More

    ಶ್ರೀನಿವಾಸ್‌ಪ್ರಸಾದ್ ಬಹುಮುಖ ವ್ಯಕ್ತಿತ್ವದ ರಾಜಕಾರಣಿ

    ಚಾಮರಾಜನಗರ: ಬಹುಮುಖ ವ್ಯಕ್ತಿತ್ವದ ರಾಜಕಾರಣಿಯಾಗಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ಜಾತ್ಯಾತೀಯ ವ್ಯಕ್ತಿಯಾಗಿದ್ದು, ಎಲ್ಲ ಜನಾಂಗದವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿ.ಶ್ರೀನಿವಾಸಪ್ರಸಾದ್ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವಿ.ಶ್ರೀನಿವಾಸಪ್ರಸಾದ್ ಅವರು ಜಾತಿವಾದಿಯಾಗಿರಲಿಲ್ಲ. ನಾವೆಲ್ಲ ಅವರನ್ನು ಜಾತೀವಾದಿ ಮಾಡಲು ಯತ್ನಿಸಿದ್ದೆವು. ಆದರೆ, ಅವರು ತುಂಬಾ ಜಾತ್ಯಾತೀತತೆಯ ಮನಸ್ಥಿತಿ ಹೊಂದಿದ್ದರು. ರಾಜಕಾರಣದಲ್ಲಿ ಎಂದಿಗೂ ಜಾತೀವಾದಿಯಾಗಿ ನಡೆದುಕೊಂಡಿರಲಿಲ್ಲ. ಎಲ್ಲಾ ವರ್ಗಗಳ ಶೋಷಿತರ ಧ್ವನಿಯಾಗಿದ್ದರು. ಅವರು ಎಲ್ಲ ಜಾತಿಯವರನ್ನು ಪ್ರೀತಿಸುತ್ತಿದ್ದರು ಎಂದರು.

    ವಿ.ಶ್ರೀನಿವಾಸಪ್ರಸಾದ್ ಅವರ ರಾಜಕಾರಣ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು. ನೇರ, ನಿಷ್ಠುರ ವ್ಯಕ್ತಿಯಾಗಿದ್ದ ಪ್ರಸಾದ್ ಅವರು, ಆರ್‌ಎಸ್‌ಎಸ್‌ನಿಂದ ತಮ್ಮ ಸಾಮಾಜಿಕ, ಸಾರ್ವಜನಿಕ ಜೀವನ ಪ್ರಾರಂಭಿಸಿದ್ದರು. ಆರ್‌ಎಸ್‌ಎಸ್‌ನ ಮುಖ್ಯ ಶಿಕ್ಷಕರಾಗಿ 20 ವರ್ಷಗಳ ಕಾಲ ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ಪ್ರಾರಂಭವಾದ ಸಾಮಾಜಿಕ ಜೀವನ ಬಿಜೆಪಿಯಲ್ಲಿ ಮುಕ್ತಾಯ ಅಲ್ಲದೇ ಮುಂದುವರಿದಿದೆ. ಕಾಂಗ್ರೆಸ್, ಜೆಡಿಎಸ್, ಜೆಡಿಯುನಲ್ಲಿ ಇದ್ದರೂ ಕೊನೆಯಲ್ಲಿ ಉಳಿದಿದ್ದು ಬಿಜೆಪಿಯಲ್ಲಿ ಎಂದರು.

    ತಮ್ಮ 50 ವರ್ಷಗಳ ರಾಜಕಾರಣದಲ್ಲಿ ಶ್ರೀನಿವಾಸ್‌ಪ್ರಸಾದ್ ಅವರು ಭ್ರಷ್ಟಚಾರಿಯಾಗಿರಲಿಲ್ಲ. 6 ಬಾರಿ ಸಂಸದರಾಗಿ ಕೇಂದ್ರದಲ್ಲಿ ಸಚಿವರಾಗಿದ್ದರು. ಅಲ್ಲದೇ 2 ಬಾರಿ ಶಾಸಕರಾಗಿ ರಾಜ್ಯದಲ್ಲಿಯೂ ಕಂದಾಯ ಸಚಿವರಾಗಿದ್ದರು. ಇವತ್ತಿನ ಸಚಿವರ ರೀತಿ ಆಗಿದ್ದರೆ ಶ್ರೀನಿವಾಸಪ್ರಸಾದ್ ಬಳಿ ಅಪಾರ ಪ್ರಮಾಣದ ಆಸ್ತಿ, ಹಣ ಇರಬೇಕಿತ್ತು. ಅವರ ಆಸ್ತಿ ಎಲ್ಲರಿಗೂ ಗೊತ್ತು. ಯಾವುದನ್ನು ಮುಚ್ಚಿಟ್ಟುಕೊಂಡಿರಲಿಲ್ಲ ಎಂದು ತಿಳಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ವಿ.ಶ್ರೀನಿವಾಸಪ್ರಸಾದ್ ಅವರು ಬಿಜೆಪಿಯೊಂದಿಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದರು. ನಿಷ್ಠುರವಾಗಿ ಮಾತನಾಡುತ್ತಿದ್ದರು ಆದರೆ ಅಷ್ಠೆ ಪ್ರೀತಿ, ವಿಶ್ವಾಸದಿಂದ ಎಲ್ಲರನ್ನೂ ಕಾಣುತ್ತಿದ್ದರು. ಅವರ ಮೇರು ವ್ಯಕ್ತಿತ್ವದಿಂದ ಹಲವರಿಗೆ ಮಾರ್ಗದರ್ಶಕರಾಗಿದ್ದರು ಎಂದರು.

    ಕಾರ್ಯಕ್ರಮದಲ್ಲಿ ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಶಾಸಕರಾದ ಎಸ್.ಬಾಲರಾಜ್, ಹರ್ಷವರ್ಧನ್, ನಿಕಟಪೂರ್ವ ಅಧ್ಯಕ್ಷ ಆರ್.ಸುಂದರ್, ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ‌್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಮುಖಂಡ ಡಾ.ಮೋಹನ್, ಹನುಮಂತಶೆಟ್ಟಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಹಾಪ್ ಕಾಪ್ಸ್ ಅಧ್ಯಕ್ಷ ಲೋಕೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರ, ಮೂಡ್ನಾಕೂಡು ಪ್ರಕಾಶ್, ಮಾಜಿ ಚೂಡಾ ಅಧ್ಯಕ್ಷ ಕುಲಗಾಣ ಶಾಂತಮೂರ್ತಿ, ಬಾಲಸುಬ್ರಹ್ಮಣ್ಯಂ, ಎಸ್ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ನಗರ ಮಂಡಲ ಅಧ್ಯಕ್ಷ ಶಿವರಾಜ್ ಹಾಗು ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts