More

    ವಿಜೃಂಭಣೆಯ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ

    ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಅಪಾರ ಜನಸ್ತೋಮದ ನಡುವೆ ಶ್ರೀ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ಜರುಗಿತು.

    ಗ್ರಾಮದ ಶ್ರೀನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ಮುಂಜಾನೆಯೇ ನಂದಿ ಧ್ವಜ, ಸತ್ತಿಗೆ, ಸೂರಿಪಾಣಿ, ಮಂಗಳವಾದ್ಯ ಹಾಗೂ ವೀರಮಕ್ಕಳ ಕುಣಿತ ಸಮೇತ ಬೆಳಿಗ್ಗೆ 10ಗಂಟೆಯಲ್ಲಿ ತೇರು ಮುಂದಡಿ ಇಟ್ಟಿತು. ಗ್ರಾಮದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಮಧ್ಯಾಹ್ನ 12.45ರಲ್ಲಿ ಸ್ವಸ್ಥಾನವನ್ನು ತಲುಪಿತು. ಜಯ ಘೋಷಗಳೊಂದಿಗೆ ರಥ ಎಳೆಯಲು ಭಕ್ತರು ಮುಗಿಬಿದ್ದರು. ಬಾಳೆಹಣ್ಣು, ವೀಳ್ಯದೆಲೆ ಎಸೆದು ನಮಿಸಿದರು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ , ಪಂಚಾಮೃತವನ್ನು ವಿತರಿಸಲಾಯಿತು. ಭಾನುವಾರ ಬೆಳಗಿನಜಾವ ಶ್ರೀಲಕ್ಷ್ಮೀ ದೇವಿ ಜಾತ್ರೆ ಉರುಳುಸೇವೆಯೊಂದಿಗೆ ಪ್ರಾರಂಭವಾಗಿ ಇಡೀ ರಾತ್ರಿ ನಾನಾ ಧಾರ್ಮಿಕ ಕಾರ್ಯ ಹಾಗೂ ಅದ್ದೂರಿ ಮೆರವಣಿಗೆ ಜರುಗಿತು.

    ಸೋಮವಾರ ನಸುಕಿನಲ್ಲಿ ಲಕ್ಷ್ಮೀ ದೇವಿ ದೇವಸ್ಥಾನ ಮುಂಭಾಗ ಕೊಂಡೋತ್ಸವ ನಡೆಯಿತು.ಈ ವೇಳೆ ವೈವಿಧ್ಯಮಯ ಪಟಾಕಿ ಸಿಡಿಸಿ ಬಾಣ ಬಿರುಸುಗಳನ್ನು ಹಾರಿಸಲಾಯಿತು. ಬಳಿಕ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ನಡೆಯಿತು. ಇದರೊಂದಿಗೆ ಎರಡುದಿನಗಳ ಜಾತ್ರೆ ಸಂಪನ್ನಗೊಂಡಿತು. ಬಿ.ಮಲ್ಲಯ್ಯನಪುರ, ಮೇಗಲಹುಂಡಿ, ಕೆರೆಹಳ್ಳಿ, ಹೆಗ್ಗವಾಡಿ, ಭುಜಗನಪುರ, ಪಾಳ್ಯ, ಮುತ್ತಿಗೆ ಹಾಗೂ ಸುತ್ತಮುತ್ತಲ ಗ್ರಾಮಗಳವರು ಭಾಗವಹಿಸಿದ್ದರು. ಜಾತ್ರೆ ಪ್ರಯುಕ್ತ ಗ್ರಾಮದ
    ತಾವರೆಕೆರೆ ಏರಿ ಉದ್ದಕ್ಕೂ ಕಣ್ಮನ ಸೆಳೆಯುವಂತೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts