More

    ಜಿಲ್ಲೆಯ ಅವಳಿ ಜಲಾಶಯಗಳಿಗೆ ಜೀವಕಳೆ

    ಚಾಮರಾಜನಗರ: ತಮಿಳುನಾಡಿನ ಆಗ್ನೇಯ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಿರುವ ಪರಿಣಾಮವಾಗಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಅವಳಿ ಜಲಾಶಯಗಳಿಗೆ ಜೀವಕಳೆ ಬಂದಂತಾಗಿದೆ.

    ತಮಿಳುನಾಡಿನ ದಿಂಬಂ, ಬೇಡಗುಳಿ, ತಾಳವಾಡಿ, ಸೇರಿದಂತೆ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಳೆದ ಎರಡು ದಿನಗಳಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಸುವರ್ಣಾವತಿ ಜಲಾಶಯದ ಗರಿಷ್ಠ ಮಟ್ಟ ಸಮುದ್ರಮಟ್ಟದಿಂದ 2455 ಅಡಿ ಹಾಗೂ ಚಿಕ್ಕ ಹೊಳೆ ಜಲಾಶಯ ಗರಿಷ್ಠ ಮಟ್ಟ 2474 ಅಡಿ ಇದೆ. ಈಗಾಗಲೇ ಸುವರ್ಣಾವತಿ ಜಲಾಶಯಕ್ಕೆ 1 ಅಡಿಯಷ್ಟು ಹಾಗೂ ಚಿಕ್ಕಹೊಳೆ ಜಲಾಶಯಕ್ಕೆ 1.5 ಅಡಿಯಷ್ಟು ನೀರು ಬಂದಿದೆ. ಈಗೆಯೇ ಬಿಆರ್‌ಟಿ ಅರಣ್ಯ ಪ್ರದೇಶ ಹಾಗು ತಾಳವಾಡಿ ಭಾಗದಲ್ಲಿ ನಿರಂತರವಾಗಿ ಮಳೆಯಾದರೇ ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಎರಡು ಜಲಾಶಯಗಳಿಗೂ ನೀರು ಹರಿದು ಬರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

    ಸುವರ್ಣಾವತಿ ಮತ್ತು ಚಿಕ್ಕಹೊಳೆ ಅವಳಿ ಜಲಾಶಯಗಳು ಸಾಮಾನ್ಯವಾಗಿ ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಭರ್ತಿಯಾಗುತ್ತದೆ. ಆದರೆ 2022 ರಲ್ಲಿ ಇದೇ ರೀತಿಯಲ್ಲಿ ಸತತವಾಗಿ ಮಳೆಯಾಗಿದ್ದ ಪರಿಣಾಮವಾಗಿ ಮೇ ತಿಂಗಳಲ್ಲೇ ಎರಡು ಜಲಾಶಯಗಳು ಭರ್ತಿಯಾಗಿತ್ತು. 1000 ಕ್ಕಿಂತಲೂ ಹೆಚ್ಚು ಕ್ಯೂಸೆಕ್ ನೀರನು ಏಕಕಾಲದಲ್ಲಿ ಎರಡು ಜಲಾಶಯಗಳಿಂದ ನದಿ ಹಾಗೂ ಕಾಲುವೆಗೆ ಹರಿಬಿಡಲಾಗಿತ್ತು. ಪೂರ್ವ ಮುಂಗಾರಿನಲ್ಲಿ ಉತ್ತಮ ಮಳೆಯಾಗಿರುವುದು ಮತ್ತು ಈ ಬಾರಿ ಕೇರಳಾ ರಾಜ್ಯಕ್ಕೆ ಬೇಗನೇ ಮುಂಗಾರು ಆಗಮನವಾಗುವುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಂತೆಯೇ ಆದರೆ ಚಾಮರಾಜನಗರ, ಯಳಂದೂರು ತಾಲೂಕಿನ ರೈತರ ಜೀವನಾಡಿಯಾಗಿರುವ ಅವಳಿ ಜಲಾಶಯಗಳು ಭರ್ತಿಯಾಗುವ ನಿರೀಕ್ಷೆ ಇದ್ದು, ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.

    ಚಿಕ್ಕಹೊಳೆಗೆ 185 ಕ್ಯೂಸೆಕ್ ಒಳಹರಿವು:
    ತಮಿಳುನಾಡಿನ ದಿಂಬಂ, ಬಣ್ಣಾರಿ, ಬೂದಿ ಪಡುಗ, ಕೂಡ್ಲೂರು, ಹೊನ್ನಮೇಟಿ ಹಾಗೂ ಇನ್ನಿತರೆ ಬಿಆರ್‌ಟಿ ಅರಣ್ಯ ಪ್ರದೇಶ ಜಲಾನಯನ ಪ್ರದೇಶ ಹಾಗೂ ಗಡಿಪ್ರದೇಶವಾಗಿರುವ ತಾಳವಾಡಿ, ಇಗ್ಗಳೂರು, ಧರ್ಮಪುರ, ಚಿಕ್ಕಹಳ್ಳಿ, ತಿಗನಾರೆ, ತಲಮಲೈ, ಕೊಂಗಳ್ಳಿ ಬೆಟ್ಟ ಹಾಗೂ ಇನ್ನಿತರೆ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವ ಪರಿಣಾಮವಾಗಿ ಈ ವರೆಗೆ ಚಿಕ್ಕಹೊಳೆ ಜಲಾಶಯಕ್ಕೆ 185 ಕ್ಯೂಸೆಕ್ ಮತ್ತು ಸುವರ್ಣಾವತಿ ಜಲಾಶಯಕ್ಕೆ 140 ಕ್ಯೂಸೆಕ್ ನೀರು ಹರಿದುಬಂದಿದೆ. ಸುವರ್ಣಾವತಿ ಜಲಾಶಯದ ಗರಿಷ್ಠಮಟ್ಟ 2455 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 2433 ಅಡಿಯಷ್ಟಿದೆ. ಚಿಕ್ಕಹೊಳೆ ಜಲಾಶಯದ ಗರಿಷ್ಠಮಟ್ಟ 2474 ಅಡಿ ಇದ್ದು, ಪ್ರಸ್ತುತ ನೀರಿನ ಮಟ್ಟ 2455 ಅಡಿಯಷ್ಟಿದೆ. ಅವಳಿ ಜಲಾಶಗಳು ಭರ್ತಿಯಾಗಬೇಕಾದರೆ ಸುವರ್ಣಾವತಿ 21 ಅಡಿ ಮತ್ತು ಚಿಕ್ಕಹೊಳೆ 19 ಅಡಿಯಷ್ಟು ಬಾಕಿ ಇದೆ. ಇದೇ ರೀತಿಯಲ್ಲಿ ನಿರಂತರವಾಗಿ ಮಳೆಯಾದರೇ ಅವಧಿಗೂ ಮುನ್ನಾ ಜಲಾಶಯಗಳು ಭರ್ತಿಯಾದರೂ ಆಶ್ಚರ್ಯ ಪಡಬೇಕಿಲ್ಲ.

    ಸುಮಾರು 13 ಬೃಹತ್ ಕೆರೆಗಳಿಗೆ ಆಧಾರ:
    ಜಿಲ್ಲೆಯ ಅವಳಿ ಜಲಾಶಯಗಳಾದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಗಳು ಚಾಮರಾಜನಗರ ಮತ್ತು ಯಳಂದೂರು ತಾಲೂಕಿನ ಸುಮಾರು 13 ಬೃಹತ್ ಕೆರೆಗಳಿಗೂ ಆಧಾರವಾಗಿದೆ. ದೊಡ್ಡಕೆರೆ, ಚಿಕ್ಕಕೆರೆ, ಬಂಡಿಗೆರೆ, ಸಿಂಡಿಗೆರೆ, ಅಗರದ ಕೆರೆ, ಹೆಬ್ಬಾಳ, ನಾಗವಳ್ಳಿ ಕೆರೆ, ಪುಟ್ಟನಪುರ ಕೆರೆ, ಮಲ್ಲೇದೇವನಹಳ್ಳಿ ಕೆರೆ, ಕಾಗಲವಾಡಿ ಕೆರೆ, ಹೊಮ್ಮದ ಕೆರೆ ಹಾಗೂ ಸರಗೂರುಮೋಳೆ ಕೆರೆಗಳು ಈ ಜಲಾಶಗಳ ವ್ಯಾಪ್ತಿಗೆ ಬರುತ್ತದೆ. ಸುವರ್ಣಾವತಿ 6400 ಎಕರೆ ಹಾಗೂ ಚಿಕ್ಕಹೊಳೆ 4000 ಎಕರೆ ಅಚ್ಚುಕಟ್ಟು ಪ್ರದೇಸವನ್ನು ಒಳಗೊಂಡಿದೆ. ಈ ಕೆರೆಗಳು ಭರ್ತಿಯಾದರೇ ಈ ಭಾಗದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದ್ದು, ಕೃಷಿ ಮತ್ತು ಕುಡಿಯುವ ನೀರಿನ ಪಂಪ್‌ಸೆಟ್‌ಗಳಿಗೂ ಬಲಬಂದಂತಾಗುತ್ತದೆ. ಈ ಭಾಗದ ಜನ-ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಈ ನಿಟ್ಟಿನಲ್ಲಿ ಅವಳಿ ಜಲಾಶಯಗಳು ಆದಷ್ಟು ಬೇಗ ಭರ್ತಿಯಾಗಲಿ ಎಂಬ ಆಶಯವನ್ನು ಈ ಭಾಗದ ರೈತಾಪಿವರ್ಗ ವ್ಯಕ್ತಪಡಿಸುತ್ತಿದೆ.

    2022 ರಲ್ಲಿ ಮೇ ತಿಂಗಳಲ್ಲೇ ಭರ್ತಿ:
    ತಮಿಳುನಾಡು ಹಾಗೂ ಬಿಆರ್‌ಟಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈಗ ಸುರಿಯುತ್ತಿರುವ ಮಳೆಯಂತೆ, 2022 ರಲ್ಲಿ ಅಸನಿ ಚಂಡಮಾರುತದ ಪರಿಣಾಮವಾಗಿ ನಿರಂತರವಾಗಿ ಮಳೆಯಾದ್ದರಿಂದ ಮೇ ತಿಂಗಳಲ್ಲೇ ಎರಡು ಜಲಾಶಗಳು ಭರ್ತಿಯಾಗಿತ್ತು. ತಲಾ 1.26 ಟಿಎಂಸಿ ನೀರು ತುಂಬುವ ಸಾಮರ್ಥ್ಯವನ್ನು ಹೊಂದಿರುವ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಏಕಕಾಲಕ್ಕೆ ಭರ್ತಿಯಾಗಿ ನೂರಾರು ಕ್ಯೂಸೆಕ್ ನೀರನ್ನು ನದಿ ಹಾಗೂ ಕಾಲುವೆ ಮೂಲಕ ಹೊರಬಿಡಲಾಗಿತ್ತು. ಆ ಸಂದರ್ಭದಲ್ಲಿ 13 ಕೆರೆಗಳು ಅಲ್ಲದೇ ಇನ್ನೂ ಅನೇಕ ಕೆರೆಗಳು ಭರ್ತಿಯಾಗಿ ಈ ಭಾಗದ ರೈತರಿಗೆ ವರದಾನವಾಗಿತ್ತು. ಅಂತೆಯೇ ಬಿಆರ್‌ಟಿ ಮತ್ತು ತಮಿಳುನಾಡಿನ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದರೇ ಅದು ಮರುಕಳಿಸಲಿದೆ.

    ಪ್ರಸ್ತುತ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಗಳಿಗೆ ಒಳಹರಿವು ಹೆಚ್ಚಾಗುತ್ತಿದೆ. ಅದು ನಿರಂತರವಾಗಿ ಮುಂದುವರಿಯ ಬೇಕಿದೆ. ದೊಡ್ಡ ಪ್ರಮಾಣದಲ್ಲಿ ಮಳೆಯಾದರೇ ಭರ್ತಿಯಾಗುವ ಸಾಧ್ಯತೆಗಳು ಇದೆ.
    -ಜಯರಾಮ್, ಎಇಇ, ಕಾವೇರಿ ನೀರಾವರಿ ನಿಗಮ, ಚಾಮರಾಜನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts