More

    ಪಂಚಲೋಹದ ಸ್ವರ್ಣಲೇಪಿತ ಚಾಮುಂಡೇಶ್ವರಿ ವಿಗ್ರಹ : ಗೌಡಗೆರೆಯಲ್ಲಿ 60 ಅಡಿ ಎತ್ತರದ ವಿಗ್ರಹ, ನಿರ್ಮಾಣ ಕಾರ್ಯ ಪ್ರಗತಿ ಚನ್ನಪಟ್ಟಣ ತಾಲೂಕಿಗೆ ಮತ್ತೊಂದು ಹೆಗ್ಗಳಿಕೆ

    ಚನ್ನಪಟ್ಟಣ : ಬೊಂಬೆನಾಡು ಚನ್ನಪಟ್ಟಣ ಹಲವು ಕಾರಣಗಳಿಂದಾಗಿ ಇಡೀ ಜಿಲ್ಲೆಯಲ್ಲಿ ವಿಶೇಷ ಸ್ಥಾನ ಪಡೆದಿದೆ. ಇಲ್ಲಿ ತಯಾರಾಗುವ ಬಣ್ಣದ ಗೊಂಬೆಗಳಿಂದಾಗಿ ವಿಶ್ವಪ್ರಸಿದ್ಧಿ ಪಡೆದಿದೆ. ಇದೀಗ ತಾಲೂಕು ಮತ್ತೊಂದು ಗರಿಯನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ.
    ಅದುವೇ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ ಚಾಮುಂಡೇಶ್ವರಿ, ಬಸವಪ್ಪ ಪುಣ್ಯಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವದ ಅತಿದೊಡ್ಡ ಚಾಮುಂಡೇಶ್ವರಿ ದೇವಿಯ ಸ್ವರ್ಣಲೇಪಿತ ಪಂಚಲೋಹದ ವಿಗ್ರಹ.

    ಹೌದು, ಶ್ರೀ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಈ ಬೃಹತ್ ವಿಗ್ರಹ ಇಡೀ ವಿಶ್ವದಲ್ಲೇ ಮೊದಲನೆಯದು ಎಂಬ ಖ್ಯಾತಿಯನ್ನು ಹೊಂದಲಿದ್ದು, 60 ಅಡಿ ಎತ್ತರದ ಚಾಮುಂಡೇಶ್ವರಿ ವಿಗ್ರಹದ ಕಾಮಗಾರಿ ಭರದಿಂದ ಸಾಗಿದೆ. ಪಂಚ ಲೋಹ (ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ ಹಾಗೂ ಕಂಚು) ಬಳಸಿ ವಿಗ್ರಹ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ 20 ಅಡಿ ಎತ್ತರದ ಪೀಠದ ಕಾರ್ಯ ಮುಗಿದು ದೇವಿಯ ಪಾದ ಪ್ರತಿಷ್ಠಾಪನೆ ನೇರವೇರಿಸಲಾಗಿದೆ. 30ಕ್ಕೂ ಹೆಚ್ಚು ನುರಿತ ಕಲಾವಿದರು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

    ದೇವಿಯ 60 ಅಡಿ ಎತ್ತರದ 18 ಭುಜಗಳ ಸಿಂಹ ವಾಹನಾರೂಢ ಪಂಚಲೋಹದ ವಿಗ್ರಹ ದೇಶದ ಅತಿದೊಡ್ಡ ವಿಗ್ರಹವಾಗಲಿದೆ. 35 ಟನ್ ತೂಕವಿರುವ ಈ ವಿಗ್ರಹ ನಿರ್ಮಾಣ ಕಾರ್ಯ ಶೇ.30ರಷ್ಟು ಮುಗಿದಿದ್ದು, ಈ ವರ್ಷದ ಕೊನೆಯಲ್ಲಿ ಲೋಕಾರ್ಪಣೆಯಾಗಲಿದೆ. ವಿಗ್ರಹವನ್ನು ರಾಜ್ಯ ಹಾಗೂ ತಮಿಳುನಾಡಿನ ಶಿಲ್ಪಿಗಳು ತಯಾರಿಸುತ್ತಿದ್ದು, ಸುಂದರವಾದ ವಿಗ್ರಹದ ಮಾದರಿ ಈಗಾಗಲೇ ಭಕ್ತರ ಮನಸೆಳೆಯುತ್ತಿದೆ.

    ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಕನಸಿನ ಕೂಸು: ಕ್ಷೇತ್ರದಲ್ಲಿ ಚಾಮುಂಡೇಶ್ವರಿ ವಿಗ್ರಹ ಪ್ರತಿಷ್ಠಾಪಿಸುವುದು ಕ್ಷೇತ್ರದ ಧರ್ಮದರ್ಶಿಗಳಾದ ಡಾ. ಮಲ್ಲೇಶ್ ಗುರೂಜಿಯವರ ಕನಸಾಗಿತ್ತು. ಚಾಮುಂಡೇಶ್ವರಿ ಆರಾಧಕರಾದ ಇವರಿಗೆ ಹಲವು ವರ್ಷಗಳಿಂದ ತಾಯಿಯ ಪ್ರತಿಮೆ ನಿರ್ಮಿಸುವ ಸಂಕಲ್ಪ ಇತ್ತು. ಆರಂಭದಲ್ಲಿ ಸಣ್ಣದಾಗಿ ವಿಗ್ರಹ ನಿರ್ಮಿಸಲು ಚಿಂತನೆ ನಡೆಸಿದ ಇವರು, ಇದಕ್ಕಾಗಿ ಹಲವಾರು ಪ್ರತಿಮೆಗಳನ್ನು ವೀಕ್ಷಿಸಿ ಬಂದಿದ್ದರು. ಆದರೆ, ಇತಿಹಾಸ ನಿರ್ಮಿಸುವ ಉದ್ದೇಶದಿಂದ, ತಾಲೂಕಿನ ಕೀರ್ತಿಯನ್ನು ಪಸರಿಸುವ ಉದ್ದೇಶದಿಂದ ಬಹುಕೋಟಿ ವೆಚ್ಚದ ಈ ಬೃಹತ್ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿಸುತ್ತಿದ್ದಾರೆ.

    ಪವಾಡ ಬಸವಪ್ಪ, ಚಾಮುಂಡೇಶ್ವರಿ ಮಹಿಮೆ :  ಚನ್ನಪಟ್ಟಣದಿಂದ 15 ಕಿ.ಮೀ. ದೂರದಲ್ಲಿರುವ ಗೌಡಗೆರೆ ಗ್ರಾಮದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ಹಾಗೂ ಜೀವಂತ ಬಸವಪ್ಪನ ಮಹಿಮೆ ಅಪಾರ. ಚಾಮುಂಡೇಶ್ವರಿ ದೇವಿ ಹಾಗೂ ಬಸವಪ್ಪನ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಚಾಮುಂಡೇಶ್ವರಿ ಈ ಕ್ಷೇತ್ರದಲ್ಲಿ ನೆಲೆಸಿರುವ ಇತಿಹಾಸವೇ ರೋಚಕವಾಗಿದ್ದು, ಇಲ್ಲಿಗೆ ಭೇಟಿ ನೀಡುವ ಭಕ್ತರ ಪಾಲಿನ ಸಂಕಷ್ಟಗಳು ನಿವಾರಣೆಯಾಗಲಿವೆ. ಇಲ್ಲಿರುವ ಜೀವಂತ ಬಸವಪ್ಪನ ಅಭಯ ಬೇಡಿದರೆ ಬೆಟ್ಟದಂತಹ ಸಮಸ್ಯೆಗಳು ನಿರಾಳವಾಗಿ ಸರಿಯಲಿವೆ. ಬಸವಪ್ಪನ ಪವಾಡಗಳು ಲೆಕ್ಕವಿಲ್ಲದಂತಿದ್ದು, ಈಗಾಗಲೇ ಈ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಇದೀಗ ನಿರ್ಮಾಣವಾಗುತ್ತಿರುವ ಬೃಹತ್ ಸ್ವರ್ಣಲೇಪಿತ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹ ಇಲ್ಲಿನ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಲಿದೆ.

     

     

    ಭಕ್ತರಿಂದ ಲೋಹ ವಸ್ತುಗಳ ಸ್ವೀಕಾರ : 35 ಟನ್‌ಗೂ ಹೆಚ್ಚಿನ ತೂಕವಿರುವ ಈ ಸ್ವರ್ಣಲೇಪಿತ ವಿಗ್ರಹ ನಿರ್ಮಾಣಕ್ಕೆ ಭಕ್ತರಿಂದ ಹಳೆಯ ಲೋಹ ವಸ್ತುಗಳನ್ನು ಕಾಣಿಕೆಯಾಗಿ ಪಡೆಯಲಾಗುತ್ತಿದೆ. ಭಕ್ತರು ತಮ್ಮಲ್ಲಿರುವ ಲೋಹಗಳ ಪಾತ್ರೆಗಳನ್ನು ಕ್ಷೇತ್ರಕ್ಕೆ ತಂದು ಅರ್ಪಿಸುತ್ತಿದ್ದಾರೆ. ಇದರೊಂದಿಗೆ ಹಲವು ಭಕ್ತರು ಉದಾರವಾಗಿ ಕಾಣಿಕೆಯನ್ನೂ ನೀಡಿದ್ದಾರೆ. ಈ ವರ್ಷದ ಅಂತ್ಯಕ್ಕೆ ವಿಗ್ರಹ ಲೋಕಾಪರ್ಣೆಯಾಗಲಿದೆ.

    ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಚಾಮುಂಡೇಶ್ವರಿ ವಿಗ್ರಹ ತಾಲೂಕು ಹಾಗೂ ಇಡೀ ದೇಶದ ಗಮನಸೆಳೆಯಲಿದೆ. ಮೊದಲು ಸಣ್ಣ ವಿಗ್ರಹ ನಿರ್ಮಾಣ ಮಾಡಲು ನಿರ್ಧರಿಸಲಾಗಿತ್ತು. ಆದರೆ, ದೇವಿಯ ಅನುಗ್ರಹದಿಂದ ವಿಶ್ವದಲ್ಲೇ ಮೊದಲನೆಯದು ಎಂಬ ಹೆಗ್ಗಳಿಕೆ ಹೊಂದುವ ಉದ್ದೇಶದೊಂದಿಗೆ ಬೃಹತ್ ವಿಗ್ರಹ ಪ್ರತಿಷ್ಠಾಪನೆಗೆ ಮುಂದಾದೆವು. ಈ ಮಹಾತ್ಕಾರ್ಯಕ್ಕೆ ಭಕ್ತಗಣವೂ ಸಾಥ್ ನೀಡಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗಿದ್ದು, ಕೆಲವೇ ತಿಂಗಳುಗಳಲ್ಲಿ ಲೋಕಾಪರ್ಣೆಯಾಗಲಿದೆ.
    ಡಾ. ಮಲ್ಲೇಶ್ ಗುರೂಜಿ
    ಧರ್ಮಧರ್ಶಿಗಳು ಶ್ರೀ ಕ್ಷೇತ್ರ.

    ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಪಂಚಲೋಹದ ವಿಗ್ರಹ, ರಾಜ್ಯ ಹಾಗೂ ತಾಲೂಕಿನ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲಿದೆ. ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಭಕ್ತರು ಈ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈಗಾಗಲೇ ಕ್ಷೇತ್ರ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಭಕ್ತರ ಸಂಕಷ್ಟಗಳನ್ನು ಪವಾಡ ರೀತಿಯಲ್ಲಿ ತಾಯಿ ಚಾಮುಂಡೇಶ್ವರಿ ನಿವಾರಿಸುತ್ತಿದ್ದು, ಕೆಲ ತಿಂಗಳುಗಳಲ್ಲಿ ಸುಂದರವಾದ ಚಾಮುಂಡೇಶ್ವರಿ ವಿಗ್ರಹ ತಲೆ ಎತ್ತಲಿದೆ.
    ಬಾಬು ಗೌಡಗೆರೆ, ದೇಗುಲದ ಟ್ರಸ್ಟಿ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts