More

    ಚಂದ್ರಯಾನ-3: ಪ್ರಯಾಣ ಪೂರ್ಣಗೊಳಿಸಿ ಯಶಸ್ಸು ಸಾಧಿಸುವತ್ತ…

    ಚಂದಿರನನ್ನು ತಲುಪುವ ಭಾರತದ ಮೂರನೇ ಪ್ರಯತ್ನವಾದ ಚಂದ್ರಯಾನ-3 ಮಿಷನ್​ಗೆ ಈಗ ಚಾಲನೆ ದೊರೆತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಉಡಾವಣಾ ವಾಹನ ಜಿಎಸ್​ಎಲ್​ವಿ ಮಾರ್ಕ್ 3 (ಎಲ್​ಎಂವಿ 3) ಹೆವಿ-ಲಿಫ್ಟ್ ಮೂಲಕ ಬಾಹ್ಯಾಕಾಶ ನೌಕೆಯನ್ನು ಚಂದಿರನತ್ತ ಉಡಾಯಿಸಿದೆ.

    2019ರಲ್ಲಿ ಕೈಗೊಳ್ಳಲಾದ ಚಂದ್ರಯಾನ- 2 ಮಿಷನ್​ನ ಅನುಸರಣೆ ಹಾಗೂ ಪ್ರತಿರೂಪವೇ ಆಗಿದೆ ಚಂದ್ರಯಾನ-3. ಬಾಹ್ಯಾಕಾಶ ನೌಕೆಯು ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಚಂದ್ರಯಾನ-2ರ ಮಿಷನ್ ಭಾಗಶಃ ವೈಫಲ್ಯವನ್ನು ಅನುಭವಿಸಿತ್ತು. ಈ ವೈಫಲ್ಯದಿಂದ ಹೊರಬಂದು ಯಶಸ್ಸು ಸಾಧಿಸುವ ನಿಟ್ಟಿನಲ್ಲಿ ಇಸ್ರೋ ಮರುಯತ್ನಕ್ಕೆ ಮುಂದಾಗಿದೆ.

    ಚಂದ್ರಯಾನ-3 ನೌಕೆಯು ಚಂದ್ರನ ಮೇಲೆ ಇಳಿಯುವ ಪ್ರದೇಶವು ಬಹುತೇಕವಾಗಿ ಚಂದ್ರಯಾನ-2 ರೀತಿಯಲ್ಲಿಯೇ ಇದೆ. 70 ಡಿಗ್ರಿ ಅಕ್ಷಾಂಶದಲ್ಲಿ ಚಂದ್ರನ ದಕ್ಷಿಣ ಧ್ರುವದ ಬಳಿ ಲ್ಯಾಂಡರ್ ಅವರೋಹಣವಾಗಲಿದೆ. ಚಂದ್ರಯಾನ-3 ರ ಮಾರ್ಗ ಕೂಡ ಚಂದ್ರಯಾನ-2 ಅನ್ನು ಹೋಲುತ್ತದೆ. ಈ ಯಾನವು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಭೂಮಿ ಕಕ್ಷೆಯಿಂದ ಹೊರಹೋಗುವಿಕೆ, ಚಂದ್ರನ ಕಕ್ಷೆಗೆ ಬದಲಾವಣೆ ಮತ್ತು ಚಂದ್ರನ ಕಕ್ಷೆಯ ಪ್ರವೇಶ ಈ ಹಂತಗಳಾಗಿವೆ. ಭೂಮಿಯಿಂದ ದೂರವಾಗುತ್ತ ಹೋಗುವಾಗ ಐದು ಬಾರಿ ಭೂಮಿಯ ಕಕ್ಷೆಯನ್ನು ನೌಕೆಯು ಬದಲಾಯಿಸುತ್ತದೆ. ಚಂದ್ರನ ಬಳಿ ಹೋಗುವಾಗ ನಾಲ್ಕು ಬಾರಿ ಚಂದ್ರನ ಕಕ್ಷೆಯನ್ನು ಬದಲಾಯಿಸುತ್ತ ಅದನ್ನು ಸಮೀಪಿಸುತ್ತದೆ. ಈ ರೀತಿ ಚಂದ್ರನ ಮೇಲ್ಮೈಯಿಂದ 100 ಕಿ.ಮೀ. ಕಕ್ಷೆಗೆ ಸಾಗುತ್ತದೆ.

    ಪೊ›ಪಲ್ಷನ್ ಮಾಡ್ಯೂಲ್​ನಿಂದ (ಇಂಜಿನ್ ಹಾಗೂ ಇಂಧನವಿರುವ ಭಾಗ) ಲ್ಯಾಂಡರ್ ಬೇರ್ಪಟ್ಟು ಚಂದ್ರನ ಸಮೀಪವಿರುವ ಕಕ್ಷೆಯನ್ನು ಪ್ರವೇಶಿಸುತ್ತದೆ. ಈ ಮೂಲಕ ಚಂದ್ರನಿಗೆ 30 ಕಿಮೀ ಅಂತರಕ್ಕೆ ಸಮೀಪಿಸುತ್ತದೆ. ತದನಂತರ ಲ್ಯಾಂಡರ್ ಮೃದುವಾಗಿ ಲ್ಯಾಂಡಿಂಗ್ ಕಾರ್ಯವಿಧಾನಗಳನ್ನು ಪ್ರಾರಂಭಿಸುತ್ತದೆ. ಲ್ಯಾಂಡಿಂಗ್ ನಂತರ ಇದು ಒಂದು ಚಂದ್ರನ ದಿನ ಕಾರ್ಯನಿರ್ವಹಿಸುತ್ತದೆ. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮನಾಗಿರುತ್ತದೆ.

    ಮಾಡ್ಯೂಲ್ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಉಡಾವಣಾ ಸಮಯವು ಭೂಮಿಯ ಸುತ್ತ ಚಂದ್ರನ ಕಕ್ಷೆಯ ಸಮಯಕ್ಕೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಿಖರವಾದ ಲೆಕ್ಕಾಚಾರಗಳನ್ನು ಇಸ್ರೋ ಮಾಡಿ ಉಡಾವಣೆ ಕೈಗೊಂಡಿದೆ. ಚಂದ್ರನ ಮೇಲ್ಮೈ ಕುರಿತಂತೆ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುವುದಕ್ಕಾಗಿ ಅನೇಕ ಪ್ರಮುಖ ಪೇಲೋಡ್​ಗಳನ್ನು ಸಹ ಈ ನೌಕೆಯು ಹೊತ್ತೊಯ್ದಿದೆ. ನೌಕೆಯು ಲ್ಯಾಂಡರ್, ರೋವರ್ ಮತ್ತು ಪೊ›ಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದ್ದು, ಅಂದಾಜು 3,900 ಕಿಲೋ ಗ್ರಾಂಗಳಷ್ಟು ತೂಗುತ್ತದೆ.

    ಉದ್ದೇಶಗಳೇನು?

    • ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಪೂರ್ಣಗೊಳಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಸಾಮರ್ಥ್ಯವನ್ನು ಸಾಬೀತು ಪಡಿಸುವುದೇ ಚಂದ್ರಯಾನ-3 ರ ಪ್ರಾಥಮಿಕ ಉದ್ದೇಶವಾಗಿದೆ.
    • ಚಂದ್ರನ ಮೇಲೆ ರೋವರ್ ತಿರುಗುವುದನ್ನು ಪ್ರದರ್ಶಿಸುವುದು,
    • ಚಂದ್ರನ ಮೇಲ್ಮೈಯಲ್ಲಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು,
    • ಭೂಮಿಯಿಂದ ಪ್ರತಿಫಲಿಸುವ ಬೆಳಕಿನ ಧ್ರುವೀಕರಣದ ದತ್ತಾಂಶ ಸಂಗ್ರಹಿಸುವುದು,
    • ಚಂದ್ರನ ಮೇಲ್ಮೈ ಬಳಿ ಇರುವ ಅಯಾನುಗಳು ಮತ್ತು ಎಲೆಕ್ಟ್ರಾನ್​ಗಳ ಸಾಂದ್ರತೆ ಮತ್ತು ಕಾಲಾನಂತರದಲ್ಲಿ ಅದರ ಬದಲಾವಣೆಗಳನ್ನು ಅಳೆಯುವುದು,
    • ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈ ತಾಪಮಾನ ಅಳೆಯುವುದು,
    • ಚಂದ್ರನ ಹೊರಪದರ ಮತ್ತು ನಿಲುವಂಗಿಯ ರಚನೆಯನ್ನು ಅರಿಯುವುದು,
    • ನೌಕೆಯ ಅವರೋಹಣ ಪ್ರದೇಶದ ಸುತ್ತಲೂ ಚಂದ್ರನ ಕಂಪನಗಳಿಗಾಗಿ ಶೋಧ ಮಾಡುವುದು,
    • ಚಂದ್ರನ ಚಲನಶಕ್ತಿ ವ್ಯವಸ್ಥೆ ಅರ್ಥ ಮಾಡಿಕೊಳ್ಳುವುದು

    ಚಂದ್ರಯಾನ-3 ಉಡಾವಣೆ ಯಶಸ್ವಿಯಾಗಿ ನಡೆದಿದ್ದು, ಭಾರತಕ್ಕೆ ಅಭಿನಂದನೆಗಳು. ಇಸ್ರೋದ ಎಲ್ಲ ವಿಜ್ಞಾನಿಗಳು ಇದಕ್ಕಾಗಿ ತಪಸ್ಸು ಮಾಡಿದ್ದಾರೆ. ಅಂದುಕೊಂಡ ಸಮಯದಲ್ಲೇ ರಾಕೆಟ್ ಭೂಕಕ್ಷೆಯನ್ನು ದಾಟಿ, ಮುಂದಿನ ಯಾನಕ್ಕೆ ನೌಕೆಯನ್ನು ಸ್ಥಿತಿಗೊಳಿಸಿದೆ. ಮುಂದಿನ 40 ದಿನ ಪಯಣವು ಸುಗಮವಾಗಿ ಸಾಗಿ, ಲ್ಯಾಂಡರ್ ಮೃದುವಾಗಿ ಚಂದ್ರನ ಅಂಗಳದಲ್ಲಿ ಇಳಿಯಲಿ ಎಂಬುದು ನಾನೂ ಸೇರಿ ಎಲ್ಲ ದೇಶವಾಸಿಗಳ ಆಶಯ.

    | ಎಸ್. ಸೋಮನಾಥ್, ಇಸ್ರೋ ಅಧ್ಯಕ್ಷ

    ಭಾರತದ ಸಾಮರ್ಥ್ಯಕ್ಕೆ ಸವಾಲು

    ಚಂದ್ರನ ಪರಿಶೋಧನೆಗಾಗಿ ಭಾರತದ ಮೂರನೇ ಕಾರ್ಯಾಚರಣೆಯಾದ ಚಂದ್ರಯಾನ-3, ನಿಗದಿತ ಉಡಾವಣಾ ಸಮಯದ ಪ್ರಕಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ.ಈ ಕಾರ್ಯಾಚರಣೆಯು ಯಶಸ್ವಿಯಾದರೆ ಚಂದ್ರನ ಮೇಲ್ಮೈಯಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಲಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ನೌಕೆ ಇಳಿಸಿದ ರಾಷ್ಟ್ರಗಳಾಗಿವೆ. ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತ ಮತ್ತು ಮೃದುವಾದ ಲ್ಯಾಂಡಿಂಗ್ (ಅವರೋಹಣ) ಯಶ ಕಂಡರೆ ಅದು ದೇಶದ ಸಾಮರ್ಥ್ಯವನ್ನು ಪ್ರದರ್ಶಿಸಿದಂತಾಗುತ್ತದೆ. ಭಾರತ ಯಶಸ್ಸು ಸಾಧಿಸಿದರೆ ವಿಶಿಷ್ಟವಾದ ದಾಖಲೆಯೊಂದನ್ನು ಬರೆದಂತಾಗುತ್ತದೆ. ಪ್ರಸ್ತುತ ಚಂದ್ರಯಾನ-3 ಮಿಷನ್ ಕೂಡ ಚಂದ್ರಯಾನ- 2ರೀತಿಯಲ್ಲಿಯೇ ಚಂದ್ರನ ದಕ್ಷಿಣ ಧ್ರುವಕ್ಕೆ ಸಾಗಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶವು ಜಟಿಲವಾಗಿದೆ. ಅನೇಕ ಭಾಗಗಳು ಸಂಪೂರ್ಣವಾಗಿ ಕತ್ತಲೆಮಯವಾಗಿವೆ. ಇಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ. ತಾಪಮಾನವು 230 ಡಿಗ್ರಿ ಸೆಲ್ಸಿಯಸ್​ಗಿಂತ ಕಡಿಮೆಯಾಗಿರುತ್ತದೆ. ಸೂರ್ಯನ ಬೆಳಕಿನ ಕೊರತೆ ಮತ್ತು ಅತ್ಯಂತ ಕಡಿಮೆ ತಾಪಮಾನದ ಕಾರಣದಿಂದಾಗಿ ನೌಕೆಯ ಉಪಕರಣಗಳ ಕಾರ್ಯಾಚರಣೆಯಲ್ಲಿ ತೊಂದರೆ ಉಂಟು ಮಾಡುತ್ತದೆ. ಹೀಗಾಗಿ, ಈ ಯಾನವು ಸವಾಲಿನಿಂದ ಕೂಡಿದೆ. ಎಲ್ಲವೂ ಸರಿಯಾಗಿ ಸಾಗಿದರೆ, ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿದೆ ವಿಶ್ವದ ಮೊದಲ ನೌಕೆ ಭಾರತದ್ದು ಎಂಬ ಹೆಮ್ಮೆ ನಮ್ಮದಾಗಲಿದೆ.

    ಮಾಜಿ ಪ್ರಧಾನಿಗಳ ದೂರದೃಷ್ಟಿ

    ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಉಡಾವಣೆ ಆಗಿರುವುದು ದೇಶದ ಹೆಮ್ಮೆ ಎಂದಿರುವ ಕಾಂಗ್ರೆಸ್, ಈ ಯೋಜನೆಯು ಸಾಕಾರವಾಗಲು ಹಿಂದಿನ ಪ್ರಧಾನಿಗಳ ದೂರದೃಷ್ಟಿಯೂ ಕಾರಣ ಎಂದಿದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ 1960ರ ದಶಕದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿದ್ದು ಕಾಂಗ್ರೆಸ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚಂದ್ರಯಾನ-3 ಯಶಸ್ವಿ ಉಡಾವಣೆಗೆ ಪಕ್ಷಾತೀತವಾಗಿ ಶ್ಲಾಘನೆ ವ್ಯಕ್ತವಾಗಿದೆ.

    ಉಡಾವಣೆಗೆ ಸಾವಿರಾರು ಜನ ಸಾಕ್ಷಿ

    ಚಂದ್ರಯಾನ-3 ಗಗನನೌಕೆಯ ಉಡಾವಣೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ (ಎಸ್​ಡಿಎಸ್​ಸಿ)10 ಸಾವಿರಕ್ಕೂ ಹೆಚ್ಚು ಜನ ಪ್ರತ್ಯಕ್ಷ ಸಾಕ್ಷಿಯಾದರೆ, ಲಕ್ಷಾಂತರ ಜನ ಟಿವಿ, ಇನ್ನಿತರ ಮಾಧ್ಯಮಗಳ ಮೂಲಕ ವೀಕ್ಷಿಸಿದರು. ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಜನರಿಗೆ ಎಸ್​ಡಿಎಸ್​ಇ ಎರಡನೇ ಉಡಾವಣಾ ಸ್ಥಳದಿಂದ (ಲಾಂಚ್​ಪ್ಯಾಡ್) ಆರು ಕಿ.ಮೀ. ದೂರದಲ್ಲಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಪ್ರತಿ ನೂರು ಮೀಟರ್​ಗೆ

    ಪೊಲೀಸ್ ಕಾವಲನ್ನು ಹಾಕಲಾಗಿತ್ತು. ಈ ಉಡಾವಣೆಯು ಭಾರತ ಭವ್ಯತೆಯು ಗರಿಷ್ಠವಾದ ಕ್ಷಣ ಮತ್ತು ಇದಕ್ಕಾಗಿ ಶ್ರೀಹರಿಕೋಟಾದಲ್ಲಿ ಶ್ರಮಿಸಿದವರೆಲ್ಲರ ಕ್ಷಣ ಎಂದು ಉಡಾವಣೆಯನ್ನು ಖುದ್ದು ವೀಕ್ಷಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬಣ್ಣಿಸಿದ್ದಾರೆ. ಸಚಿವ ಸಿಂಗ್ ಜತೆ ಇಸ್ರೋದ ಮಾಜಿ ಅಧ್ಯಕ್ಷರು, ಹಿರಿಯ ವಿಜ್ಞಾನಿಗಳು ಇದ್ದರು. ರಾಕೆಟ್ ಭೂಕಕ್ಷೆ ದಾಟುತ್ತಿದ್ದಂತೆ ಪರಸ್ಪರ ಸಂತಸ ಹಂಚಿಕೊಂಡರು.

    ಎಲ್​ಎಂವಿ-3ಗೆ 6ನೇ ಉಡಾವಣೆ: ಎಲ್​ಎಂವಿ-3 ರಾಕೆಟ್​ಗೆ ಇದು ಆರನೇ ಯಶಸ್ವಿ ಉಡಾವಣೆ ಯಾಗಿದ್ದು, ಅತ್ಯಂತ ಸಂಕೀರ್ಣ ಗಗನಯೋಜನೆಗಳನ್ನು ಹೊತ್ತೊಯ್ಯುವಲ್ಲಿ ತಾನು ಸಮರ್ಥ ಎಂಬುದನ್ನು ಈ ರಾಕೆಟ್ ಮತ್ತೊಮ್ಮೆ ಸಾಬೀತು ಮಾಡಿದೆ. ಬಹು ಸ್ಯಾಟಲೈಟ್​ಗಳನ್ನು ಅವುಗಳ ಕಕ್ಷೆಗೆ ನಿಖರವಾಗಿ ಸೇರಿಸಿದೆ. ವಿಶ್ವದಲ್ಲೇ ಅತಿದೊಡ್ಡ ಮತ್ತು ಅತಿ ಭಾರದ ಉಡಾವಣಾ ವಾಹಕವಾಗಿರುವ ಈ ರಾಕೆಟ್ ವಿದೇಶಿ ಸ್ಯಾಟಲೈಟ್​ಗಳನ್ನು ನಭಕ್ಕೆ ಸಾಗಿಸಿದೆ.

    ಸದನದ ಹಾರೈಕೆ

    ಬೆಂಗಳೂರು: ಚಂದ್ರಯಾನ-3ಕ್ಕೆ ವಿಧಾನಸಭೆ ಶುಭ ಕೋರಿದೆ. ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ಸುರೇಶ್ ಕುಮಾರ್, ಖುಷಿಯ ಸಂದರ್ಭದಲ್ಲಿ ಶುಭ ಹಾರೈಸಬೇಕೆಂಬ ಅಪೇಕ್ಷೆಯನ್ನು ವ್ಯಕ್ತ ಮಾಡಿದರು. ಇದೇ ವೇಳೆ ಸ್ಪೀಕರ್ ಯು.ಟಿ.ಖಾದರ್ ಪ್ರಕಟಣೆ ನೀಡಿ, ಮಹತ್ವಾಕಾಂಕ್ಷಿಯ ಚಂದ್ರಯಾನ ಯಶಸ್ವಿಯಾಗಲಿ ಎಂದು ರಾಜ್ಯದ ಪರವಾಗಿ ಶುಭ ಹಾರೈಸೋಣ ಎಂದರು. ಸದಸ್ಯರೆಲ್ಲರೂ ಮೇಜು ತಟ್ಟಿ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು.

    ಕೋವಿಡ್​ನಿಂದ ವಿಳಂಬ: 2021ರಲ್ಲಿಯೇ ಚಂದ್ರಯಾನ -3ರ ಉಡಾವಣೆ ಕೈಗೊಳ್ಳಲು ಯೋಜಿಸಲಾಗಿತ್ತು. ಇದಕ್ಕಾಗಿ ತಯಾರಿಯನ್ನು 2020ರ ಜನವರಿ ಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕ ಹರಡಿದ ಪರಿಣಾಮವಾಗಿ ಈ ಯೋಜನೆ ವಿಳಂಬವಾಯಿತು.

    ತಂಡದಲ್ಲಿ ಮಂಗಳೂರು ವಿಜ್ಞಾನಿ: ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎಲ್​ವಿಎಂ 3ಎಂ4 ಮೂಲಕ ಶುಕ್ರವಾರ ಮಧ್ಯಾಹ್ನ 2.35ಕ್ಕೆ ಉಡಾವಣೆಗೊಂಡ ಐತಿಹಾಸಿಕ ಚಂದ್ರಯಾನ-3 ತಂಡದಲ್ಲಿರುವ ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಸುಮನಾ ವಾಲ್ಕೆ ಮಂಗಳೂರು ನಿವಾಸಿ. ಇವರು ಮಂಗಳೂರು ಕೆನರಾ ಪಪೂ ಕಾಲೇಜು ಹಳೇ ವಿದ್ಯಾರ್ಥಿನಿ.

    ಬೆಳಗಾವಿಯ ಯುವವಿಜ್ಞಾನಿ: ಚಂದ್ರನ ಮೇಲ್ಮೈ ಅಧ್ಯಯನ ಕೈಗೊಳ್ಳುವ ಉದ್ದೇಶ ದಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ‘ಚಂದ್ರಯಾನ-3’ರಲ್ಲಿ ಬೆಳಗಾವಿ ಜಿಲ್ಲೆಯ ಯುವ ವಿಜ್ಞಾನಿ ಕೊಡುಗೆಯೂ ಇದೆ. ರಾಜ್ಯದ ಗಡಿಭಾಗದ ಕಾಡಿನಂಚಿನಲ್ಲಿರುವ ಖಾನಾಪುರ ತಾಲೂಕಿನ ಅನಗಡಿ ಗ್ರಾಮದ ಪ್ರಕಾಶ ಪೆಡ್ನೇಕರ್ ಅವರು ಮಾನವರಹಿತ ಚಂದ್ರಯಾನ-3 ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಇಸ್ರೋ ವಿಜ್ಞಾನಿಗಳು ಹಾಗೂ ತಂತ್ರಜ್ಞರ ತಂಡದಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts