದಿನ ವರ್ಷದ ತೆರಿಗೆ ಪಾವತಿ ವಿವರಗಳು ಅಸೆಸ್‌ಮೆಂಟ್ ಉತಾರದಲ್ಲಿ ಬರಲಿದೆ.


    ಈ ಸಂಬಂಧ ಪಾಲಿಕೆ ಸಾಫ್ಟ್‌ವೇರ್ ಅಳವಡಿಸಿಕೊಂಡಿದೆ. ಆದರೆ, ಕಂದಾಯ ವಿಭಾಗದ ಅಧಿಕಾರಿ ಹಾಗೂ ಸಿಬ್ಬಂದಿಗೆ ಹೊಸ ಸಾಫ್ಟ್‌ವೇರ್ ಬಗ್ಗೆ ತರಬೇತಿ ನೀಡಿಲ್ಲ. ಧಾರವಾಡ ವಿಭಾಗದ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.

    ಹುಬ್ಬಳ್ಳಿಯಲ್ಲಿ ತರಬೇತಿ ನೀಡಿಲ್ಲ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತರಬೇತಿ ವಿಳಂಬವಾಗಿದ್ದು, ಸಾರ್ವಜನಿಕರು ಖಾತಾ ಬದಲಾವಣೆ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ.
    ಆಸ್ತಿಯ ಖರೀದಿದಾರರ ಹೆಸರಿಗೆ ಖಾತಾ ಬದಲಾವಣೆಯಾಗದಿದ್ದರೆ ಮನೆ ಕಟ್ಟಿಸಿಕೊಳ್ಳಲು (ಖಾಲಿ ನಿವೇಶನವಾಗಿದ್ದರೆ) ಅಥವಾ ಮನೆ ನವೀಕರಣ, ವಿಸ್ತರಣೆಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ.

    ಒಂದು ವೇಳೆ ಬ್ಯಾಂಕ್‌ಗಳಿಂದ ಹಣಕಾಸು ನೆರವು ಅಗತ್ಯವಿಲ್ಲವಾದ ಸಂದರ್ಭಗಳಲ್ಲೂ ಸಮಸ್ಯೆ ತಪ್ಪಿದ್ದಲ್ಲ. ಖಾತಾ ಬದಲಾವಣೆಯಾಗದೆ ಕಟ್ಟಡ ನಿರ್ಮಾಣ ಪರವಾನಗಿ ಪ್ರಮಾಣಪತ್ರ ಪಡೆಯಲು ಬರುವುದಿಲ್ಲ.


    ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಇ-ಆಸ್ತಿ ದಾಖಲೀಕರಣ ನಿಧಾನಗತಿಯಲ್ಲಿ ಸಾಗಿದೆ. ಇದೀಗ
    ಸಾಫ್ಟ್‌ವೇರ್ ಬದಲಾವಣೆಯ ನೆಪದಲ್ಲಿ ಖಾತಾ ಬದಲಾವಣೆ ಪ್ರಕ್ರಿಯೆಯು ಕುಂಠಿತಗೊಂಡಿದೆ. ಇದರಿಂದ ಉಪ ನೋಂದಣಾಧಿಕಾರಿ ಕಚೇರಿ ಹಾಗೂ ಹು-ಧಾ ಮಹಾನಗರ ಪಾಲಿಕೆಯು ಆದಾಯ ನಷ್ಟ ಅನುಭವಿಸುತ್ತಿದೆ.

    ಮುರ್ಡೇಶ್ವರ ಫ್ಯಾಕ್ಟರಿ ಮುಖ್ಯ ರಸ್ತೆ ಬಳಿ ಎಸ್‌ಎಸ್‌ಕೆ ಸಣ್ಣ ಉದ್ಯಮಿಗಳ ಸಂಘಕ್ಕೆ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ನಿವೇಶನ ಮಂಜೂರಾಗಿದೆ. ಆದರೆ, 3 ತಿಂಗಳಾದರೂ ನಿವೇಶನವು ಹುಡಾದಿಂದ ಸಂಘದ ಹೆಸರಿಗೆ ಖಾತಾ ಬದಲಾವಣೆಯಾಗಿಲ್ಲ. ಖಾತಾ ಬದಲಾವಣೆಯ ನೂರಾರು ಪ್ರಕರಣಗಳು ಹು-ಧಾ ಮಹಾನಗರ ಪಾಲಿಕೆಯ ವಲಯ ಕಚೇರಿಗಳಲ್ಲಿ ಬಾಕಿ ಉಳಿದಿವೆ.
    — ಸಂತೋಷ ಕಾಟವೆ, ಕಾರ್ಯದರ್ಶಿ, ಎಸ್‌ಎಸ್‌ಕೆ ಸಣ್ಣ ಉದ್ಯಮಿಗಳ ಸಂಘ, ಹುಬ್ಬಳ್ಳಿ

    ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಹೊಸ ಸಾಫ್ಟ್‌ವೇರ್ ಅಳವಡಿಸಲಾಗಿದೆ. ಈ ಸಂಬಂಧ ಧಾರವಾಡದ ಅಧಿಕಾರಿ-ಸಿಬ್ಬಂದಿಗೆ ತರಬೇತಿ ನೀಡಿದ್ದೇವೆ. ಹುಬ್ಬಳ್ಳಿಯವರಿಗೂ ತರಬೇತಿ ನೀಡಲಾಗುವುದು. ಈ ನಡುವೆ ಖಾತಾ ಬದಲಾವಣೆ ಪ್ರಕ್ರಿಯೆ ಸಂಪೂರ್ಣವಾಗಿ ನಿಂತಿಲ್ಲ. ಅಪಾರ್ಟ್‌ಮೆಂಟ್, ಬಹು ಮಹಡಿ ಕಟ್ಟಡಗಳ ಖಾತಾ ಬದಲಾವಣೆ ಸಮಸ್ಯೆಯಾಗಿದೆ.
    — ಡಾ. ಗೋಪಾಲಕೃಷ್ಣ ಬಿ., ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts